ಐಸಿಸಿ ಟಿ20 ವಿಶ್ವಕಪ್ನ (T20 World Cup) ಸೂಪರ್ 12 ಹಂತದ ಪಂದ್ಯಗಳು ಶುರುವಾಗಿದ್ದು ಇಂದು ಕ್ರಿಕೆಟ್ ಲೋಕದ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗಲಿದೆ. ಮೆಲ್ಬೋರ್ನ್ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಕಳೆದ ವರ್ಷದ ವರೆಗೂ ಟೀಮ್ ಇಂಡಿಯಾ 50 ಓವರ್ ಹಾಗೂ 20 ಓವರ್‌ಗಳ ಮಾದರಿಗಳ ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಸೋಲಿಲ್ಲದ ಸರದಾರನಾಗಿ ಮೆರೆದಿತ್ತು. ಆದರೆ, ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ 2021 ಪಂದ್ಯದಲ್ಲಿ ಈ ಗೆಲುವಿನ ಸರಪಣಿ ಕಳಚಿಬಿತ್ತು. ಆ ಪಂದ್ಯದಲ್ಲಿ ಕೊಹ್ಲಿ (Virat Kohli) ಪಡೆಯ ವಿರುದ್ಧ ಪಾಕಿಸ್ತಾನ ಹತ್ತು ವಿಕೆಟ್‌ಗಳ ಜಯಸಾಧಿಸಿತ್ತು. ಹೀಗಾಗಿ ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದುಕೂಡ ಹೇಳಬಹುದು.
ಹೇಗಿರಲಿದೆ ಭಾರತದ ಪ್ಲೇಯಿಂಗ್ XI:
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬಲಿಷ್ಠ ಆಟಗಾರರನ್ನು ಕಣಕ್ಕಿಳಿಸುವ ಯೋಜನೆ ಮಾಡಿರುವ ಕೋಚ್ ಹಾಗೂ ನಾಯಕ ಹಿರಿಯ, ಕಿರಿಯ ಎಂದು ನೋಡದೆ ಫಾರ್ಮ್ನಲ್ಲಿರುವ ಪ್ಲೇಯರ್ಸ್ಗೆ ಮಣೆ ಹಾಕಲು ಮುಂದಾಗಿದ್ದಾರೆ. ಭಾರತದ ಟಾಪ್ 4 ಖಚಿತವಾಗಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ.
ನಂತರದ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಇರಲಿದ್ದಾರೆ. ಆದರ, ಅರನೇ ಸ್ಥಾನಕ್ಕೆ ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ದಿನೇಶ್ ಕಾರ್ತಿಕ್ ಅಥವಾ ರಿಷಭ್ ಪಂತ್ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಮೂಲಗಳ ಪ್ರಕಾರ ಪಂತ್ ಅವರನ್ನು ಹೊರಗಿಡುವ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ ಎನ್ನಲಾಗಿದೆ. ಫಾರ್ಮ್ನಲ್ಲಿ ಇಲ್ಲದ ಪಂತ್ ಬದಲು ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಂತೆ. ಫಿನಿಶರ್ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕಾರ್ತಿಕ್ ಆರಂಭದ ಕೆಲವು ಪಂದ್ಯಗಳಲ್ಲಿ ಪಂತ್ ಬದಲು ಆಡಬಹುದು.
ಆಲ್ರೌಂಡರ್ ಜವಾಬ್ದಾರಿ ಹಾರ್ದಿಕ್ ಜೊತೆಗೆ ಅಕ್ಷರ್ ಪಟೇಲ್ ವಹಿಸಲಿದ್ದಾರೆ. ಮತ್ತೊಬ್ಬ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಥವಾ ಯುಜ್ವೇಂದ್ರ ಚಹಲ್ ಇರಲಿದ್ದಾರೆ. ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ಪ್ರಮುಖ ವೇಗಿಗಳಾದರೆ ಮತ್ತೊಬ್ಬ ವೇಗಿಯಾಗಿ ಹರ್ಷಲ್ ಪಟೇಲ್ ಅಥವಾ ಅರ್ಶ್ದೀಪ್ ಸಿಂಗ್ ಆಯ್ಕೆಯಾಗಲಿದ್ದಾರೆ.
ಇತ್ತ ಪಾಕಿಸ್ತಾನ ತಂಡ ಆಡಿದ ಒಂದು ಅಭ್ಯಾಸ ಪಂದ್ಯದಲ್ಲಿ ಸೋತರೂ ಬಲಿಷ್ಠವಾಗಿದೆ. ನಾಯಕ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭ ಒದಗಿಸುತ್ತಿದ್ದರೆ, ಶಾನ ಮಸೂದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹೈದರ್ ಅಲಿ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ಇಫ್ತಿಖರ್ ಅಹ್ಮದ್ ಫಿನಿಶರ್ ಆಗಿ ಗುರಿತಿಸಿಕೊಂಡಿದ್ದಾರೆ. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಂ ಶಾ ಸ್ಟಾರ್ ಬೌಲರ್ಗಳಾಗಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಯುಜ್ವೇಂದ್ರ ಚಹಲ್, ದೀಪಕ್ ಹೂಡಾ.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಶಾನ್ ಮಸೂದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಹೈದರ್ ಅಲಿ, ಇಫ್ತಿಖರ್ ಅಹ್ಮದ್, ಅಸಿಫ್ ಅಲಿ, ನಸೀಂ ಶಾ, ಹ್ಯಾರಿಸ್ ರೌಫ್, ಶಾಹೀನ್ ಆಫ್ರಿದಿ, ಖುಷದಿಲ್ ಶಾಹ, ಮೊಹಮ್ಮದ್ ಹಸನೈನ್, ಮೊಹಮ್ಮದ್ ವಾಸೀಂ. ಜೂನಿಯರ್ ಫಖರ್ ಜಮಾನ್.
Published On - 7:51 am, Sun, 23 October 22