2022 ರ ಡಿಸೆಂಬರ್ 31 ರಂದು ಭೀಕರ ಕಾರು ಅಪಘಾತಕ್ಕೀಡಾಗಿ (Car Accident) ಕ್ರಿಕೆಟ್ನಿಂದ ದೂರವಿರುವ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಪ್ರಸ್ತುತ ಚೇತರಿಕೆಯ ಹಾದಿಯಲ್ಲಿದ್ದು, ಮುಂಬರುವ ಐಪಿಎಲ್ನಲ್ಲಿ (IPL 2024) ಅಖಾಡಕ್ಕಿಳಿಯುವ ಮೂಲಕ ಮತ್ತೊಮ್ಮೆ ವೃತ್ತಿಪರ ಕ್ರಿಕೆಟ್ನತ್ತ ತನ್ನ ಗಮನ ಹರಿಸಲು ಮುಂದಾಗಿದ್ದಾರೆ. ಕಾರು ಅಪಘಾತದಲ್ಲಿ ಕಾಲು ಮುಳೆ ಮುರಿತಕ್ಕೊಳಗಾಗಿದ್ದ ಪಂತ್ಗೆ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆ ಬಳಿಕ ಬಿಸಿಸಿಐನ (BCCI) ವೈಧ್ಯರ ಮೇಲ್ವಿಚಾರಣೆಯಲ್ಲಿದ್ದ ಪಂತ್ ಇದೀಗ ಬೆಂಗಳೂರಿನ ಎನ್ಸಿಎನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಕೆಟ್ ಅಖಾಡಕ್ಕಿಳಿಯಲು ಸಜ್ಜಾಗಿರುವ ಪಂತ್, ಬರೋಬ್ಬರಿ 1 ವರ್ಷದ ಬಳಿಕ ಆ ಕರಾಳ ರಾತ್ರಿಯ ಬಗ್ಗೆ ಮೊದಲ ಬಾರಿಗೆ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರಸ್ತುತಪಡಿಸುತ್ತಿರುವ ಬಿಲೀವ್ ಎಂಬ ಸೀರಿಸ್ನಲ್ಲಿ ಡಿಸೆಂಬರ್ 31 ರ ಮಧ್ಯರಾತ್ರಿಯಂದು ನಡೆದ ಅಪಘಾತದ ಬಗ್ಗೆ ಮಾತನಾಡಿರುವ ಪಂತ್, ಆ ಕ್ಷಣದಲ್ಲಿ ತನಗೆ ಅನಿಸಿದ್ದನ್ನು ಮುಕ್ತವಾಗಿ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ. ಇದೀಗ ಸ್ಟಾರ್ ಸ್ಪೋರ್ಟ್ಸ್ ಈ ಸೀರಿಸ್ನ ಪ್ರೋಮೊವನ್ನು ಹರಿಬಿಟ್ಟಿದ್ದು ಅದರಲ್ಲಿ ಪಂತ್, ‘‘ಮೊದಲ ಬಾರಿಗೆ, ಈ ಜಗತ್ತಿನಲ್ಲಿ ನನ್ನ ಸಮಯ ಮುಗಿದಿದೆ ಎಂದು ನಾನು ಭಾವಿಸಿದೆ. ನನ್ನ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾದ ನಂತರ ನಾನು ಸಾಯುವುದು ಖಚಿತ ಎಂದೆನಿಸಿತು.
