T20 World Cup 2025: ಇಂಗ್ಲೆಂಡ್ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಫೈನಲ್ಗೇರಿದ ಟೀಂ ಇಂಡಿಯಾ
ICC U19 T20 World Cup 2025: 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ 9 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.ಇದರೊಂದಿಗೆ ಭಾರತ ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಮಲೇಷ್ಯಾದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಜನವರಿ 31ರ ಶುಕ್ರವಾರ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿತು. ಇದರೊಂದಿಗೆ ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಇನ್ನು ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಅಂದರೆ ಇದೀಗ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಫೆಬ್ರವರಿ 2 ರ ಭಾನುವಾರದಂದು ನಡೆಯಲಿದೆ.
ಟೂರ್ನಿಯಲ್ಲಿ ಭಾರತ ಅಜೇಯ
ಇಡೀ ಟೂರ್ನಿಯೂದ್ದಕ್ಕೂ ಪಾರುಪತ್ಯ ಮೆರೆದ ಭಾರತ ತಂಡ ಗ್ರೂಪ್ ಹಂತದಿಂದ ಹಿಡಿದು ಸೆಮಿಫೈನಲ್‌ವರೆಗೂ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಅಂದರೆ ಇಲ್ಲಿಯವರೆಗೂ ಈ ಟೂರ್ನಿಯಲ್ಲಿ ಭಾರತವನ್ನು ಸೋಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಆರಂಭ ಪಡೆದುಕೊಂಡು ಕೇವಲ 4 ಓವರ್‌ಗಳಲ್ಲಿ 37 ರನ್ ಗಳಿಸಿತು. ಆದರೆ ಇದಾದ ನಂತರ ತಮ್ಮ ಕರಾರುವಕ್ಕಾದ ದಾಳಿಯನ್ನು ಆರಂಭಿಸಿದ ಭಾರತದ ಬೌಲರ್‌ಗಳು ಆಂಗ್ಲ ತಂಡವನ್ನು ಕಾಡಲಾರಂಭಿಸಿದರು. ಅದರಲ್ಲೂ ಪರುಣಿಕಾ ಸಿಸೋಡಿಯಾ 5ನೇ ಓವರ್ನಲ್ಲಿ ಪ್ರಮುಖ 2 ವಿಕೆಟ್ ಪಡೆದರು.
ತತ್ತರಿಸಿದ ಆಂಗ್ಲರ ಇನ್ನಿಂಗ್ಸ್
ಆದರೆ, ಮತ್ತೆ ಚೇತರಿಕೆಯತ್ತ ಸಾಗಿದ ಆಂಗ್ಲ ಪಡೆಗೆ 44 ರನ್‌ಗಳ ಜತೆಯಾಟ ಸಿಕ್ಕಿತು. ಈ ವೇಳೆ ದಾಳಿಗಿಳಿದ ಆಯುಷಿ ಶುಕ್ಲಾ ಇಂಗ್ಲೆಂಡ್ ಸ್ಕೋರ್ 81 ರನ್ಗಳಿದ್ದಾಗ ಮೂರನೇ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಇಲ್ಲಿಂದ ಇಂಗ್ಲೆಂಡ್ ತಂಡದ ಪತನ ಆರಂಭವಾಯಿತು. ಮುಂದಿನ 12 ರನ್ ಗಳಿಸುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ವೈಷ್ಣವಿ ಶರ್ಮಾ 4 ಓವರ್‌ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರೆ, ಪರುಣಿಕಾ 4 ಓವರ್‌ಗಳಲ್ಲಿ 21 ರನ್ ನೀಡಿ 3 ವಿಕೆಟ್, ಆಯುಷಿ 4 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರು. ಅಂತಿಮವಾಗಿ ಇಂಗ್ಲೆಂಡ್ 113 ರನ್‌ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು.
ಜಿ ಕಮಲಿನಿ ಅದ್ಭುತ ಬ್ಯಾಟಿಂಗ್
114 ರನ್‌ಗಳ ಬೆನ್ನತ್ತಿದ್ದ ಭಾರತದ ಆರಂಭಿಕರಿಬ್ಬರೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಜಿ ಕಮಲಿನಿ ಮತ್ತು ಜಿ ತ್ರಿಶಾ 9 ಓವರ್‌ಗಳಲ್ಲಿ 60 ರನ್ ಕಲೆಹಾಕಿದರು. ಆದರೆ 9ನೇ ಓವರ್ನ ಕೊನೆಯ ಎಸೆತದಲ್ಲಿ ತ್ರಿಶಾ 29 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಆ ಬಳಿಕ ಜೊತೆಯಾದ ಸನಿಕಾ ಚಲ್ಕೆ ಹಾಗೂ ಕಮಲಿನಿ ಉಳಿದ ರನ್‌ಗಳನ್ನು ಸುಲಭವಾಗಿ ಬೆನ್ನಟ್ಟಿದರು. ಈ ಮಹತ್ವದ ಪಂದ್ಯದಲ್ಲಿ 50 ಎಸೆತಗಳಲ್ಲಿ 56 ರನ್‌ಗಳ ಇನಿಂಗ್ಸ್ ಆಡಿದ ಕಮಲಿನಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಂತಿಮವಾಗಿ ಭಾರತ 15 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Fri, 31 January 25