World Cup 2025: ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತ ಪಾಕಿಸ್ತಾನಕ್ಕೆ ಮುಂದಿನ ಎದುರಾಳಿ ಭಾರತ
Women's ODI World Cup 2025: 2025ರ ಏಷ್ಯಾಕಪ್‌ನ ನಂತರ ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ ಪಾಕಿಸ್ತಾನ ತಂಡದ ಸೋಲಿನ ಸರಣಿ ಮುಂದುವರಿದಿದೆ. ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 129 ರನ್‌ಗಳಿಗೆ ಆಲೌಟ್ ಆಗಿ 7 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಪುರುಷರ ತಂಡದಂತೆ ಮಹಿಳಾ ತಂಡವೂ ಪ್ರಮುಖ ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದು, ಮುಂಬರುವ ಭಾರತದ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

2025 ರ ಏಷ್ಯಾಕಪ್ ನಂತರ ಇದೀಗ ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ (Women’s World Cup 2025) ಪಾಕಿಸ್ತಾನ ತಂಡದ ಸೋಲಿನ ಸರಣಿ ಮುಂದುವರೆದಿದೆ. ಪುರುಷರ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ಆಡಿದ ಮೂರಕ್ಕೆ ಮೂರು ಪಂದ್ಯಗಳನ್ನು ಸೋತಿದ್ದ ಪಾಕಿಸ್ತಾನ ತಂಡ ಇದೀಗ ಮಹಿಳಾ ವಿಶ್ವಕಪ್‌ನಲ್ಲೂ ಸೋಲಿನೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿದೆ. ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ 2025 ರ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕೇವಲ 129 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೇವಲ 32 ಓವರ್‌ಗಳಲ್ಲಿ ಜಯದ ನಗೆ ಬೀರಿತು.
ಪಾಕ್ ತಂಡಕ್ಕೆ ಕಳಪೆ ಆರಂಭ
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫಾತಿಮಾ ಸನಾ ನಾಯಕತ್ವದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ತಂಡದ ಆರಂಭ ಎಷ್ಟು ಕಳಪೆಯಾಗಿತ್ತು ಎಂದರೆ ಮೊದಲ ಓವರ್‌ನಲ್ಲಿಯೇ ಇನ್ನಿಂಗ್ಸ್‌ನ ಭವಿಷ್ಯ ಸ್ಪಷ್ಟವಾಯಿತು. ಬಾಂಗ್ಲಾದೇಶದ ವೇಗಿ ಮರುಫಾ ಅಖ್ತರ್ ಮೊದಲ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಇಬ್ಬರು ಪಾಕಿಸ್ತಾನಿ ಬ್ಯಾಟರ್ಗಳನ್ನು ಬಲಿಪಡೆದರು. ಹೀಗಾಗಿ ಕೇವಲ 2 ರನ್‌ಗಳಿಗೆ ಪಾಕಿಸ್ತಾನದ 2 ವಿಕೆಟ್‌ಗಳು ಉದುರಿದವು.
129 ರನ್‌ಗಳಿಗೆ ಆಲೌಟ್
ಆದಾಗ್ಯೂ ಆ ಬಳಿಕ ಜೊತೆಯಾದ ಮುನೀಬಾ ಅಲಿ ಮತ್ತು ರಮೀನ್ ಶಮೀಮ್ 42 ರನ್‌ಗಳ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಹೊರತಂದರು. ಆದರೆ ನಹಿದಾ ಅಖ್ತರ್ ಸತತ ಎರಡು ಓವರ್‌ಗಳಲ್ಲಿ ಇಬ್ಬರನ್ನೂ ಔಟ್ ಮಾಡಿ ಪಾಕ್ ತಂಡವನ್ನು ಮತ್ತೆ ಒತ್ತಡಕ್ಕೆ ಸಿಲುಕಿಸಿದರು. ಹೀಗಾಗಿ ಪಾಕ್ ತಂಡ 50 ರನ್ ತಲುಪುವ ಮೊದಲೇ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕಿ ಫಾತಿಮಾ ಸನಾ, ಅಲಿಯಾ ರಿಯಾಜ್ ಮತ್ತು ಡಯಾನಾ ಬೇಗ್ ಅಲ್ಪ ಕಾಣಿಕೆ ನೀಡುವ ಮೂಲಕ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಆದರೆ ಇಡೀ ತಂಡವು 38.3 ಓವರ್‌ಗಳನ್ನಷ್ಟೇ ಆಡಲು ಶಕ್ತವಾಗಿ ಕೇವಲ 129 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಪರ ಮರೂಫಾ ಮತ್ತು ನಹಿದಾ ಜೊತೆಗೆ, ಶೋರ್ನಾ ಅಖ್ತರ್ ಕೂಡ ಮೂರು ವಿಕೆಟ್‌ಗಳನ್ನು ಪಡೆದರು.
62 ರನ್‌ಗಳ ಜೊತೆಯಾಟ
ಇತ್ತ ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಕೂಡ ಕಳಪೆ ಆರಂಭವನ್ನು ಕಂಡಿತು. ನಾಲ್ಕನೇ ಓವರ್‌ನಲ್ಲಿ ಆರಂಭಿಕ ಆಟಗಾರ್ತಿ ಫರ್ಗನಾ ಹೋಕ್ ಅವರ ವಿಕೆಟ್ ಕಳೆದುಕೊಂಡಿತು. 12 ನೇ ಓವರ್‌ನಲ್ಲಿ ಶರ್ಮೀನ್ ಅಖ್ತರ್ ಕೂಡ ನಿರ್ಗಮಿಸಿದರು. ಕೇವಲ 35 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಪಾಕಿಸ್ತಾನ ಮೇಲುಗೈ ಸಾಧಿಸುತ್ತಿರುವಂತೆ ಕಾಣುತ್ತಿತ್ತು. ಆದರೆ ಆರಂಭಿಕ ಆಟಗಾರ್ತಿ ರುಬಿಯಾ ಹೈದರ್, ನಾಯಕಿ ನಿಗರ್ ಸುಲ್ತಾನ ಅವರೊಂದಿಗೆ 62 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ನೀಡಿ ಪಾಕಿಸ್ತಾನದ ಸೋಲಿಗೆ ಮುದ್ರೆ ಹಾಕಿದರು.
ಮುಂದಿನ ಎದುರಾಳಿ ಭಾರತ
ಶೀಘ್ರದಲ್ಲೇ, ರುಬಿಯಾ ತನ್ನ ಅರ್ಧಶತಕವನ್ನು ಪೂರೈಸಿ, ಸೋಭಾನಾ ಮೊಸ್ತಾರಿ ಅವರೊಂದಿಗೆ 32 ನೇ ಓವರ್‌ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ರುಬಿಯಾ 54 ರನ್ ಮತ್ತು ಸೋಭಾನಾ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಇದೀಗ ಬಾಂಗ್ಲಾದೇಶ ವಿರುದ್ಧ ಹೀನಾಯವಾಗಿ ಸೋತಿರುವ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಬರುವ ಭಾನುವಾರದಂದು ಬಲಿಷ್ಠ ಭಾರತದ ವಿರುದ್ಧ ಆಡಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಎದುರು ಸಂಪೂರ್ಣವಾಗಿ ಶರಣಾಗಿರುವ ಪಾಕಿಸ್ತಾನ ಮುಂದಿನ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನ ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
