- Kannada News Photo gallery Cricket photos Six ducks in his last seven Test innings for Jasprit Bumrah
0,0,0,0,0,0: ಸೊನ್ನೆ ಸುತ್ತುವುದರಲ್ಲಿ ಬುಮ್ರಾ ಬೂಮ್ ಬೂಮ್
India vs England Test: ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 387 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 387 ರನ್ಗಳಿಸಿದೆ. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 2 ರನ್ ಕಲೆಹಾಕಿದೆ.
Updated on: Jul 13, 2025 | 8:31 AM

ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಬೌಲಿಂಗ್ ಮೂಲಕ ಪರಾಕ್ರಮ ಮೆರೆಯುತ್ತಿರುವುದು ಗೊತ್ತೇ ಇದೆ. ಅದು ಲಂಡನ್ನ ಲಾರ್ಡ್ಸ್ ಮೈದಾನದಲ್ಲೂ ಮುಂದುವರೆದಿದೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿರುವ ಬುಮ್ರಾ ಕೇವಲ 74 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಆದರೆ ಆ ಬಳಿಕ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಬಂದ ಬುಮ್ರಾ ಸೊನ್ನೆ ಸುತ್ತುವ ಮೂಲಕ ನಿರ್ಗಮಿಸಿದ್ದಾರೆ. ಅಂದರೆ ಒಂದೇ ಒಂದು ರನ್ಗಳಿಸದೇ ವಿಕೆಟ್ ಒಪ್ಪಿಸಿದ್ದಾರೆ. ವಿಶೇಷ ಎಂದರೆ ಬುಮ್ರಾ ಹೀಗೆ ರನ್ಗಳಿಸದೇ ಸತತವಾಗಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುತ್ತಿರುವುದು 4ನೇ ಬಾರಿ. ಅದರಲ್ಲೂ ಕಳೆದ 7 ಇನಿಂಗ್ಸ್ಗಳಲ್ಲಿ ಟೀಮ್ ಇಂಡಿಯಾ ವೇಗಿ 6 ಬಾರಿ ಸೊನ್ನೆಗೆ ಔಟಾಗಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರ ಕೊನೆಯ 7 ಇನಿಂಗ್ಸ್ಗಳನ್ನು ತೆಗೆದುಕೊಂಡರೆ, ಅವರ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 22 ರನ್ಗಳು. ಅದರಲ್ಲಿ ಆರು ಇನಿಂಗ್ಸ್ಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಅಲ್ಲದೆ ಕೊನೆಯ 7 ಇನಿಂಗ್ಸ್ಗಳಲ್ಲಿ 0, 0, 22, 0, 0, 0, 0 ಕಲೆಹಾಕುವ ಮೂಲಕ ತನ್ನ ಟೆಸ್ಟ್ ಶೂನ್ಯಗಳ ಸಂಖ್ಯೆಯನ್ನು 28 ಕ್ಕೇರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 72 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ಗೆ ಆಗಮಿಸಿರುವ ಜಸ್ಪ್ರೀತ್ ಬುಮ್ರಾ 28 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಬ್ಯಾಟರ್ಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಟೆಸ್ಟ್ನಲ್ಲಿ ಅತ್ಯಧಿಕ ಬಾರಿ ಝೀರೋಗೆ ಔಟಾದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಶಾಂತ್ ಶರ್ಮಾ. ಭಾರತದ ಪರ 142 ಟೆಸ್ಟ್ ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಇಶಾಂತ್ 34 ಬಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಟೀಮ್ ಇಂಡಿಯಾ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ 28 ಶೂನ್ಯಗಳೊಂದಿಗೆ ಜಸ್ಪ್ರೀತ್ ಬುಮ್ರಾ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
