ಐಪಿಎಲ್ ಸೀಸನ್ 15 ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಆಡಿರುವ ಮೊದಲ ಮೂರು ಪಂದ್ಯಗಳಲ್ಲಿ 2 ಮ್ಯಾಚ್ನಲ್ಲಿ ಗೆದ್ದಿದೆ. ವಿಶೇಷ ಎಂದರೆ ಈ ಮೂರು ಪಂದ್ಯಗಳಲ್ಲಿ ಆರ್ಸಿಬಿ ತಂಡದ ಸ್ಟಾರ್ ಆಟಗಾರರು ಹೊರಗುಳಿದಿದ್ದರು. ಅಂದರೆ ಆರ್ಸಿಬಿ ತಂಡದ ಬ್ಯಾಟಿಂಗ್ ಶಕ್ತಿ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯಗಳನ್ನು ಆಡಿರಲಿಲ್ಲ. ಅಲ್ಲದೆ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಕೂಡ ಈ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದಾಗ್ಯೂ ಆರ್ಸಿಬಿ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದೆ. ಇದೀಗ ಆರ್ಸಿಬಿ ತಂಡದ ನಾಲ್ಕನೇ ಪಂದ್ಯದಲ್ಲಿ ಸ್ಪೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಕಣಕ್ಕಿಳಿಯಲಿದ್ದಾರೆ.
ಈಗಾಗಲೇ ಆರ್ಸಿಬಿ ತಂಡವನ್ನು ಸೇರಿಕೊಂಡಿರುವ ಮ್ಯಾಕ್ಸ್‌ವೆಲ್ ಮುಂದಿನ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಪ್ರಸ್ತುತ ತಂಡ ನೀಡಿರುವ ಪ್ರದರ್ಶನದ ಬಗ್ಗೆ ಮ್ಯಾಕ್ಸ್‌ವೆಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ತಂಡವು ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಇದೇ ಪ್ರದರ್ಶನವನ್ನು ತಂಡು ಮುಂದುವರೆಸಿಕೊಂಡು ಹೋಗುವ ಭರವಸೆ ಇದೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ತಂಡದಲ್ಲಿ ಹೊಸ ಫಿನಿಶರ್ ಆಗಿ ಕಾಣಿಸಿಕೊಂಡಿರುವ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಅನ್ನು ಹಾಡಿಹೊಗಳಿದ್ದಾರೆ. ಡಿಕೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನಾನು ಕೂಡ ದಿನೇಶ್ ಕಾರ್ತಿಕ್ ಜೊತೆಗೂಡಲು ಉತ್ಸುಕನಾಗಿದ್ದೇನೆ. ಏಕೆಂದರೆ ಡಿಕೆ ನನ್ನ ಹಳೆಯ ಗೆಳೆಯ. ನಾವಿಬ್ಬರೂ ಹಳೆಯ ತಂಡದಲ್ಲಿ ಜೊತೆಯಾಗಿ ಆಡಿದ್ದೇವೆ.
2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾನು ಹಾಗೂ ದಿನೇಶ್ ಕಾರ್ತಿಕ್ ಜೊತೆಯಾಗಿ ಆಡಿದ್ದೆವು. ಇದೀಗ ಬರೋಬ್ಬರಿ ಒಂಬತ್ತು ವರ್ಷಗಳ ನಂತರ ನಾವು ಮತ್ತೆ ಒಂದೇ ತಂಡದ ಭಾಗವಾಗಿದ್ದೇವೆ. ಇದು ತುಂಬಾ ಖುಷಿಯ ವಿಚಾರ. ಇದೀಗ ನಮ್ಮ ಬ್ಯಾಟಿಂಗ್ ಲೈನ್-ಅಪ್ ತುಂಬಾ ಬಲಿಷ್ಠವಾಗಿದೆ. ದಿನೇಶ್ ಕಾರ್ತಿಕ್ ತಮ್ಮ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇದೀಗ ನಾನು ಕೂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಸಾಥ್ ನೀಡಬೇಕೆಂದಿರುವೆ ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.
ಈ ಮೂಲಕ ಆರ್ಸಿಬಿ ತಂಡದ ಫಿನಿಶರ್ಗಳಾಗಿ ಗ್ಲೆನ್ ಮ್ಯಾಕ್ಸ್‌ವೆಲ್-ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಈ ಸ್ಪೋಟಕ ಜೋಡಿಯ ಜೊತೆಯಾಗುತ್ತಿರುವುದು ಎದುರಾಳಿ ಬೌಲರ್ಗಳಿಗೆ ಹೊಸ ಚಿಂತೆಯನ್ನುಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.
RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?