IPL 2022: ಒಂದು ತಂಡದಲ್ಲಿ ಕನಿಷ್ಠ 12 ಆಟಗಾರರು: ಏನಿದು ಐಪಿಎಲ್ನ ಹೊಸ ನಿಯಮ?
IPL 2022: ಪಾಯಿಂಟ್ ಟೇಬಲ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ 10 ತಂಡಗಳಿಗೂ ಒಂದೇ ಪಾಯಿಂಟ್ ಟೇಬಲ್ ಇರಲಿದೆ. ಇಲ್ಲಿ ಟಾಪ್-4 ನಲ್ಲಿ ಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇ ಆಫ್ಗೆ ಪ್ರವೇಶಿಸಲಿದೆ.
ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿದ್ದರೂ ಇನ್ನೂ ಕೂಡ ಬಿಸಿಸಿಐಗೆ ಕೊರೋನಾ ಆತಂಕ ದೂರವಾಗಿಲ್ಲ. ಏಕೆಂದರೆ ಕಳೆದ ಬಾರಿ ಕೊರೋನಾ ಕಾರಣದಿಂದಲೇ ಐಪಿಎಲ್ ಅನ್ನು ಎರಡು ಬಾರಿ ಆಯೋಜಿಸಬೇಕಾದ ಅನಿವಾರ್ಯತೆ ಬಂದಿತ್ತು. ಇದನ್ನೆಲ್ಲಾ ಪರಿಗಣಿಸಿ ಈ ಬಾರಿ ಬಿಸಿಸಿಐ ಐಪಿಎಲ್ ಆಯೋಜನೆಗೆ ವಿಶೇಷ ನಿಯಮಗಳನ್ನು ರೂಪಿಸಿದೆ. ಈ ನಿಯಮದಲ್ಲಿ ಎಲ್ಲರ ಗಮನ ಸೆಳೆದಿರುವ ಒಂದು ನಿಯಮವೆಂದರೆ ಕನಿಷ್ಠ 12 ಆಟಗಾರರು ಅತ್ಯಗತ್ಯ. ಅಂದರೆ ಈ ಬಾರಿ ಒಂದು ತಂಡವು ಐಪಿಎಲ್ ಆಡಬೇಕಿದ್ದರೆ ಆ ತಂಡದಲ್ಲಿ 12 ಆಟಗಾರರು ಇರಲೇಬೇಕು. ಪ್ರಸ್ತುತ 10 ತಂಡಗಳಲ್ಲಿ 20 ಕ್ಕಿಂತ ಹೆಚ್ಚಿನ ಆಟಗಾರರಿದ್ದಾರೆ. ಆದರೆ ಆಟಗಾರರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡರೆ ಎಂಬ ಭೀತಿಯಲ್ಲಿ ಬಿಸಿಸಿಐ ಈ ನಿಯಮವನ್ನು ಫ್ರಾಂಚೈಸಿಗಳ ಮುಂದಿಟ್ಟಿದೆ.
ಈ ಬಾರಿ ಕೊರೋನಾತಂಕದ ಕಾರಣ ಐಪಿಎಲ್ ಅನ್ನು ನಾಲ್ಕು ಸ್ಟೇಡಿಯಂಗಳಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿನ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ 15 ಪಂದ್ಯಗಳು ನಡೆಯಲಿದೆ. ಈ ವೇಳೆ ಯಾವುದೇ ತಂಡದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡು ಬಂದು, ಹೆಚ್ಚಿನ ಆಟಗಾರರು ಹೊರಗುಳಿದರೆ ಏನು ಮಾಡೋದು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಬಿಸಿಸಿಐ ಕನಿಷ್ಠ 12 ಆಟಗಾರರ ನಿಯಮವನ್ನು ರೂಪಿಸಿದೆ.
