India vs Sri Lanka ODI Series 2023: ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಗಾಗಿ ಸಜ್ಜಾಗುತ್ತಿದೆ. ಮೂರು ಪಂದ್ಯಗಳ ಈ ಸರಣಿಯು ಜನವರಿ 10 ರಿಂದ ಶುರುವಾಗಲಿದೆ. ಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬುಮ್ರಾ ಈ ಸರಣಿಯ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಸರಣಿಯೊಂದಿಗೆ ಟೀಮ್ ಇಂಡಿಯಾದ ಏಕದಿನ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ. ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪೂರ್ವಭಾವಿಯಾಗಿ ಭಾರತ ತಂಡವು ಒಟ್ಟು 35 ಪಂದ್ಯಗಳನ್ನು ಆಡಲಿದೆ. ಇದರ ಮೊದಲ ಭಾಗವಾಗಿ ಇದೀಗ ಲಂಕಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಾಗಿಯೇ 2023ರ ಮೊದಲ ಏಕದಿನ ಸರಣಿಯು ಟೀಮ್ ಇಂಡಿಯಾ ಪಾಲಿಗೆ ಮಹತ್ವದೆನಿಸಿಕೊಂಡಿದೆ.
ಮೂರು ಪಂದ್ಯಗಳ ಸರಣಿಯ ಮೊದಲ ಮ್ಯಾಚ್ ಗೌಹಾಟಿಯಲ್ಲಿ ನಡೆಯಲಿದ್ದು, 2ನೇ ಪಂದ್ಯಕ್ಕೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯವಹಿಸಲಿದೆ. ಹಾಗೆಯೇ ಮೂರನೇ ಪಂದ್ಯವು ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯಲಿದೆ.
ಇನ್ನು ಟೀಮ್ ಇಂಡಿಯಾ ಏಕದಿನ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಹಾಗೆಯೇ ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಹಿರಿಯ ಆಟಗಾರರ ಕಂಬ್ಯಾಕ್ ಹಿನ್ನೆಲೆಯಲ್ಲಿ ಟಿ20 ತಂಡದಲ್ಲಿದ್ದ ಕೆಲ ಆಟಗಾರರು ಏಕದಿನ ಸರಣಿಗೆ ಆಯ್ಕೆಯಾಗಿಲ್ಲ.
ಅದರಂತೆ ಏಕದಿನ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಇದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ.
ಇನ್ನು ಆಲ್ರೌಂಡರ್ಗಳಾಗಿ ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಟೀಮ್ ಇಂಡಿಯಾದಲ್ಲಿದ್ದಾರೆ. ಅದೇ ರೀತಿ ಸ್ಪಿನ್ನರ್ಗಳಾಗಿ ಕುಲ್ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಾಲ್ ಸ್ಥಾನ ಪಡೆದಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಹಾಗೂ ಅರ್ಷದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.
ಒಟ್ಟಿನಲ್ಲಿ ಮುಂಬರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಬಿಸಿಸಿಐ ಬಲಿಷ್ಠ ಪಡೆಯನ್ನೇ ರೂಪಿಸಿದ್ದು, ಈ ತಂಡವು ಶ್ರೀಲಂಕಾ ವಿರುದ್ಧ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಏಕದಿನ ಸರಣಿ ವೇಳಾಪಟ್ಟಿ:
ಶ್ರೀಲಂಕಾ ಏಕದಿನ ತಂಡ:
ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೊ, ಸಧೀರ ಸಮರವಿಕ್ರಮ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕಾ, ಧನಂಜಯ್ ಡಿಸಿಲ್ವ, ವನಿಂದು ಹಸರಂಗ, ಮಹೀಶ್ ತೀಕ್ಷಣ , ಜೆಫ್ರಿ ವಾಂಡರ್ಸೆ, ಚಾಮಿಕಾ ಕರುಣಾರತ್ನೆ, ದಿಲ್ಶಾನ್ ಮಧುಶಂಕ, ಕಸುನ್ ರಜಿತ, ನುವಾನಿಡು ಫೆರ್ನಾಂಡೋ, ದುನಿತ್ ವೆಲಾಲಗೆ, ಪ್ರಮೋದ್ ಮದುಶನ್.
ಟೀಮ್ ಇಂಡಿಯಾ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
Published On - 7:30 pm, Sun, 8 January 23