INDW vs MLYW: ಏಷ್ಯನ್ ಗೇಮ್ಸ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ
Asian Games 2023, India Women vs Malaysia Women, Quarter Final 1: ಟಾರ್ಗೆಟ್ ಬೆನ್ನಟ್ಟಲು ಬಂದ ಮಲೇಷ್ಯಾ ಕ್ರೀಸ್ಗೆ ಇಳಿದಾಗ ಮಳೆ ಸುರಿಯಿತು. 2 ಎಸೆತ ಹಾಕಲಷ್ಟೆ ಸಾಧ್ಯವಾಯಿತು. ಕೆಲ ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಭಾರತ – ಮಲೇಷ್ಯಾ ನಡುವಣ ಪಂದ್ಯ ಮಳೆಯಿಂದಾಗಿ ರದ್ದು ಮಾಡಲಾಯಿತು. ಭಾರತ ನಿಗದಿತ 15 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2023 ರ (Asian Games 2023) ಸ್ಮೃತಿ ಮಂಧಾನ ನಾಯಕತ್ವದ ಭಾರತ ಹಾಗೂ ವಿನಿಫ್ರೆಡ್ ದುರೈಸಿಂಗಮ್ ನೇತೃತ್ವದ ಮಲೇಷ್ಯಾ ತಂಡಗಳ ನಡುವಣ ಕ್ವಾರ್ಟರ್ ಫೈನಲ್ ಕ್ರಿಕೆಟ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಟೀಮ್ ಇಂಡಿಯಾ ವನಿತೆಯರು ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಕಲೆಹಾಕಿದರೂ, ಮಲೇಷ್ಯಾ ಟಾರ್ಗೆಟ್ ಬೆನ್ನಟ್ಟಲು ಮಳೆ ಬಿಡಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ಮಳೆಯಿಂದ ರದ್ದು ಮಾಡಲಾಯಿತು. ಈ ಮೂಲಕ ಭಾರತ ಮಹಿಳಾ ತಂಡ ಏಷ್ಯನ್ ಗೇಮ್ಸ್ನಲ್ಲಿ ಸೆಮಿ ಫೈನಲ್ಗೆ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಸ್ಫೋಟಕ ಆಟ ಪ್ರದರ್ಶಿಸಿತು. ಓಪನರ್ಗಳಾಗಿ ಕಣಕ್ಕಿಳಿದ ನಾಯಕಿ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಪವರ್ ಪ್ಲೇ ಅನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಬೌಂಡರಿಗಳ ಮಳೆ ಸುರಿಸಿದ ಈ ಜೋಡಿ 5 ಓವರ್ ಆಗಿವ ಹೊತ್ತಿಗೆ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಆದರೆ, ಚೆನ್ನಾಗಿಯೆ ಆಡುತ್ತಿದ್ದ ಸ್ಮೃತಿ 16 ಎಸೆತಗಳಲ್ಲಿ 5 ಫೋರ್ನೊಂದಿಗೆ 27 ರನ್ ಗಳಿಸಿ ಮಹಿರಾ ಬೌಲಿಂಗ್ನಲ್ಲಿ ಔಟಾದರು. ಮಂಧಾನ ಔಟಾದಾಗ ಮಳೆ ಸುರಿಯಲು ಪ್ರಾರಂಭವಾಯಿತು. ಹೀಗಾಗಿ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು.