ಏನಿದು 12 ಆಟಗಾರರ ನಿಯಮ? ಪ್ಲೇಯಿಂಗ್ನಲ್ಲಿ 11 ಆಟಗಾರರು (ಅದರಲ್ಲಿ ಏಳು ಮಂದಿ ಭಾರತೀಯ ಆಟಗಾರರು ಇರಬೇಕು) ಮತ್ತು ಒಬ್ಬ ಬದಲಿ ಆಟಗಾರ ಸೇರಿದಂತೆ ಒಟ್ಟು ಒಂದು ತಂಡದಲ್ಲಿ 12 ಆಟಗಾರರು ಇರಬೇಕು. ಒಂದು ವೇಳೆ ಕೊರೋನಾ ಸೋಂಕಿಗೆ ಒಳಗಾಗಿ ಬಹುತೇಕ ಆಟಗಾರರು ಕ್ವಾರಂಟೈನ್ ಒಳಗಾದರೆ, ಆ ತಂಡದಲ್ಲಿ 12 ಆಟಗಾರರು ಇಲ್ಲದಿದ್ದರೆ ಅಂದಿನ ಪಂದ್ಯವನ್ನು ಕೈಬಿಡಲಾಗುತ್ತದೆ. ಅಷ್ಟೇ ಅಲ್ಲದೆ ಆ ತಂಡದ ಪಂದ್ಯವನ್ನು ಮುಂದೂಡಿ ಬೇರೊಂದು ದಿನ ಆಡಿಸಲು ಬಿಸಿಸಿಐ ನಿಯಮ ರೂಪಿಸಿದೆ. ಅದರಂತೆ ಕೋವಿಡ್ ಸೋಂಕು ಕಾಣಿಸಿಕೊಂಡು ಸಮಸ್ಯೆ ಎದುರಾದರೆ, ಒಂದು ತಂಡದಲ್ಲಿ ಬದಲಿ ಆಟಗಾರ ಸೇರಿ ಒಟ್ಟು 12 ಆಟಗಾರರು ಇದ್ದರೆ ಮಾತ್ರ ಪಂದ್ಯವನ್ನು ಆಡಿಸಲಾಗುತ್ತದೆ. ಈ ಪಂದ್ಯದ ಮರುವೇಳಾಪಟ್ಟಿಯನ್ನು ಐಪಿಎಲ್ ಟೆಕ್ನಿಕಲ್ ಸಮಿತಿ ನಿರ್ಧರಿಸಲಿದೆ. ಹೀಗಾಗಿ ಕೊರೋನಾತಂಕ ಎದುರಾದರೂ ತಂಡದಲ್ಲಿ 12 ಆಟಗಾರರಿದ್ದರೆ ಪಂದ್ಯ ನಡೆಯುವುದು ಖಚಿತ.
ಹೇಗಿರಲಿದೆ ಐಪಿಎಲ್ 2022: ಈ ಬಾರಿ ಐಪಿಎಲ್ನ (IPL 2022 format explained) ಫಾರ್ಮಾಟ್ ಬದಲಿಸಲಾಗಿದ್ದು, ಅದರಂತೆ ಈ ಬಾರಿ ಒಟ್ಟು 10 ತಂಡಗಳು ಎರಡು ಗುಂಪುಗಳಾಗಿ ಕಣಕ್ಕಿಳಿಯಲಿದೆ. ಈ ಹಿಂದಿನ ಫಾರ್ಮಾಟ್ನಲ್ಲಿ ಪಂದ್ಯ ನಡೆಸಿದರೆ ಒಟ್ಟು 94 ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಬಿಸಿಸಿಐ (BCCI) ರೌಂಡ್ ರಾಬಿನ್ ಫಾರ್ಮಾಟ್ನಲ್ಲಿ ಟೂರ್ನಿ ನಡೆಸಲಿದೆ. ಅಂದರೆ ಇಲ್ಲಿ 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆ ಬಳಿಕ ತಲಾ 14 ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಗ್ರೂಪ್ A-ನಲ್ಲಿರುವ 5 ತಂಡಗಳು ಪರಸ್ಪರ ಎರಡೆರಡು ಪಂದ್ಯಗಳನ್ನು ಆಡಲಿದೆ. ಆ ಬಳಿಕ ಗ್ರೂಪ್ ಬಿ-ನಲ್ಲಿರುವ ತಂಡದ ವಿರುದ್ದ ಒಂದೊಂದು ಪಂದ್ಯವಾಡಲಿದೆ. ಇದೇ ಮಾದರಿಯಲ್ಲಿ ಗ್ರೂಪ್ ಬಿ ತಂಡಗಳು ಕೂಡ ಆಡಲಿದೆ.
