
ಬೆಂಗಳೂರು (ಅ. 03): ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ (Indian Cricket Team) ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಮೊದಲ ದಿನದಂದು ಭಾರತ ತಂಡ ಪ್ರಾಬಲ್ಯ ಮರೆಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಎದುರಿಸಿದ ತಂಡದ ಇನ್ನಿಂಗ್ಸ್ 45 ನೇ ಓವರ್‌ನಲ್ಲಿ ಕೇವಲ 162 ರನ್‌ಗಳಿಗೆ ಸೀಮಿತವಾಯಿತು. ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದರು. ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್‌ಗಳಿಗೆ 121 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್ 41 ರನ್‌ಗಳ ಮುನ್ನಡೆಯಲ್ಲಿದೆ, ಆದರೆ ಭಾರತ ಇನ್ನೂ 8 ವಿಕೆಟ್‌ಗಳನ್ನು ಹೊಂದಿದೆ. ಇದೀಗ ಎರಡನೇ ದಿನದಾಟ ಆರಂಭವಾಗಿದ್ದು, ಟೀಮ್ ಇಂಡಿಯಾ ದೊಡ್ಡ ಮೊತ್ತದತ್ತ ಚಿತ್ತ ನೆಟ್ಟಿದೆ.
ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಭಾರತ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೂರನೇ ಅವಧಿಯಲ್ಲಿ ಮಳೆಯಿಂದಾಗಿ ಆಟ ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು. ವಿರಾಮದ ಮೊದಲು, ಯಶಸ್ವಿ 35 ಎಸೆತಗಳಲ್ಲಿ 4 ರನ್ ಗಳಿಸಿ ಆಡುತ್ತಿದ್ದರು. ಮಳೆ ನಿಂತ ನಂತರ ಅವರು ಆಕ್ರಮಣಕಾರಿಯಾಗಿ ಆಡಲಾರಂಭಿಸಿದರು. 15 ನೇ ಓವರ್‌ನಲ್ಲಿ ಜಸ್ಟಿನ್ ಗ್ರೀವ್ಸ್ ವಿರುದ್ಧ ಅವರು ಮೂರು ಬೌಂಡರಿಗಳನ್ನು ಬಾರಿಸಿದರು. ಏತನ್ಮಧ್ಯೆ, ರಾಹುಲ್ ಮತ್ತು ಯಶಸ್ವಿ ನಡುವೆ ಅರ್ಧಶತಕದ ಜೊತೆಯಾಟ ಪೂರ್ಣಗೊಂಡಿತು. 54 ಎಸೆತಗಳಲ್ಲಿ 36 ರನ್ ಗಳಿಸಿದ ನಂತರ, ಯಶಸ್ವಿ ಜೇಡನ್ ಸಿಲ್ಸ್‌ಗೆ ಬಲಿಯಾದರು.
ಸಾಯಿ ಸುದರ್ಶನ್ ಕೇವಲ 7 ರನ್ ಗಳಿಸಿ ರೋಸ್ಟನ್ ಚೇಸ್ ಬೌಲಿಂಗ್ ನಲ್ಲಿ ಔಟಾದರು. ನಂತರ ಕೆಎಲ್ ರಾಹುಲ್ ಜೊತೆ ನಾಯಕ ಶುಭ್ಮನ್ ಗಿಲ್ ಸೇರಿಕೊಂಡರು, ರಾಹುಲ್ 101 ಎಸೆತಗಳಲ್ಲಿ ತಮ್ಮ 19 ನೇ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು. ದಿನದಾಟದ ಅಂತ್ಯಕ್ಕೆ ರಾಹುಲ್ 53 ರನ್ ಗಳಿಸಿದರೆ, ನಾಯಕ ಗಿಲ್ 18 ರನ್ ಗಳಿಸಿದ್ದರು.
World Cup 2025: ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತ ಪಾಕಿಸ್ತಾನಕ್ಕೆ ಮುಂದಿನ ಎದುರಾಳಿ ಭಾರತ
ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ ವೆಸ್ಟ್ ಇಂಡೀಸ್, ಅಹಮದಾಬಾದ್‌ನಲ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರಿಸಿತು. ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಉಳಿಯುವ ಧೈರ್ಯವನ್ನು ತೋರಿಸಲಿಲ್ಲ. ಆರಂಭಿಕ ಆಟಗಾರ ಟಗನರಾಜನ್ ಚಂದ್ರಪಾಲ್ ಖಾತೆ ತೆರೆಯದೆಯೇ ಔಟಾದರು. ಜಸ್ಟಿನ್ ಗ್ರೀವ್ಸ್ 32, ಶೈ ಹೋಪ್ 26 ಮತ್ತು ನಾಯಕ ರೋಸ್ಟನ್ ಚೇಸ್ 24 ರನ್ ಗಳಿಸಿದರು.
ಭಾರತದ ಪರ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಜೋಡಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಮಾರಕವಾಗಿ ಪರಿಣಮಿಸಿತು. ಸಿರಾಜ್ ಇನ್ನಿಂಗ್ಸ್ ಆರಂಭದಲ್ಲಿ ಬುಮ್ರಾಗಿಂತ ಹೆಚ್ಚು ಪರಿಣಾಮಕಾರಿಯಾಗಿದ್ದರು. ಸಿರಾಜ್ 14 ಓವರ್‌ಗಳಲ್ಲಿ 40 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರು. ಜಸ್ಪ್ರೀತ್ ಬುಮ್ರಾ 14 ಓವರ್‌ಗಳಲ್ಲಿ 42 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಕುಲದೀಪ್ ಯಾದವ್ 6.1 ಓವರ್‌ಗಳಲ್ಲಿ 25 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆದರು. ವಾಷಿಂಗ್ಟನ್ ಸುಂದರ್ ಕೂಡ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