Year Ender 2024: ಗಂಭೀರ್- ರೋಹಿತ್ ನೇತೃತ್ವದಲ್ಲಿ ಹಳಿ ತಪ್ಪಿದ ಟೀಂ ಇಂಡಿಯಾ

|

Updated on: Dec 30, 2024 | 10:27 PM

Year Ender 2024: 2024ನೇ ಇಸವಿಯಲ್ಲಿ ಭಾರತ ಕ್ರಿಕೆಟ್ ತಂಡವು ಅನೇಕ ಏರಿಳಿತಗಳನ್ನು ಕಂಡಿದೆ. ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೂ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಸತತ ಸೋಲುಗಳನ್ನು ಅನುಭವಿಸಿತು. ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ವೈಟ್ ವಾಶ್ ಆಗಿ ಅವಮಾನ ಅನುಭವಿಸಿತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಸೋಲನುಭವಿಸಿದ್ದು, 41 ವರ್ಷಗಳ ಬಳಿಕ 4 ಟೆಸ್ಟ್ ಪಂದ್ಯಗಳನ್ನು ಸೋತಿರುವುದು ತಂಡದ ನಿರಸ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Year Ender 2024: ಗಂಭೀರ್- ರೋಹಿತ್ ನೇತೃತ್ವದಲ್ಲಿ ಹಳಿ ತಪ್ಪಿದ ಟೀಂ ಇಂಡಿಯಾ
ಗೌತಮ್ ಗಂಭಿರ್- ರೋಹಿತ್ ಶರ್ಮಾ
Follow us on

2024 ರ ಆರಂಭವನ್ನು ಗೆಲುವಿನೊಂದಿಗೆ ಆರಂಭ ಮಾಡಿದ್ದ ಟೀಂ ಇಂಡಿಯಾ ಅಂತ್ಯವನ್ನು ಸೋಲಿನೊಂದಿಗೆ ಕೊನೆಗೊಳಿಸಿದೆ. ವರ್ಷದ ಮೊದಲ ಪಂದ್ಯವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿದ್ದ ಭಾರತ 7 ವಿಕೆಟ್​ಗಳ ಜಯ ಸಾಧಿಸಿತ್ತು. ಆದರೆ ಅಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರಿ ಅಂತರದ ಸೋಲಿನೊಂದಿಗೆ ವರ್ಷವನ್ನು ಮುಗಿಸಿದೆ. ಈ ಒಂದು ವರ್ಷದಲ್ಲಿ ತಂಡದಲ್ಲಿ ಸಾಕಷ್ಟು ಏರಿಳಿತಗಳಾಗಿವೆ. ಸಾಕಷ್ಟು ಬದಲಾವಣೆಗಳೂ ಆಗಿವೆ. ಈ ವರ್ಷದ ಮಧ್ಯದಲ್ಲಿ ರೋಹಿತ್ ಹಾಗೂ ರಾಹುಲ್ ನೇತೃತ್ವದಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿದ್ದ ಟೀಂ ಇಂಡಿಯಾ, ವರ್ಷದ ಅಂತ್ಯದಲ್ಲಿ ರೋಹಿತ್ ಹಾಗೂ ಗಂಭೀರ್ ಅವರ ನೇತೃತ್ವದಲ್ಲಿ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ವಿಫಲವಾಗಿದೆ. ವಾಸ್ತವವಾಗಿ ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡ ಬಳಿಕ ತಂಡ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು.

ಒಂದೇ ಒಂದು ಏಕದಿನ ಪಂದ್ಯ ಗೆಲ್ಲಲಿಲ್ಲ,

ಗಂಭೀರ್ ನೇತೃತ್ವದಲ್ಲಿ ಮೊದಲ ವಿದೇಶಿ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಗೆದ್ದುಕೊಂಡಿತ್ತಾದರೂ, ಏಕದಿನ ಸರಣಿಯಲ್ಲಿ ವೈಟ್ ವಾಶ್ ಮುಖಭಂಗಕ್ಕೊಳಗಾಯಿತು. ಈ ಮೂಲಕ 2024 ರಲ್ಲಿ ಭಾರತ ತಂಡ ಒಂದೇ ಒಂದು ಏಕದಿನ ಪಂದ್ಯವನ್ನು ಗೆಲ್ಲದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತು. ಶ್ರೀಲಂಕಾ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳನ್ನು ಆಡಿದ ಭಾರತ ಎಲ್ಲಾ ಪಂದ್ಯಗಳಲ್ಲಿ ಸೋತಿತು. ಮೊದಲ ಪಂದ್ಯ ಟೈ ಆದರೆ, ನಂತರದ ಎರಡೂ ಪಂದ್ಯಗಳಲ್ಲಿ ಶ್ರೀಲಂಕಾ ಗೆಲುವು ಸಾಧಿಸಿತ್ತು. ಅದರಲ್ಲೂ ಆಡಿದ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಆಲೌಟ್ ಆಗುವ ಮೂಲಕ ಇನ್ನೊಂದು ಕಳಪೆ ಸಾಧನೆ ಮಾಡಿತ್ತು.