ಉದಾಹರಣೆಗೆ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗ್ರೂಪ್ B-ನಲ್ಲಿದ್ದು, ತನ್ನದೇ ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ದ ತಲಾ 2 ಪಂದ್ಯಗಳನ್ನು ಆಡಲಿದೆ. ಇಲ್ಲಿ ಒಟ್ಟು ಪಂದ್ಯಗಳ ಸಂಖ್ಯೆ 8 ಆಗುತ್ತೆ. ಹಾಗೆಯೇ ಗ್ರೂಪ್ A-ನಲ್ಲಿರುವ 5 ತಂಡಗಳ ತಂಡಗಳ ವಿರುದ್ದ ತಲಾ ಒಂದು ಪಂದ್ಯಗಳನ್ನು ಆಡಲಿದೆ. ಇದರೊಂದಿಗೆ ಪ್ರತಿ ತಂಡಗಳ ಪಂದ್ಯಗಳ ಸಂಖ್ಯೆ 13 ಆಗಲಿದೆ. ಇದರ ಜೊತೆಗೆ ಗ್ರೂಪ್ A ನಲ್ಲಿರುವ ಒಂದು ತಂಡದ ವಿರುದ್ದ ಎರಡು ಪಂದ್ಯ ಆಡಲಿದೆ. ಈ ಮೂಲಕ 14 ಪಂದ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ. ಈ ಬಾರಿ ಆರ್ಸಿಬಿ ಗ್ರೂಪ್ ಎ ನಲ್ಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ದ 2 ಪಂದ್ಯಗಳನ್ನು ಆಡಲಿದೆ. ಅಂದರೆ ಪ್ರತಿ ತಂಡಗಳು 5 ತಂಡಗಳ ವಿರುದ್ದ ತಲಾ ಎರೆಡೆರಡು ಪಂದ್ಯಗಳನ್ನು ಹಾಗೂ ನಾಲ್ಕು ತಂಡಗಳ ವಿರುದ್ದ ಒಂದೊಂದು ಪಂದ್ಯಗಳನ್ನು ಆಡಲಿದೆ. ಈ ಮೂಲಕ ಒಟ್ಟು 70 ಲೀಗ್ ಪಂದ್ಯಗಳನ್ನು ಆಡಲಿದೆ.
ಇದಾಗ್ಯೂ ಪಾಯಿಂಟ್ ಟೇಬಲ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ 10 ತಂಡಗಳಿಗೂ ಒಂದೇ ಪಾಯಿಂಟ್ ಟೇಬಲ್ ಇರಲಿದೆ. ಇಲ್ಲಿ ಟಾಪ್-4 ನಲ್ಲಿ ಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇ ಆಫ್ಗೆ ಪ್ರವೇಶಿಸಲಿದೆ. ಇನ್ನು ಪ್ಲೇಆಫ್ ಈ ಹಿಂದಿನಂತೆ ಇರಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯ, ಬಳಿಕ ಎಲಿಮಿನೇಟರ್ ಪಂದ್ಯ…ಆ ನಂತರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಅದರಂತೆ ಫೈನಲ್ ಸೇರಿದಂತೆ ಪ್ಲೇಆಫ್ನಲ್ಲಿ 4 ಪಂದ್ಯಗಳನ್ನು ಆಡಲಾಗುತ್ತದೆ.
ಇದನ್ನೂ ಓದಿ: PSL vs IPL Prize Money: ಪಾಕಿಸ್ತಾನ್ ಸೂಪರ್ ಲೀಗ್ ಗೆದ್ರೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್