
ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲನುಭವಿಸಿದೆ. ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ ಈ ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆಲ್ಲುವಲ್ಲಿ ಭಾರತೀಯ ವನಿತೆಯರು ಯಶಸ್ವಿಯಾಗಿದ್ದಾರೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೇವಲ 8 ರನ್ಗಳಿಸಿ ಔಟಾದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೆಮಿಮಾ ರೊಡ್ರಿಗಸ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಇನಿಂಗ್ಸ್ 15 ರನ್ಗಳಿಗೆ ಸೀಮಿತವಾಯಿತು.
ಆದರೆ ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಫಾಲಿ ವರ್ಮಾ ಆಂಗ್ಲ ಬೌಲರ್ಗಳ ಬೆಂಡೆತ್ತುವ ಕಾಯಕ ಮುಂದುವರೆಸಿದ್ದರು. ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದ ಶಫಾಲಿ 41 ಎಸೆತಗಳಲ್ಲಿ 13 ಭರ್ಜರಿ ಫೋರ್ ಹಾಗೂ 1 ಸಿಕ್ಸ್ನೊಂದಿಗೆ 75 ರನ್ ಚಚ್ಚಿದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.
168 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ್ತಿಯರಾದ ಸೋಫಿಯಾ ಡಂಕ್ಲಿ 46 ರನ್ ಬಾರಿಸಿದರೆ, ವ್ಯಾಟ್ ಹಾಡ್ಜ್ 56 ರನ್ ಗಳಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಟಾಮಿ ಬ್ಯೂಮಾಂಟ್ 20 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಬಾರಿಸಿ 5 ವಿಕೆಟ್ಗಳ ಗೆಲುವು ದಾಖಲಿಸಿತು.
ಈ ಸೋಲಿನ ಹೊರತಾಗಿಯೂ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡವು 97 ರನ್ಗಳ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 24 ರನ್ಗಳಿಂದ ಮಣಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ ಆಂಗ್ಲರು 5 ರನ್ಗಳ ಗೆಲುವು ದಾಖಲಿಸಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ 6 ವಿಕೆಟ್ಗಳ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದ್ದರು. ಇದೀಗ 5ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡವು ಸರಣಿ ಸೋಲಿನ ಅಂತರವನ್ನು 3-2 ಕ್ಕೆ ಇಳಿಸಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಸೋಫಿಯಾ ಡಂಕ್ಲಿ , ಡೇನಿಯಲ್ ವ್ಯಾಟ್-ಹಾಡ್ಜ್ , ಮಾಯಾ ಬೌಚಿಯರ್ , ಟ್ಯಾಮಿ ಬ್ಯೂಮಾಂಟ್ (ನಾಯಕಿ) , ಆಮಿ ಜೋನ್ಸ್ (ವಿಕೆಟ್ ಕೀಪರ್) , ಪೈಜ್ ಸ್ಕೋಲ್ಫೀಲ್ಡ್ , ಸೋಫಿ ಎಕ್ಲೆಸ್ಟೋನ್ , ಎಮ್ ಆರ್ಲಾಟ್ , ಷಾರ್ಲೆಟ್ ಡೀನ್ , ಇಸ್ಸಿ ವಾಂಗ್ , ಲಿನ್ಸೆ ಸ್ಮಿತ್.
ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್ಗೆ 15 ತಂಡಗಳು ಎಂಟ್ರಿ
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಹರ್ಲೀನ್ ಡಿಯೋಲ್ , ರಿಚಾ ಘೋಷ್ ( ವಿಕೆಟ್ ಕೀಪರ್ ) , ದೀಪ್ತಿ ಶರ್ಮಾ , ರಾಧಾ ಯಾದವ್ , ಅರುಂಧತಿ ರೆಡ್ಡಿ , ಕ್ರಾಂತಿ ಗೌಡ್ , ಶ್ರೀ ಚರಣಿ.