ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ ಲೀಗ್ (IPL 2021) ಹಂತಕ್ಕೆ ಇಂದು (ಅಕ್ಟೋಬರ್ 8) ತೆರೆಬೀಳಲಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಪ್ಲೇಆಫ್ ಪ್ರವೇಶಿಸಿದೆ. ಅತ್ತ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ದದ ಪಂದ್ಯದಲ್ಲಿ ಹೀನಾಯ ಸೋಲನುಭವಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ (RR) ಕೂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಸ್ಟಾರ್ ಆಟಗಾರರ ದಂಡೇ ಹೊಂದಿದ್ದರೂ ರಾಜಸ್ಥಾನ್ ತಂಡವು ಈ ಸಲ ಭರ್ಜರಿ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿರುವ 14 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಗೆದ್ದಿರೋದು ಕೇವಲ 5 ಪಂದ್ಯಗಳಲ್ಲಿ ಮಾತ್ರ. 9 ಸೋಲುಗಳೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ ಆರ್ಆರ್ ತಂಡವು 7ನೇ ಸ್ಥಾನದಲ್ಲಿದೆ. ಈ ಹೀನಾಯ ಪ್ರದರ್ಶನದ ಬೆನ್ನಲ್ಲೇ ತಂಡದಲ್ಲಿದ್ದ ಸ್ಟಾರ್ ಆಲ್ರೌಂಡರ್ ಕ್ರಿಸ್ ಮೊರೀಸ್ (Chris Morris) ಪ್ರದರ್ಶನದ ಬಗ್ಗೆ ಚರ್ಚೆಗಳು ಶುರುವಾಗಿದೆ.
ಏಕೆಂದರೆ ಕ್ರಿಸ್ ಮೊರೀಸ್ (Chris Morris) ಅವರನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಬಾರಿ 16.25 ಕೋಟಿ ರೂ. ನೀಡಿ ಖರೀದಿಸಿತು. ಈ ಮೂಲಕ ಐಪಿಎಲ್ ಹರಾಜಿನಲ್ಲಿ ಬಿಕರಿಯಾದ ಅತ್ಯಂತ ದುಬಾರಿ ಆಟಗಾರ ಎಂಬ ಟ್ಯಾಗ್ ಲೈನ್ ಮೊರೀಸ್ ಹೊಂದಿದ್ದರು. ಇದಾಗ್ಯೂ ಮೋರಿಸ್ ಆಡಿರುವುದು 11 ಪಂದ್ಯಗಳನ್ನು ಮಾತ್ರ. ಉಳಿದ 3 ಪಂದ್ಯಗಳಲ್ಲಿ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ. ಇನ್ನು ಈ 11 ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದೆ ಹೆಚ್ಚು. ಏಕೆಂದರೆ ಮೊರೀಸ್ 11 ಪಂದ್ಯಗಳಿಂದ ಪಡೆದಿರುವುದು 15 ವಿಕೆಟ್ಗಳು ಮಾತ್ರ. ಅದು ಕೂಡ ಪ್ರತಿ ಓವರ್ಗೆ 9.17 ರನ್ ಬಿಟ್ಟುಕೊಡುವ ಮೂಲಕ ಎಂಬುದು ವಿಶೇಷ. ಇನ್ನು ಆಲ್ರೌಂಡರ್ ಆಗಿ ತಂಡದಲ್ಲಿದ್ದ ಮೊರೀಸ್ 11 ಪಂದ್ಯಗಳಿಂದ ಬ್ಯಾಟ್ ಮೂಲಕ ಕಲೆಹಾಕಿದ್ದು ಕೇವಲ 67 ರನ್. ಅಂದರೆ ರಾಜಸ್ಥಾನ್ ರಾಯಲ್ಸ್ ತಂಡದ ಪ್ರದರ್ಶನದಲ್ಲಿ ಕ್ರಿಸ್ ಮೋರಿಸ್ ಬ್ಯಾಟ್ ಮೂಲಕ ಯಾವುದೇ ಕೊಡುಗೆ ನೀಡಿಲ್ಲ ಎಂದೇ ಹೇಳಬಹುದು. ಹೀಗಾಗಿಯೇ ಐಪಿಎಲ್ ಸೀಸನ್ 14ರ ಅಟ್ಟರ್ ಫ್ಲಾಫ್ ಆಟಗಾರನಾಗಿ ಮೊರೀಸ್ ಗುರುತಿಸಿಕೊಂಡಿದ್ದಾರೆ.
ಇನ್ನು 15 ವಿಕೆಟ್ ಪಡೆದಿರುವ ಮೊರೀಸ್ ಗಳಿಸಿದ್ದು ರಾಜಸ್ಥಾನ್ ರಾಯಲ್ಸ್ ತಂಡದಿಂದ ಗಳಿಸಿದ್ದು 16.25 ಕೋಟಿ ರೂ., ಅಂದರೆ ಮೊರೀಸ್ ಪಡೆದಿರುವ ಒಂದು ವಿಕೆಟ್ ಬೆಲೆ 1.08 ಕೋಟಿ ರೂ. ಎಂದರೆ ನಂಬಲೇಬೇಕು. ಇನ್ನು ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ನೋಡಿದರೂ ಪ್ರತಿ ಪಂದ್ಯಕ್ಕೂ ಕ್ರಿಸ್ ಮೊರೀಸ್ 1 ಕೋಟಿಗೂ ಅಧಿಕ ಮೊತ್ತ ಪಡೆದಿದ್ದಾರೆ. ಆದಾಗ್ಯೂ, ಕ್ರಿಸ್ ಮೋರಿಸ್ ನಿರೀಕ್ಷಿತ ಪ್ರದರ್ಶನ ನೀಡದಿರುವುದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ದುರಾದೃಷ್ಟ ಎನ್ನದೇ ವಿಧಿಯಿಲ್ಲ.
ಇದನ್ನೂ ಓದಿ: IPL 2021: ಐಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್
ಇದನ್ನೂ ಓದಿ: Mumbai Indians: ಟಾಸ್ ಮೂಲಕ ನಿರ್ಧಾರವಾಗಲಿದೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಭವಿಷ್ಯ..!
(IPL 2021: Costliest IPL player Chris Morris flops)