
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ ಮಹಿಳಾ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡ ಜಯ ಸಾಧಿಸಿದೆ. ಮಳೆ ಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸಿವರ್ ಬ್ರಂಟ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಕೇವಲ 3 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಹರ್ಲೀನ್ ಡಿಯೋಲ್ ಕೇವಲ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ ಕಲೆಹಾಕಿದ್ದು ಕೇವಲ 7 ರನ್ ಮಾತ್ರ. ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ ಮಂಧಾನ 42 ರನ್‌ಗಳ ಕೊಡುಗೆ ನೀಡಿದರು.
ಇನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ದೀಪ್ತಿ ಶರ್ಮಾ 30 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಪರಿಣಾಮ 29 ಓವರ್‌ಗಳಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಮಳೆ ನಿಂತ ಬಳಿಕ ಡಕ್ವರ್ತ್ ಲೂಯಿಸ್ (DLS) ನಿಯಮದ ಪ್ರಕಾರ ಇಂಗ್ಲೆಂಡ್ ತಂಡಕ್ಕೆ 24 ಓವರ್‌ಗಳಲ್ಲಿ 115 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಆರಂಭಿಕ ಆಟಗಾರ್ತಿ ಆ್ಯಮಿ ಜೋನ್ಸ್ 46 ರನ್ ಬಾರಿಸಿದರೆ, ಟ್ಯಾಮಿ ಬ್ಯೂಮಾಂಟ್ 34 ರನ್ಗಳಿಸಿದರು.
ಇನ್ನು ನಾಯಕಿ ನ್ಯಾಟ್ ಸಿವರ್ ಬ್ರಂಟ್ 21 ರನ್ಗಳನ್ನು ಕಲೆಹಾಕಿದರು. ಈ ಮೂಲಕ ಇಂಗ್ಲೆಂಡ್ ತಂಡವು 21 ಓವರ್‌ಗಳಲ್ಲಿ 116 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಉಭಯ ತಂಡಗಳ ನಡುವಣ ಮೂರು ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದ್ದು, ಜುಲೈ 22 ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿ ಜಯಿಸಲಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಟ್ಯಾಮಿ ಬ್ಯೂಮಾಂಟ್ , ಆ್ಯಮಿ ಜೋನ್ಸ್ (ವಿಕೆಟ್ ಕೀಪರ್) , ಎಮ್ಮಾ ಲ್ಯಾಂಬ್ , ನ್ಯಾಟ್ ಸಿವರ್-ಬ್ರಂಟ್ (ನಾಯಕಿ) , ಸೋಫಿಯಾ ಡಂಕ್ಲಿ , ಮಾಯಾ ಬೌಚಿಯರ್ , ಎಮ್ ಆರ್ಲಾಟ್ , ಸೋಫಿ ಎಕ್ಲೆಸ್ಟೋನ್ , ಷಾರ್ಲೆಟ್ ಡೀನ್ , ಲಿನ್ಸೆ ಸ್ಮಿತ್ , ಲಾರೆನ್ ಬೆಲ್.
ಇದನ್ನೂ ಓದಿ: WCL 2025: ಪಾಕಿಸ್ತಾನ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಐವರು ಭಾರತೀಯರು
ಭಾರತ ಪ್ಲೇಯಿಂಗ್ 11: ಪ್ರತೀಕಾ ರಾವಲ್ , ಸ್ಮೃತಿ ಮಂಧಾನ , ಹರ್ಲೀನ್ ಡಿಯೋಲ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ದೀಪ್ತಿ ಶರ್ಮಾ , ರಿಚಾ ಘೋಷ್ (ವಿಕೆಟ್ ಕೀಪರ್) , ಅರುಂಧತಿ ರೆಡ್ಡಿ , ಸ್ನೇಹ ರಾಣಾ , ಶ್ರೀ ಚರಣಿ , ಕ್ರಾಂತಿ ಗೌಡ್.
Published On - 7:55 am, Sun, 20 July 25