IPL 2022: ಐಪಿಎಲ್‌ ಹರಾಜು ಪ್ರಾಣಿಗಳ ವ್ಯಾಪಾರದಂತೆ.. ವಿಧಾನ ಬದಲಾಯಿಸಿ: ಹರಾಜಿನ ಬಗ್ಗೆ ರಾಬಿನ್ ಉತ್ತಪ್ಪ ಕಿಡಿ!

| Updated By: ಪೃಥ್ವಿಶಂಕರ

Updated on: Feb 22, 2022 | 6:41 PM

Robin Uthappa: ಆಟಗಾರರ ಹರಾಜು, ಒಂದು ರೀತಿ ನೀವು ಹಿಂದೆಂದೋ ಬರೆದಿದ್ದ ಪರೀಕ್ಷೆಗೆ ಇದೀಗ ಫಲಿತಾಂಶ ಪಡೆಯಲು ಕಾಯುತ್ತಿರುವ ಅನುಭವ ತರುತ್ತದೆ. ಈ ರೀತಿಯ ಹರಾಜು ಭಾರತದಲ್ಲಿ ಮಾತ್ರ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ.

IPL 2022: ಐಪಿಎಲ್‌ ಹರಾಜು ಪ್ರಾಣಿಗಳ ವ್ಯಾಪಾರದಂತೆ.. ವಿಧಾನ ಬದಲಾಯಿಸಿ: ಹರಾಜಿನ ಬಗ್ಗೆ ರಾಬಿನ್ ಉತ್ತಪ್ಪ ಕಿಡಿ!
ರಾಬಿನ್ ಉತ್ತಪ್ಪ
Follow us on

ಕೆಲವು ದಿನಗಳ ಹಿಂದೆ ಐಪಿಎಲ್ ಮೆಗಾ ಹರಾಜು (IPL auction) ಮುಗಿದಿದ್ದು 10 ಐಪಿಎಲ್ ತಂಡಗಳು ಬಲಿಷ್ಠ ತಂಡ ಕಟ್ಟುವಲ್ಲಿ ಯಶಸ್ವಿಯಾಗಿವೆ. ಈ ಸಾಲಿನಲ್ಲಿ ಕರ್ನಾಟಕದ ಸ್ಫೋಟಕ ಬ್ಯಾಟರ್ ಉತ್ತಪ್ಪ (Robin Uthappa) ಕೂಡ ತನ್ನ ಹಳೆಯ ತಂಡ ಚೆನ್ನೈಗೆ ಮೂಲ ಬೆಲೆ 2 ಕೋಟಿ ರೂ.ಗೆ ಸೇರಿಕೊಂಡಿದ್ದಾರೆ. ಆದರೆ ಉತ್ತಮ ಮೆಗಾ ಹರಾಜಿನ ಬಗ್ಗೆಗೆ ತೀವ್ರ ಟೀಕೆ ಮಾಡಿದ್ದಾರೆ. ಹರಾಜಿನ ವಿಧಾನ ನೋಡಿದರೆ ಎಲ್ಲ ಆಟಗಾರರಿಗೂ ಏನೋ ಹರಾಜು ಹಾಕಿ ಅದರಂತೆ ಖರೀದಿ ನಡೆಯುತ್ತಿದೆ ಎಂದು ಅನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ವಿಧಾನ ಸರಿಯಿಲ್ಲ ಎಂದಿದ್ದಾರೆ. ಮತ್ತೊಮ್ಮೆ ಚೆನ್ನೈ ಪರ ಆಡುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. IPL 2021 ರಲ್ಲಿ ಸಿಎಸ್​ಕೆ (Chennai Super Kings) ಪರವಾಗಿ ಉತ್ತಪ್ಪ ಕೆಲವು ಉತ್ತಮ ಇನ್ನಿಂಗ್ಸ್ ಆಡಿದರು. ಮೊದಲ ಕ್ವಾಲಿಫೈಯರ್ ನಲ್ಲಿ 44 ಎಸೆತಗಳಲ್ಲಿ 63 ರನ್ ಗಳಿಸಿದ್ದರು. ನಂತರ ಅವರು ಅಂತಿಮ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 15 ಎಸೆತಗಳಲ್ಲಿ 31 ರನ್ ಗಳಿಸಿದರು.

ರಾಬಿನ್ ಉತ್ತಪ್ಪ ಮತ್ತು ಅವರ ಕುಟುಂಬ ಸಿಎಸ್‌ಕೆ ತಂಡಕ್ಕೆ ಸೇರಲು ಆಶಿಸುತ್ತಿತ್ತು ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಟಿವಿ9 ಅಂಗಸಂಸ್ಥೆ ನ್ಯೂಸ್9 ಜೊತೆ ಮಾತನಾಡಿದ ಅವರು, ಸಿಎಸ್‌ಕೆಯಂತಹ ತಂಡದಲ್ಲಿ ಆಡುವುದು ನನ್ನ ಆಸೆ. ಮತ್ತೆ ಸಿಎಸ್‌ಕೆ ಸೇರಬೇಕೆಂಬುದು ನನ್ನ ಪ್ರಾರ್ಥನೆಯಾಗಿತ್ತು. ನನ್ನ ಕುಟುಂಬ ಮತ್ತು ನನ್ನ ಮಗ ಕೂಡ ಅದಕ್ಕಾಗಿ ಪ್ರಾರ್ಥಿಸಿದರು. ನಾನು ಸುರಕ್ಷಿತ ಮತ್ತು ಗೌರವಾನ್ವಿತ ಎಂದು ಪರಿಗಣಿಸುವ ತಂಡದ ಭಾಗವಾಗಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.

