ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ (IPL 2021 Phase 2) ಎರಡನೇ ಚರಣಕ್ಕೆ ನಾಳೆ ಸೆಪ್ಟೆಂಬರ್ 19 ರಂದು ಚಾಲನೆ ಸಿಗಲಿದೆ. ಐಪಿಎಲ್ ಇತಿಹಾಸದ ಎರಡು ಬಲಿಷ್ಠ ತಂಡಗಳಾದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (MIvsCSK) ತಂಡಗಳ ನಡುವೆ ಕಾದಾಟ ನಡೆಯುವ ಮೂಲಕ ಟೂರ್ನಿ ಪುನರಾರಂಭಗೊಳ್ಳಲಿದೆ. ಈಗಿನ ಪಾಯಿಂಟ್ ಟೇಬಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitlas) 12 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 10 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರ್ಸಿಬಿ (RCB) ತಂಡ ಕೂಡ 10 ಪಾಯಿಂಟ್ನೊಂದಿಗೆ 3ನೇ ಸ್ಥಾನ ಅಲಂಕರಿಸಿದೆ. ಮುಂಬೈ ಇಂಡಿಯನ್ಸ್ (Mumbai Indians) 8 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಇದರಲ್ಲಿ ಪ್ಲೇ ಆಫರ್ ಲೆಕ್ಕಾಚಾರ ಹೇಗೆ ಎಂಬುದನ್ನು ನೋಡುವುದಾದರೆ…
ಪಾಯಿಂಟ್ ಟೇಬಲ್ನಲ್ಲಿ ಟಾಪ್ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇನ್ನು ಆರು ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಎರಡು ಪಂದ್ಯ ಗೆದ್ದರೆ ಸುಲಭವಾಗಿ ಪ್ಲೇ ಆಫ್ಗೆ ಲಗ್ಗೆಯಿಡಲಿದೆ. ಅಲ್ಲದೆ ನಂಬರ್ ಒನ್ ಸ್ಥಾನದಲ್ಲೇ ಭದ್ರವಾಗಿ ನೆಲೆಯೂರುವ ಸಂಭವವಿದ್ದು, ಕನಿಷ್ಠ ಎರಡನೇ ಸ್ಥಾನ ಪಡೆದುಕೊಂಡರೂ ರಿಷಭ್ ಪಂತ್ ಪಡೆಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.
ಇನ್ನೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೂಡ ಏಳು ಪಂದ್ಯಗಳು ಬಾಕಿ ಉಳಿದಿವೆ. ಇದರಲ್ಲಿ ಕೇವಲ ಮೂರು ಪಂದ್ಯಗಳನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಹೀಗಾದಲ್ಲಿ ಧೋನಿ ಪಡೆ ದಾಖಲೆಯ 11ನೇ ಬಾರಿ ಪ್ಲೇ ಆಫ್ ಪ್ರವೇಶಿಸಿದಂತೆ ಆಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ 7 ಪಂದ್ಯಗಳು ಬಾಕಿ ಇದೆ. ಇದರಲ್ಲಿ ಮೂರು ಪಂದ್ಯವನ್ನು ಗೆದ್ದರೆ ಸುಲಭವಾಗಿ ಪ್ಲೇ ಆಫ್ ಟಿಕೆಟ್ ದೊರೆಯುತ್ತದೆ. ಹೀಗಾಗಿ ಕೊಹ್ಲಿ ಪಡೆ ಈ ಬಾರಿಯೂ ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಸಿಎಸ್ಕೆ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಎರಡು ಪಂದ್ಯಗಳಲ್ಲಿ ಆರ್ಸಿಬಿ ಸೋತಿದೆ.
ಮುಂಬೈ ಇಂಡಿಯನ್ಸ್ನ ರೋಹಿತ್ ಶರ್ಮಾ ಪಡೆಗೆ ಪ್ಲೇ ಆಫ್ ಹಾದಿ ಸುಗಮವಾಗಿಲ್ಲ. ಬಾಕಿಯಿರುವ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲ್ಲಬೇಕಾದ ಒತ್ತಡದಲ್ಲಿದೆ. ಐಪಿಎಲ್ ಇತಿಹಾಸದಲ್ಲಿ ದಾಖಲೆಯ ಐದು ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಈ ಬಾರಿ ಕಳಪೆ ಆರಂಭ ಪಡೆದುಕೊಂಡಿತ್ತು. ನಂತರ ಕಮ್ಬ್ಯಾಕ್ ಮಾಡಿತ್ತು. ಆದರೆ, ಎರಡನೇ ಚರಣದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ರಾಜಸ್ಥಾನ್ ರಾಯಲ್ಸ್ ಕೂಡ ಬಾಕಿಉಳಿದಿರುವ ಏಳು ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಪಂಜಾಬ್ ಕಿಂಗ್ಸ್ಗೆ ಉಳಿದಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆಲ್ಲಬೇಕು. ಅಂತೆಯೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಲಿರುವ ಏಳು ಪಂದ್ಯಗಳಲ್ಲಿ ಐದು ಪಂದ್ಯವನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಟಿಕೆಟ್ ದೊರೆಯಲಿದೆ. ಇತ್ತ ಸನ್ರೈಸರ್ಸ್ ಹೈದರಾಬಾದ್ ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಬಾಕಿ ಉಳಿದಿರುವ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆದ್ದರೆ ಮಾತ್ರ ಹೈದರಾಬಾದ್ ತಂಡ ಪ್ಲೇ ಆಫ್ಗೆ ಪ್ರವೇಶಿಸುವ ಅವಕಾಶವಿದೆ.
IPL 2021: ಐಪಿಎಲ್ 14ನೇ ಆವೃತ್ತಿ ಪುನರಾರಂಭಕ್ಕೆ ಕೇವಲ ಒಂದು ದಿನ ಬಾಕಿ: ನಿಮಗೆ ಗೊತ್ತಿರಲಿ ಈ ಸಂಗತಿಗಳು
(IPL 2021 Phase 2: Virat Kohli RCB need to win in 3 of the 7 remaining matches to qualify for IPL 2021 Playoffs)
Published On - 11:06 am, Sat, 18 September 21