NZ vs SL: 14 ರನ್‌ಗಳಿಗೆ 7 ವಿಕೆಟ್ ಪತನ: ಟಿ20 ಸರಣಿ ಸೋತ ಶ್ರೀಲಂಕಾ
NZ vs SL: ನ್ಯೂಜಿಲೆಂಡ್ ತಂಡವು ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದು ಸರಣಿಯನ್ನು ಗೆದ್ದುಕೊಂಡಿದೆ. ಶ್ರೀಲಂಕಾ ತಂಡ 186 ರನ್‌ಗಳ ಗುರಿ ಬೆನ್ನಟ್ಟಲು ವಿಫಲವಾಯಿತು. ಜೇಕಬ್ ಡಫಿ ಅವರ ಅದ್ಭುತ ಬೌಲಿಂಗ್‌ನಿಂದಾಗಿ ಶ್ರೀಲಂಕಾ ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಪತನವಾದವು.
ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಯಶಸ್ವಿಯಾಗಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ಬೇ ಓವಲ್‌ನಲ್ಲಿ ನಡೆಯಿತು. ಈ ಪಂದ್ಯವನ್ನು ಕಿವೀಸ್ ಪಡೆ ಏಕಪಕ್ಷೀಯವಾಗಿ ಗೆದ್ದುಕೊಳ್ಳುವ ಮೂಲಕ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಶ್ರೀಲಂಕಾವೇ ಗೆಲ್ಲುವ ಫೇವರೇಟ್ ಆಗಿತ್ತು. ಆದರೆ ಕೊನೆಯಲ್ಲಿ ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಪತನವಾದ ಕಾರಣ ಕಿವೀಸ್ ಪಡೆ ಸುಲಭ ಜಯ ಸಾಧಿಸಿತು.
ಶ್ರೀಲಂಕಾದ ಪೆವಿಲಿಯನ್ ಪರೇಡ್
ನ್ಯೂಜಿಲೆಂಡ್ ನೀಡಿದ 186 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 15 ಓವರ್‌ಗಳಲ್ಲಿ 3 ವಿಕೆಟ್‌ಗೆ 127 ರನ್ ಗಳಿಸಿತ್ತು. ಹೀಗಾಗಿ ತಂಡದ ಗೆಲುವಿಗೆ ಕೊನೆಯ ಐದು ಓವರ್‌ಗಳಲ್ಲಿ 60 ರನ್ ಅಗತ್ಯವಿತ್ತು. ಆದರೆ 16 ನೇ ಓವರ್‌ನಿಂದ ಲಂಕಾ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಕಿವೀಸ್ ವೇಗಿ ಜೇಕಬ್ ಡಫಿ ಅವರ ಎಸೆತದಲ್ಲಿ 48 ರನ್ ಗಳಿಸಿ ಅದ್ಭುತವಾಗಿ ಆಡುತ್ತಿದ್ದ ಪೆರೇರಾ ಅವರ ವಿಕೆಟ್ ಪತನದ ನಂತರ ಶ್ರೀಲಂಕಾದ ಸೋಲು ಖಚಿತವಾಗುತ್ತ ಸಾಗಿತು.
ಪೆರೇರಾ ಬಳಿಕ 17ನೇ ಓವರ್‌ನಲ್ಲಿ ಚರಿತ್ ಅಸಲಂಕಾ ಔಟಾದರು. 18ನೇ ಓವರ್‌ನಲ್ಲಿ ವನೆಂದು ಹಸರಂಗ ಅವರ ವಿಕೆಟ್ ಪತನವಾಯಿತು. ಅದೇ ಓವರ್‌ನಲ್ಲಿ ಮಹಿಷ್ ತೀಕ್ಷಣ ಕೂಡ ಔಟಾದರು. 19ನೇ ಓವರ್ನಲ್ಲಿಯೂ ಲಂಕಾ ಎರಡು ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿಗೆ ಕೊರಳ್ಳೊಡಿತು. ಇತ್ತ ನ್ಯೂಜಿಲೆಂಡ್ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಜೇಕಬ್ ಡಫಿ 4 ಓವರ್‌ಗಳಲ್ಲಿ 15 ರನ್ ನೀಡಿ 4 ವಿಕೆಟ್ ಪಡೆದರೆ, ನಾಯಕ ಮಿಚೆಲ್ ಸ್ಯಾಂಟ್ನರ್ ಕೇವಲ 22 ರನ್ ನೀಡಿ 2 ವಿಕೆಟ್ ಪಡೆದರು. ಮ್ಯಾಟ್ ಹೆನ್ರಿ ಕೂಡ 2 ವಿಕೆಟ್ ಪಡೆದರು.
ನ್ಯೂಜಿಲೆಂಡ್‌ನ ಬ್ಯಾಟಿಂಗ್ ಹೀಗಿತ್ತು
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ರಚಿನ್ ರವೀಂದ್ರ ಕೇವಲ ಒಂದು ರನ್ ಗಳಿಸಿ ಔಟಾದರು. ಇದರ ನಂತರ, ಮಾರ್ಕ್ ಚಾಪ್ಮನ್ ಮತ್ತು ಟಿಮ್ ರಾಬಿನ್ಸನ್ ಅತ್ಯುತ್ತಮ ಅರ್ಧಶತಕದ ಜೊತೆಯಾಟವನ್ನಾಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಅಂತಿಮವಾಗಿ ರಾಬಿನ್ಸನ್ 41 ರನ್ ಮತ್ತು ಚಾಪ್ಮನ್ 42 ರನ್ ಕಲೆಹಾಕಿದರೆ, ವಿಕೆಟ್ ಕೀಪರ್ ಮಿಚೆಲ್ ಹೇ 19 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿ ತಂಡದ ಸ್ಕೋರ್ ಅನ್ನು 186 ರನ್‌ಗಳಿಗೆ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Mon, 30 December 24