ಐಪಿಎಲ್ ಸೀಸನ್ 15 ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಉತ್ತಮ ಪ್ರದರ್ಶನ ಮುಂದುವರೆಸಿದೆ. ಇದುವರೆಗೆ 3 ಪಂದ್ಯಗಳಲ್ಲಿ 2ರಲ್ಲಿ ಗೆಲುವು ದಾಖಲಿಸಿ ಗಮನ ಸೆಳೆದಿದ್ದಾರೆ. ಅದರಲ್ಲೂ ಟೂರ್ನಿಯ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಜಯ ಸಾಧಿಸಿತ್ತು. ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಪ್ಯಾಟ್ ಕಮಿನ್ಸ್ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಇದಲ್ಲದೆ ಈ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ರಾಸಿಖ್ ಸಲಾಮ್ ದಾರ್ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ರಾಸಿಖ್ ಈ ಬಾರಿ ಕೆಕೆಆರ್ ತಂಡದಲ್ಲಿದ್ದಾರೆ. ವಿಶೇಷ ಎಂದರೆ 22 ವರ್ಷ ರಾಸಿಖ್ ಬರೋಬ್ಬರಿ 3 ವರ್ಷಗಳ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದರೆ ಜಮ್ಮು-ಕಾಶ್ಮೀರದ ಯುವ ವೇಗಿ ಈ ಹಿಂದೆ ಬ್ಯಾನ್ ಆಗಿದ್ದರು.
2019 ರಲ್ಲಿ ಜನನ ಪ್ರಮಾಣಪತ್ರದಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಬಿಸಿಸಿಐ ರಾಸಿಖ್ ಸಲಾಮ್ ದಾರ್ ಅವರನ್ನು 2 ವರ್ಷಗಳ ಕಾಲ ನಿಷೇಧಿಸಿತ್ತು. ಅಲ್ಲದೆ ಅಂಡರ್-19 ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಯುವ ವೇಗಿಯನ್ನು ಆ ಬಳಿಕ ತಂಡದಿಂದ ಕೈಬಿಡಲಾಗಿತ್ತು. ಬಿಸಿಸಿಐ ನಿಷೇಧದ ಕಾರಣ ರಾಸಿಖ್ ಆ ಬಳಿಕ ಐಪಿಎಲ್ನಲ್ಲಿ ಕಾಣಿಸಿಕೊಂಡಿರಲಿಲ್ಲ.
3 ವರ್ಷಗಳ ನಂತರ ಇದೀಗ ರಾಸಿಖ್ ದಾರ್ ಮುಂಬೈ ಇಂಡಿಯನ್ಸ್ ವಿರುದ್ದ ಪಂದ್ಯ ಆಡಿದ್ದಾರೆ. ಈ ಹಿಂದೆ 2019 ರಲ್ಲಿ ರಾಸಿಖ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪದಾರ್ಪಣೆ ಮಾಡಿದ್ದ ಯುವ ವೇಗಿ 4 ಓವರ್‌ಗಳಲ್ಲಿ 42 ರನ್‌ಗಳನ್ನು ನೀಡಿದ್ದರು. ಈ ಬಾರಿ ಕೆಕೆಆರ್ ತಂಡವು 20 ಲಕ್ಷ ರೂ. ಮೂಲಬೆಲೆಗೆ ರಾಸಿಖ್ರನ್ನು ಖರೀದಿಸಿದೆ.
ಪ್ರಥಮ ದರ್ಜೆಯ 2 ಪಂದ್ಯಗಳಲ್ಲಿ 7 ವಿಕೆಟ್ ಹಾಗೂ ಲಿಸ್ಟ್-ಎ 2 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿರುವ ರಾಸಿಖ್ ಈ ಹಿಂದೆ ಉದಯೋನ್ಮುಖ ಯುವ ವೇಗಿಯಾಗಿ ಗುರುತಿಸಿಕೊಂಡಿದ್ದರು. ಇದರ ನಡುವೆ 2 ವರ್ಷಗಳ ಬ್ಯಾನ್ ಕಾರಣ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದರು. ಇದೀಗ ಹೊಸ ಇನಿಂಗ್ಸ್ ಆರಂಭಿಸಿರುವ ರಾಸಿಖ್ ಮುಂಬೈ ಇಂಡಿಯನ್ಸ್ ವಿರುದ್ದ 3 ಓವರ್ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ ಮಿಂಚಿದ್ದಾರೆ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?