ಚೆಂಡು ಹಿಡಿದು ವಿಶ್ವ ದಾಖಲೆ ನಿರ್ಮಿಸಿದ ಜೋ ರೂಟ್
Joe Root World Record: ಟೆಸ್ಟ್ ಕ್ರಿಕೆಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಜೋ ರೂಟ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಫೀಲ್ಡಿಂಗ್ ಮೂಲಕ ಕೂಡ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಕೂಡ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕುವ ಮೂಲಕ ಎಂಬುದೇ ಅಚ್ಚರಿ.
Updated on: Jul 12, 2025 | 10:54 AM

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200+ ಕ್ಯಾಚ್ಗಳನ್ನು ಹಿಡಿದಿರುವುದು ಕೇವಲ 4 ಆಟಗಾರರು ಮಾತ್ರ. ಈ ಪಟ್ಟಿಯಲ್ಲಿ ಇದೀಗ ಇಂಗ್ಲೆಂಡ್ ಆಟಗಾರ ಜೋ ರೂಟ್ (Joe Root) ಅಗ್ರಸ್ಥಾನಕ್ಕೇರಿದ್ದಾರೆ. ಅದು ಕೂಡ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಟೀಮ್ ಇಂಡಿಯಾ ಬ್ಯಾಟರ್ ಕರುಣ್ ನಾಯರ್ ಅವರ ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ನೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎಂಬ ವಿಶ್ವ ದಾಖಲೆ ಜೋ ರೂಟ್ ಪಾಲಾಯಿತು.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿತ್ತು. 301 ಟೆಸ್ಟ್ ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದ ದ್ರಾವಿಡ್ ಒಟ್ಟು 210 ಕ್ಯಾಚ್ಗಳನ್ನು ಹಿಡಿದಿದು ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಜೋ ರೂಟ್ ಯಶಸ್ವಿಯಾಗಿದ್ದಾರೆ.

ಜೋ ರೂಟ್ ಈವರೆಗೆ 156 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ 296 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದಾರೆ. ಇದೇ ವೇಳೆ ಅವರು ಹಿಡಿದ ಕ್ಯಾಚ್ಗಳ ಸಂಖ್ಯೆ ಬರೋಬ್ಬರಿ 211* . ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಕ್ಯಾಚ್ ಹಿಡಿದ ಫೀಲ್ಡರ್ ಎಂಬ ವಿಶ್ವ ದಾಖಲೆಯನ್ನು ಜೋ ರೂಟ್ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಕ್ಯಾಚ್ ಹಿಡಿದ ವಿಶ್ವ ದಾಖಲೆ ಇರುವುದು ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ ಹೆಸರಿನಲ್ಲಿ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ (ಟಿ20+ಟೆಸ್ಟ್+ಏಕದಿನ) 768 ಇನಿಂಗ್ಸ್ಗಳಲ್ಲಿ ಫೀಲ್ಡಿಂಗ್ ಮಾಡಿರುವ ಜಯವರ್ಧನೆ ಒಟ್ಟು 440 ಕ್ಯಾಚ್ಗಳನ್ನು ಹಿಡಿದು ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
