IPL 2022: ಐಪಿಎಲ್ ಸೀಸನ್ 15 ರ 2ನೇ ಕ್ವಾಲಿಫೈಯರ್ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ (RCB vs RR) ಮುಖಾಮುಖಿಯಾಗಲಿದ್ದು, ಇದರಲ್ಲಿ ಗೆದ್ದ ತಂಡ ಫೈನಲ್ಗೆ ಪ್ರವೇಶಿಸಲಿದೆ. ಹೀಗಾಗಿ ಇಂದಿನ ಪಂದ್ಯವು ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇಲ್ಲಿ ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಯಾವ ತಂಡ ಫೈನಲ್ ಪ್ರವೇಶಿಸಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ಅಂಕಿಅಂಶಗಳ ಪ್ರಕಾರ ನಿರ್ಣಾಯಕ ಪಂದ್ಯದಲ್ಲಿ ಆರ್ಆರ್ ತಂಡಕ್ಕಿಂತ ಆರ್‌ಸಿಬಿ ತಂಡವೇ ಮೇಲುಗೈ ಹೊಂದಿದೆ. ಅಂದರೆ ಆರ್‌ಸಿಬಿ ವಿರುದ್ಧದ ಪ್ಲೇಆಫ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲ್ಲಬೇಕಾದರೆ 7 ವರ್ಷಗಳ ಇತಿಹಾಸವನ್ನೇ ಬದಲಿಸಬೇಕಾಗುತ್ತದೆ.
ಏಕೆಂದರೆ ಉಭಯ ತಂಡಗಳು ಇದುವರೆಗೆ 27 ಪಂದ್ಯಗಳನ್ನು ಆಡಿದೆ. ಈ ವೇಳೆ ಆರ್‌ಸಿಬಿ 13 ಬಾರಿ ಗೆದ್ದಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ಗೆದ್ದಿರುವುದು 11 ಬಾರಿ ಮಾತ್ರ. ಇದು ಹಳೆಯ ಅಂಕಿ ಅಂಶಗಳಾದರೆ, ಇತ್ತೀಚಿನ ಅಂಕಿ ಅಂಶದಲ್ಲೂ ಆರ್‌ಸಿಬಿ ತಂಡವೇ ಮುಂದಿದೆ. ಅಂದರೆ ಕಳೆದ ಸೀಸನ್ ಹಾಗೂ ಈ ಸೀಸನ್ನಲ್ಲಿನ ಅಂಕಿ ಅಂಶ ತೆಗೆದುಕೊಂಡರೆ, 4 ಪಂದ್ಯಗಳಲ್ಲಿ ಆರ್‌ಸಿಬಿ ತಂಡ 3 ಬಾರಿ ಗೆದ್ದಿದೆ. 2021 ರ ಸೀಸನ್ನಲ್ಲಿ ಆರ್‌ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ದ ಎರಡೂ ಪಂದ್ಯಗಳನ್ನು ಗೆದ್ದುಕೊಂಡುತ್ತು. ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದೆ. ಇನ್ನು 2ನೇ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದಿದೆ.
ಅಂದರೆ ಈ ಬಾರಿ ಆಡಿದ ಪಂದ್ಯಗಳಲ್ಲಿ ಆರ್‌ಸಿಬಿ ಒಂದು ಪಂದ್ಯ ಗೆದ್ದರೆ, ರಾಜಸ್ಥಾನ್ ಒಂದು ಮ್ಯಾಚ್ ಗೆದ್ದಿದೆ. ಇನ್ನು ಉಭಯ ತಂಡಗಳು ಐಪಿಎಲ್ನ ಪ್ಲೇಆಫ್ನಲ್ಲಿ ಒಂದು ಬಾರಿ ಮಾತ್ರ ಮುಖಾಮುಖಿಯಾಗಿದೆ. ಐಪಿಎಲ್ 2015 ರಲ್ಲಿ RCB ಮತ್ತು ರಾಜಸ್ಥಾನವು ಪ್ಲೇ ಆಫ್ ಪ್ರವೇಶಿಸಿತು. ಆ ಸೀಸನ್ನ ಮೊದಲ ಎಲಿಮಿನೇಟರ್ ಪಂದ್ಯವನ್ನು 20 ಮಾರ್ಚ್ 2015 ರಂದು ಪುಣೆಯಲ್ಲಿ ಆಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 4 ವಿಕೆಟ್‌ಗೆ 180 ರನ್ ಗಳಿಸಿತು. ಗೆಲುವಿಗೆ 181 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ 19 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಯಿತು. ಆ ಪಂದ್ಯವನ್ನು ಆರ್‌ಸಿಬಿ ತಂಡವು 71 ರನ್ಗಳಿಂದ ಗೆದ್ದಿದ್ದು ಈಗ ಇತಿಹಾಸ.
ಇದಾಗ್ಯೂ ಒಟ್ಟಾರೆ ಮುಖಾಮುಖಿ ಹಾಗೂ ಪ್ಲೇಆಫ್ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ಆರ್‌ಸಿಬಿ ತಂಡವೇ ಮೇಲುಗೈ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರೇಟ್ ತಂಡವಾಗಿ ಆರ್‌ಸಿಬಿ ಗುರುತಿಸಿಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆಡ್ ಮೆಕಾಯ್, ಯುಜ್ವೇಂದ್ರ ಚಾಹಲ್, ಕರುಣ್ ನಾಯರ್, ಆರ್ ಅಶ್ವಿನ್, ಜೇಮ್ಸ್ ನೀಶಮ್, ರಸ್ಸಿ ವಂಡರ್ ಡಸ್ಸೆನ್, ನವದೀಪ್ ಸೈನಿ, ಕೆಸಿ ಕಾರಿಯಪ್ಪ, ಡೇರಿಲ್ ಮಿಚೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಅನುನಯ್ ಸಿಂಗ್, ಕುಲದೀಪ್ ಸೇನ್, ಧ್ರುವ್ ಜುರೆಲ್, ಶುಭಂ ಗರ್ವಾಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಅನೇಶ್ವರ್ ಗೌತಮ್ , ಶೆರ್ಫೇನ್ ರುದರ್‌ಫೋರ್ಡ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ಚಾಮ ಮಿಲಿಂದ್, ಜೇಸನ್ ಬೆಹ್ರೆಂಡಾರ್ಫ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಫಿನ್ ಅಲೆನ್, ಸಿದ್ದಾರ್ಥ್ ಕೌಲ್
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Fri, 27 May 22