RCB, IPL 2022: ತೂಗುಯ್ಯಾಲೆಯಲ್ಲಿ ಆರ್ಸಿಬಿ ಪ್ಲೇ ಆಫ್ ಭವಿಷ್ಯ: ಆ ಒಂದು ಪಂದ್ಯದ ಮೇಲೆ ಎಲ್ಲರ ಕಣ್ಣು
PBKS vs DC: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 17 ರನ್ಗಳ ಜಯ ಸಾಧಿಸುವ ಮೂಲಕ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ಇದರೊಂದಿಗೆ ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾದಿ ಮತ್ತಷ್ಟು ಕಠಿಣವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಒಂದು ತಂಡದ ಸೋಲು- ಗೆಲುವು ಮತ್ತೊಂದು ತಂಡದ ಅಳಿವು- ಉಳಿವಿನ ಲೆಕ್ಕಚಾರ ಆರಂಭವಾಗಿದೆ. ಸೋಮವಾರ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (PBKS vs DC) 17 ರನ್ಗಳ ಜಯ ಸಾಧಿಸುವ ಮೂಲಕ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿದೆ. ಇದರೊಂದಿಗೆ ಪಂತ್ (Rishabh Pant) ಪಡೆ ಆಡಿದ 13 ಪಂದ್ಯಗಳಲ್ಲಿ ಏಳರಲ್ಲಿ ಜಯ ಆರರಲ್ಲಿ ಸೋಲು ಕಂಡು 14 ಅಂಕದೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಆರ್ಸಿಬಿ (RCB) ಕೂಡ 13 ಪಂದ್ಯಗಳಲ್ಲಿ ಏಳರಲ್ಲಿ ಜಯ ಆರರಲ್ಲಿ ಸೋಲು ಕಂಡು 14 ಅಂಕ ಸಂಪಾದಿಸಿದೆ. ಆದರೆ ಮೈನಸ್ ರನ್ರೇಟ್ನಲ್ಲಿರುವ ಕಾರಣ ಐದನೇ ಸ್ಥಾನಕ್ಕೆ ಕುಸಿದಿದೆ. ಇಲ್ಲಿಂದ ಬೆಂಗಳೂರು ಹಾದಿ ಮತ್ತಷ್ಟು ಕಠಿಣವಾಗಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಉಳಿದಿರುವುದು ಇನ್ನು ಕೇವಲ ಒಂದು ಪಂದ್ಯ ಮಾತ್ರ. ಮೇ. 19 ರಂದು ವಾಂಖೆಡೆಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಆರ್ಸಿಬಿ ಪ್ಲೇ ಆಫ್ ಪ್ರವೇಶಿಸ ಬೇಕಾದರೆ ಈ ಪಂದ್ಯದಲ್ಲಿ ಕೇವಲ ಗೆಲುವು ಸಾಧಿಸಿದರೆ ಸಾಲದು. ದೊಡ್ಡ ಮೊತ್ತದ ಅಂತರದಿಂದ ಜಯಿಸಿ ಪ್ಲಸ್ ರನ್ರೇಟ್ಗೆ ಮರಳಬೇಕಿದೆ. ಇದಿಷ್ಟೇ ಸಾಲದು ಮೇ. 21 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಾಣಬೇಕು. ಈ ಪಂದ್ಯದಲ್ಲಿ ಡೆಲ್ಲಿ ಗೆದ್ದಿತು ಎಂದಾದರೆ ಆರ್ಸಿಬಿ ಟೂರ್ನಿಯಿಂದ ಹೊರಬೀಳಲಿದೆ. ಆರ್ಸಿಬಿ ಜೊತೆಗೆ ಪಂಜಾಬ್, ಕೆಕೆಆರ್ ಹಾಗೂ ಎಸ್ಆರ್ಹೆಚ್ ಕೂಡ ಪ್ಲೇ ಆಫ್ನಿಂದ ಔಟ್ ಆಗಲಿದೆ.
ನಿನ್ನೆಯ ಪಂದ್ಯದ ಆರಂಭದಲ್ಲಿಯೇ ಡೆಲ್ಲಿ ಎಡವಿತಾದರೂ ನಂತರ ಉತ್ತಮ ಕಮ್ಬ್ಯಾಕ್ ಮಾಡಿತು. ರನ್ ಖಾತೆ ತೆರೆಯುವ ಮೊದಲೇ ತಂಡ ಸ್ಫೋಟಕ ಖ್ಯಾತಿಯ ಡೇವಿಡ್ ವಾರ್ನರ್ ಅವರ ವಿಕೆಟನ್ನು ಕಳೆದುಕೊಂಡಿತು. ಈ ಪಂದ್ಯದಲ್ಲಿ ಆಡಲು ಅವಕಾಶ ಪಡೆದ ಸರ್ಫರಾಜ್ ಖಾನ್ ಮತ್ತು ಮಿಚೆಲ್ ಮಾರ್ಷ್ ಪಂಜಾಬ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ದ್ವಿತೀಯ ವಿಕೆಟಿಗೆ 51 ರನ್ ಪೇರಿಸಿ ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಸರ್ಫರಾಜ್ 32 ರನ್ ಗಳಿಸಿ ಅರ್ಷದೀಪ್ ಅವರ ಬೌಲಿಂಗ್‌ನಲ್ಲಿ ಔಟಾದರು. ಪಂಜಾಬ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮಿಚೆಲ್ ಮಾರ್ಷ್ ಆಕರ್ಷಕ ಅರ್ಧಶತಕ ದಾಖಲಿಸಿ ತಂಡವನ್ನು ಆಧರಿಸಿದರು. 48 ಎಸೆತ ಎದುರಿಸಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 63 ರನ್ ಗಳಿಸಿ ಔಟಾದರು. ಅಂತಿಮವಾಗಿ ಡೆಲ್ಲಿ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.
ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ತಂಡಕ್ಕೆ ಜಾನಿ ಬೇರ್ ಸ್ಟೊ (28) ಮತ್ತು ಶಿಖರ್ ಧವನ್ (19) ಉತ್ತಮ ಆರಂಭ ನೀಡಿದರಾದರೂ ನಂತರ ನಾಟಕೀಯ ಕುಸಿತ ಅನುಭವಿಸಿ ಒತ್ತಡಕ್ಕೆ ಒಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಜತೇಶ್ ಶರ್ಮ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 44 ರನ್ ಬಾರಿಸಿ ಔಟಾದರೆ, ರಾಹುಲ್ ಚಾಹರ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 24 ರನ್ ಗಳಿಸಿ ಔಟಾಗದೇ ಉಳಿದರು. ಶಾರ್ದೂಲ್ ಠಾಕೂರ್ 4 ವಿಕೆಟ್ ಕಿತ್ತು ಮಿಂಚಿದರು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Tue, 17 May 22