ಆ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತೆ ವೈಟ್​ವಾಶ್ ಮುಖಭಂಗಕ್ಕೊಳಗಾಯಿತು. ಅದರಲ್ಲೂ 36 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಭಾರತ ಸೋಲಬೇಕಾಯಿತು. ಅಷ್ಟೇ ಅಲ್ಲ, ಮುಂದಿನ ಎರಡು ಟೆಸ್ಟ್‌ಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ಸರಣಿಯನ್ನು ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ, ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ಇತಿಹಾಸ ಬರೆಯಿತು. ಇದಲ್ಲದೆ ಬೆಂಗಳೂರು ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 46 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇದೇ ಮೊದಲ ಬಾರಿಗೆ ತವರಿನಲ್ಲಿ ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಆದ ಬೇಡದ ದಾಖಲೆ ಬರೆದಿತ್ತು. ಇದರ ಹೊರತಾಗಿ ಈ ವರ್ಷ ಟೀಂ ಇಂಡಿಯಾ ದಾಖಲಿಸಿದ ಇತರ ಕೆಲವು ನಾಚಿಕೆಗೇಡಿನ ದಾಖಲೆಗಳ ವಿವರ ಹೀಗಿದೆ

  • 19 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋಲು ಕಂಡಿತು. ಇದರ ಜೊತೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸೋಲಿನೊಂದಿಗೆ ಭಾರತವು 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿ ಸೋತಿತು.
  • ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಸೋಲುವ ಮೂಲಕ ಬರೋಬ್ಬರಿ 12 ವರ್ಷಗಳ ನಂತರ ಟೆಸ್ಟ್‌ನಲ್ಲಿ ಸೋಲನುಭವಿಸಿತ್ತು. ಹಾಗೆಯೇ 24 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗಕ್ಕೊಳಗಾಯಿತು.
  • 2024 ರಲ್ಲಿ ಬರೋಬ್ಬರಿ 4 ಟೆಸ್ಟ್ ಪಂದ್ಯಗಳನ್ನು ಸೋಲುವ ಮೂಲಕ ಭಾರತ 41 ವರ್ಷಗಳ ನಂತರ ಈ ಬೇಡದ ದಾಖಲೆಗೆ ಕೊರಳೊಡ್ಡಿತು. ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್ ಸೋತಿದ್ದ ಭಾರತ ಆ ಬಳಿಕ ನ್ಯೂಜಿಲೆಂಡ್ ವಿರುದ್ಧ ಸತತ ಮೂರು ಪಂದ್ಯಗಳನ್ನು ಸೋತಿದೆ.
  • 2011 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ಟೆಸ್ಟ್ ಸೋತಿತ್ತು. ಇದಾದ ಬಳಿಕ 13 ವರ್ಷಗಳ ಬಳಿಕ ಇದೀಗ ಈ ಮೈದಾನದಲ್ಲಿ ಸೋಲನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲ, ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಂಟು ವರ್ಷಗಳ ನಂತರ ಇದೇ ಮೈದಾನದಲ್ಲಿ ಮೊದಲ ಬಾರಿಗೆ ಸೋಲನ್ನು ಎದುರಿಸಬೇಕಾಯಿತು.
  • ಭಾರತ ತಂಡ 2014 ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2014ರ ನಂತರ ಸತತ ನಾಲ್ಕು ಬಾರಿ ಈ ಸರಣಿಯನ್ನು ಗೆದ್ದುಕೊಂಡಿದ್ದ ಭಾರತ ಇದೀಗ ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಇನ್ನು ಸಿಡ್ನಿ ಟೆಸ್ಟ್ ಬಾಕಿ ಇದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಸರಣಿ 2-2ರಲ್ಲಿ ಸಮಬಲವಾಗಲಿದೆ. ಈಗ ಟೀಂ ಇಂಡಿಯಾಗೆ ಸರಣಿ ಗೆಲ್ಲಲು ಸಾಧ್ಯವಿಲ್ಲ ಆದರೆ ಸಿಡ್ನಿ ಟೆಸ್ಟ್‌ನಲ್ಲಿ ಸೋತರೆ ಸರಣಿಯನ್ನೂ ಕಳೆದುಕೊಳ್ಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Mon, 30 December 24