ಇಂಗ್ಲೆಂಡ್ನಲ್ಲಿ ಶತಕ ಸಿಡಿಸಿ ಅಬ್ಬರಿಸಿದ ಕರುಣ್ ನಾಯರ್
ಸ್ವಲ್ಪ ಸಮಯ ಕಾದ ನಂತರ ಮಳೆ ನಿಂತು 15 ಓವರ್ಗಳ ಪಂದ್ಯವನ್ನು ಆಡಿಸಲು ತೀರ್ಮಾನಿಸಲಾಯಿತು. ನಂತರ ಪುನಃ ಬ್ಯಾಟಿಂಗ್ ಶುರುಮಾಡಿದ ಭಾರತ ಅಬ್ಬರಿಸಿತು. ಅದರಲ್ಲೂ ಶಫಾಲಿ ಮನಬಂದಂತೆ ಬ್ಯಾಟ್ ಬೀಸಿದರು. ಕೇವಲ 39 ಎಸೆತಗಳಲ್ಲಿ 4 ಫೋರ್, 5 ಸಿಕ್ಸರ್ ಸಿಡಿಸಿ 67 ರನ್ ಚಚ್ಚಿದರು. ಜೆಮಿಮಾ ರೊಡ್ರಿಗಸ್ ಕೂಡ ಸ್ಫೋಟಕ ಆಟವಾಡಿ ಕೇವಲ 29 ಎಸೆತಗಳಲ್ಲಿ 6 ಫೋರ್ನೊಂದಿಗೆ 47 ಹಾಗೂ ರಿಚಾ ಘೋಷ್ 7 ಎಸೆತಗಳಲ್ಲಿ 21 ರನ್ ಸಿಡಿಸಿದರು. ಭಾರತ ನಿಗದಿತ 15 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು. ಮಲೇಷ್ಯಾ ಪರ ಮಹಿರಾ ಇಜ್ಜಾತಿ ಇಸ್ಮಾಯಿಲ್ ಹಾಗೂ ಐಸ್ಯಾ ಎಲೀಸಾ ತಲಾ 1 ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಲು ಬಂದ ಮಲೇಷ್ಯಾ ಕ್ರೀಸ್ಗೆ ಇಳಿದಾಗ ಮಳೆ ಸುರಿಯಿತು. 2 ಎಸೆತ ಹಾಕಲಷ್ಟೆ ಸಾಧ್ಯವಾಯಿತು. ಕೆಲ ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಭಾರತ – ಮಲೇಷ್ಯಾ ನಡುವಣ ಪಂದ್ಯ ಮಳೆಯಿಂದಾಗಿ ರದ್ದು ಮಾಡಲಾಯಿತು. ಭಾರತದ ಮಹಿಳಾ ತಂಡ ಉತ್ತಮ ಪಾಯಿಂಟ್ ಹೊಂದಿದ್ದ ಆಧಾರದ ಮೇಲೆ ಮಂಧಾನ ನೇತೃತ್ವದ ಭಾರತ ತಂಡ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಹರ್ಮನ್‌ಪ್ರೀತ್ ಕೌರ್ ಅವರನ್ನು ಐಸಿಸಿ ಎರಡು ಪಂದ್ಯಗಳ ಅಮಾನತುಗೊಳಿಸಿದೆ. ಹೀಗಾಗಿ ಮಂಧಾನ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದರು.
ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ) , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಕನಿಕಾ ಅಹುಜಾ , ರಿಚಾ ಘೋಷ್ ( ವಿಕೆಟ್ ಕೀಪರ್ ) , ದೀಪ್ತಿ ಶರ್ಮಾ , ದೇವಿಕಾ ವೈದ್ಯ , ಅಮಂಜೋತ್ ಕೌರ್ , ಪೂಜಾ ವಸ್ತ್ರಾಕರ್ , ಮಿನ್ನು ಮಣಿ , ರಾಜೇಶ್ವರಿ ಗಾಯಕ್ವಾಡ್.
ಮಲೇಷ್ಯಾ ಪ್ಲೇಯಿಂಗ್ XI: ಐನ್ನಾ ಹಮೀಝಾ ಹಾಶಿಮ್ , ವಿನಿಫ್ರೆಡ್ ದುರೈಸಿಂಗಮ್ (ನಾಯಕಿ) , ಮಾಸ್ ಎಲಿಸಾ , ವಾನ್ ಜೂಲಿಯಾ ( ವಿಕೆಟ್ ಕೀಪರ್ ) , ಮಹಿರಾ ಇಜ್ಜಾತಿ ಇಸ್ಮಾಯಿಲ್ , ಐನಾ ನಜ್ವಾ , ವಾನ್ ನಾರ್ ಝುಲೈಕಾ , ನೂರ್ ಅರಿಯಾನಾ ನತ್ಸ್ಯಾ , ಐಸ್ಯಾ ಎಲೀಸಾ , ನೂರ್ ದಾನಿಯಾ ಸ್ಯುಹಾದಾ , ನಿಕ್ ನೌರ್ ಅಟಿಯೆಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