ಪ್ರಾಣಿ ಹರಾಜಿನಂತಿದೆ

ರಾಬಿನ್ ಉತ್ತಪ್ಪ 2006 ಮತ್ತು 2015 ರ ನಡುವೆ ಭಾರತಕ್ಕಾಗಿ 46 ODI ಮತ್ತು 13 T20 ಪಂದ್ಯಗಳನ್ನು ಆಡಿದ್ದಾರೆ. IPL ನಲ್ಲಿ ಬಿಡ್ಡಿಂಗ್ ಬದಲಿಗೆ ಕರಡು ನೀತಿಯನ್ನು ತರುವ ಅಗತ್ಯವನ್ನು ಸಮರ್ಥಿಸಿಕೊಂಡರು. ಆಟಗಾರರ ಹರಾಜು, ಒಂದು ರೀತಿ ನೀವು ಹಿಂದೆಂದೋ ಬರೆದಿದ್ದ ಪರೀಕ್ಷೆಗೆ ಇದೀಗ ಫಲಿತಾಂಶ ಪಡೆಯಲು ಕಾಯುತ್ತಿರುವ ಅನುಭವ ತರುತ್ತದೆ. ಈ ರೀತಿಯ ಹರಾಜು ಭಾರತದಲ್ಲಿ ಮಾತ್ರ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಯಾರ ಕಾರ್ಯನಿರ್ವಹಣೆಯಲ್ಲಿ ಯಾರ ಅಭಿಪ್ರಾಯಗಳು ಭಿನ್ನವಾಗಿರುತ್ತವೆ ಎಂಬುದು ಬೇರೆ ವಿಷಯ. ಆದರೆ ಯಾರು ಮತ್ತು ಎಷ್ಟು ಬೆಲೆಗೆ ಮಾರಾಟವಾಗುತ್ತಾರೆ ಎಂಬುದು ಸಂಪೂರ್ಣವಾಗಿ ವಿಭಿನ್ನ ವಿಷಯವಾಗಿದೆ.

ಮಾರಾಟವಾಗದ ಆಟಗಾರರಿಗೆ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಹರಾಜಿನಲ್ಲಿ ಮಾರಾಟವಾಗದೇ ಉಳಿಯುವ ಆಟಗಾರರು ಅನುಭವಿಸುವ ಮಾನಸಿಕ ಒತ್ತಡವನ್ನು ಯಾರೊಬ್ಬರೂ ಅಂದಾಜಿಸಲು ಸಾಧ್ಯವಿಲ್ಲ. ಇದು ಆಟಗಾರರನ್ನು ಮಾನಸಿಕವಾಗಿ ಸೋಲಿಸುತ್ತದೆ. ಒಬ್ಬ ಕ್ರಿಕೆಟಿಗನಾಗಿ ನಿಮ್ಮ ಯೋಗ್ಯತೆಗೆ ಬೇರೊಬ್ಬರು ಎಷ್ಟು ಬೆಲೆ ಕೊಡುತ್ತಿದ್ದಾರೆ ಎಂಬ ಸ್ಥಿತಿಗೆ ಬಂದು ನಿಂತುಬಿಡುತ್ತದೆ. ಇದೊಂದು ಹುಚ್ಚುತನದ ವಿಧಾನವಾಗಿದೆ ಎಂದು ಉತ್ತಪ್ಪ ಐಪಿಎಲ್ ಹರಾಜಿನ ವಿಧಾನದ ಬಗ್ಗೆ ಕಿಡಿ ಕಾರಿದ್ದಾರೆ.

ಎಲ್ಲರಿಗೂ ಅನುಕೂಲವಾಗುವಂತೆ ಕರಡು ನೀತಿ ಇರಬೇಕು. ಅದು ತುಂಬಾ ಗೌರವಯುತವಾಗಿರುತ್ತದೆ. ಐಪಿಎಲ್ 2022 ರಲ್ಲಿ ಆಡುವ ಕುರಿತು ಮಾತನಾಡಿದ ರಾಬಿನ್ ಉತ್ತಪ್ಪ, ನಾನು ಸಿಎಸ್‌ಕೆಯೊಂದಿಗೆ ನನ್ನ ವೃತ್ತಿಜೀವನವನ್ನು ಕೊನೆಗೊಳಿಸಲು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:Robin Uthappa: ಉತ್ತಪ್ಪ ನಿಮಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗಲ್ಲ ಎಂದಿದ್ದ ಧೋನಿ