
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ (India vs South Africa) ಹೀನಾಯ ಸೋಲು ಅನುಭವಿಸಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಭಾರತ ತಂಡವನ್ನು 30 ರನ್‌ಗಳಿಂದ ಸೋಲಿಸಿತ್ತು. ಇದೀಗ ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನೂ ಸಹ ದಕ್ಷಿಣ ಆಫ್ರಿಕಾ ಗೆದ್ದುಕೊಂಡಿದೆ. ಈ ಮೂಲಕ ಬರೋಬ್ಬರಿ 25 ವರ್ಷಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಇತಿಹಾಸ ನಿರ್ಮಿಸಿರುವ ದಕ್ಷಿಣ ಆಫ್ರಿಕಾ ತಂಡ ಇದೀಗ ಏಕದಿನ ಸರಣಿಯ ಮೇಲೆ ಕಣ್ಣಿಟ್ಟಿದೆ. ಇತ್ತ ತವರಿನಲ್ಲಿ ಟೆಸ್ಟ್ ಸರಣಿ ಸೋತಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನು ಗೆದ್ದು, ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್ 30 ರಿಂದ ಆರಂಭವಾಗಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇದುವರೆಗೆ 94 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಟೀಂ ಇಂಡಿಯಾ 40 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 51 ಏಕದಿನ ಪಂದ್ಯಗಳನ್ನು ಗೆದ್ದಿದೆ. ಉಳಿದಂತೆ ಮೂರು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಅಂದರೆ ಅಂಕಿ ಅಂಶಗಳನ್ನು ನೋಡಿದರೆ, ಏಕದಿನ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ತಂಡ, ಭಾರತದ ಮೇಲೆ ಮೇಲುಗೈ ಸಾಧಿಸಿರುವುದನ್ನು ಗಮನಿಸಬಹುದಾಗಿದೆ.
ಏಕದಿನ ಸರಣಿಗೆ ಭಾರತ ತಂಡ: ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ರಿಷಭ್ ಪಂತ್ (ಉಪನಾಯಕ/ವಿಕೆಟ್ ಕೀಪರ್), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ಧ್ರುವ ಜುರೆಲ್ ಮತ್ತು ಅರ್ಶ್ದೀಪ್ ಸಿಂಗ್.
ದಕ್ಷಿಣ ಆಫ್ರಿಕಾದ ತಂಡ: ಟೆಂಬಾ ಬವುಮಾ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಜ್‌ಕೆ, ಡೆವಾಲ್ಡ್ ಬ್ರೂಯಿಸ್, ನಾಂಡ್ರೆ ಬರ್ಗರ್, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ರೂಬಿನ್ ಹರ್ಮನ್, ಕೇಶವ್ ಮಹಾರಾಜ್, ಮಾರ್ಕೊ ಯಾನ್ಸೆನ್, ಐಡೆನ್ ಮಾರ್ಕ್ರಾಮ್, ಲುಂಗಿ ಎನ್ಗಿಡಿ, ರಿಯಾನ್ ರಿಕೆಲ್ಟನ್, ಪ್ರೆನೆಲನ್ ಸುಬ್ರಾಯೆನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