ತಿಮ್ಮಪ್ಪನ ದರ್ಶನ ಪಡೆದ ರಿಷಭ್ ಪಂತ್- ಅಕ್ಷರ್ ಪಟೇಲ್; ತಂಡ ಸೇರುವುದು ಯಾವಾಗ? ವಿಡಿಯೋ ನೋಡಿ
ಅಪಘಾತದ ಸಮಯದಲ್ಲಿ ಆದ ಗಾಯಗಳ ಬಗ್ಗೆ ನನಗೆ ತಿಳಿದಿತ್ತು. ಆದರೆ ನಾನು ಅದೃಷ್ಟಶಾಲಿಯಾಗಿದ್ದೆ ಏಕೆಂದರೆ ನನಗಾದ ಗಾಯಗಳು ಹೆಚ್ಚು ಗಂಭೀರವಾಗಿರಲಿಲ್ಲ. ಆ ಸಮಯದಲ್ಲಿ ಯಾವುದೋ ಒಂದು ಅಗೋಚರ ಶಕ್ತಿ ನನ್ನನ್ನು ಕಾಪಾಡಿದ ಹಾಗೆ ಅನಿಸಿತು. ನಾನು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರನ್ನು ಕೇಳಿದೆ. ಅದಕ್ಕೆ ಅವರು 16ರಿಂದ 18 ತಿಂಗಳು ಬೇಕು ಎಂದರು. ಈ ಚೇತರಿಕೆಯ ಸಮಯವನ್ನು ಕಡಿಮೆ ಮಾಡಲು ನಾನು ಕಷ್ಟಪಟ್ಟು ಕೆಲಸ ಮಾಡಬೇಕೆಂದು ನನಗೆ ತಿಳಿದಿತ್ತು. ನಾನು ತುಂಬಾ ಅದೃಷ್ಟಶಾಲಿ. ಏಕೆಂದರೆ ನನಗೆ ಪುನರ್ಜನ್ಮ ಸಿಕ್ಕಿದೆ. ಎಲ್ಲರಿಗೂ ಈ ರೀತಿಯ ಅವಕಾಶ ಸಿಗುವುದಿಲ್ಲ’’ ಎಂದು ಪಂತ್ ಹೇಳಿಕೊಂಡಿದ್ದಾರೆ.
Rishabh Pant’s Perseverance Through Adversity & Road To Recovery
Watch as he narrates and describes his journey towards glory, for the FIRST TIME!
Thu 1st Feb, 7 PM and 10 PM, and on Fri 2nd Feb, 10:15 PM – and LIVE on 1st Feb at 7:30 PM on our YouTube channel! pic.twitter.com/rXJTwd36vb
— Star Sports (@StarSportsIndia) January 29, 2024
ಪ್ರಸ್ತುತ ಚೇತರಿಸಿಕೊಂಡಿರುವ ರಿಷಬ್ ಪಂತ್ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಂತ್ ಪೂರ್ಣ ಪ್ರಮಾಣದ ಆಟಗಾರನಾಗಿ ಆಡುವ ಸಾಧ್ಯತೆ ಕಡಿಮೆ ಇದ್ದರೂ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ಆಡಿಸಲು ಫ್ರಾಂಚೈಸ್ ಯೋಚಿಸಿದೆ. ಅದರಂತೆ ಐಪಿಎಲ್ನಲ್ಲಿ ಪಂತ್ ಗಮನಾರ್ಹ ಪ್ರದರ್ಶನ ನೀಡಿದರೆ, ಈ ವರ್ಷ ಜೂನ್‌ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ.
ರಿಷಬ್ ಪಂತ್ ಇದುವರೆಗೆ ಟೀಂ ಇಂಡಿಯಾ ಪರ 33 ಟೆಸ್ಟ್ ಪಂದ್ಯಗಳಲ್ಲಿ 5 ಶತಕ ಮತ್ತು 11 ಅರ್ಧಶತಕ ಸೇರಿದಂತೆ 43.67 ಸರಾಸರಿಯಲ್ಲಿ 2271 ರನ್ ಗಳಿಸಿದ್ದಾರೆ. ಹಾಗೆಯೇ 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ 987 ರನ್ ಕಲೆಹಾಕಿದ್ದಾರೆ. ಭಾರತದ ಪರ 30 ಏಕದಿನ ಪಂದ್ಯಗಳನ್ನೂ ಆಡಿರುವ ಪಂತ್, 34.60 ರ ಸರಾಸರಿಯಲ್ಲಿ 865 ರನ್ (1 ಶತಕ, 5 ಅರ್ಧಶತಕ) ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Tue, 30 January 24