IPL 2022: ಮುಂಬೈ ನಾಯಕತ್ವದಿಂದ ಕೆಳಗಿಳಿಯುತ್ತಾರಾ ರೋಹಿತ್ ಶರ್ಮಾ?- ಸಂಜಯ್ ಮಂಜ್ರೇಕರ್ ಸ್ಫೋಟಕ ಹೇಳಿಕೆ
IPL 2022: ವಿರಾಟ್ ಕೊಹ್ಲಿಯಂತೆ ರೋಹಿತ್ ಶರ್ಮಾ ಕೂಡ ನಾಯಕತ್ವವನ್ನು ತೊರೆಯಬಹುದು ಎಂದು ನಾನು ಭಾವಿಸುತ್ತೇನೆ. ಇದರಿಂದ ರೋಹಿತ್ ಶರ್ಮಾ ಮೇಲಿನ ಒತ್ತಡ ಕಡಿಮೆಯಾಗಲಿದೆ. ರೋಹಿತ್ ಆಗ ಕೇವಲ ಬ್ಯಾಟ್ಸ್‌ಮನ್ ಆಗಿ ಆಡುವುದರಿಂದ ಅವರ ಆಟದಲ್ಲೂ ಗಮನಾರ್ಹ ಬದಲಾವಣೆ ಕಾಣಬಹುದು ಎಂದಿದ್ದಾರೆ.
ಐಪಿಎಲ್ 2022 (IPL 2022)ರ ಆರಂಭಕ್ಕೂ ಮೊದಲು, ವಿರಾಟ್ ಕೊಹ್ಲಿ (Virat Kohli) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ತೊರೆದರು. ಅದೇ ರೀತಿ ಎಂಎಸ್ ಧೋನಿ (MS Dhoni) ಕೂಡ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದರು. ಈಗ ರೋಹಿತ್ ಶರ್ಮಾ ಕೂಡ ಮುಂಬೈ ಇಂಡಿಯನ್ಸ್ ನಾಯಕತ್ವ ತೊರೆಯುವ ಹಂತದಲ್ಲಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ವಿರಾಟ್ ಕೊಹ್ಲಿಯಂತೆ ರೋಹಿತ್ ಶರ್ಮಾ ಕೂಡ ತಮ್ಮ ತಂಡದ ನಾಯಕತ್ವವನ್ನು ತೊರೆಯಬಹುದು ಎಂದು ಸಂಜಯ್ ಮಂಜ್ರೇಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನನ್ನು ಸಂಜಯ್ ಮಂಜ್ರೇಕರ್ ಸೂಚಿಸಿದ್ದು, ಅವರ ಪ್ರಕಾರ ರೋಹಿತ್ ಶರ್ಮಾ ನಾಯಕತ್ವವನ್ನು ತೊರೆದರೆ, ಕೀರನ್ ಪೊಲಾರ್ಡ್‌ಗೆ ಈ ಜವಬ್ದಾರಿ ನೀಡಬಹುದು ಎಂದಿದ್ದಾರೆ.
ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಜೊತೆಗಿನ ವಿಶೇಷ ಸಂವಾದದಲ್ಲಿ ಸಂಜಯ್ ಮಂಜ್ರೇಕರ್, ಪೊಲಾರ್ಡ್ ಈ ತಂಡಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿಯಂತೆ ರೋಹಿತ್ ಶರ್ಮಾ ಕೂಡ ನಾಯಕತ್ವವನ್ನು ತೊರೆಯಬಹುದು ಎಂದು ನಾನು ಭಾವಿಸುತ್ತೇನೆ. ಇದರಿಂದ ರೋಹಿತ್ ಶರ್ಮಾ ಮೇಲಿನ ಒತ್ತಡ ಕಡಿಮೆಯಾಗಲಿದೆ. ರೋಹಿತ್ ಆಗ ಕೇವಲ ಬ್ಯಾಟ್ಸ್‌ಮನ್ ಆಗಿ ಆಡುವುದರಿಂದ ಅವರ ಆಟದಲ್ಲೂ ಗಮನಾರ್ಹ ಬದಲಾವಣೆ ಕಾಣಬಹುದು ಎಂದಿದ್ದಾರೆ. ಹಾಗೆಯೇ ರೋಹಿತ್ ನಂತರ ಮುಂಬೈ ನಾಯಕತ್ವವನ್ನು ಪೊಲಾರ್ಡ್‌ಗೆ ನೀಡಬೇಕು ಎಂದು ಸಂಜಯ್ ತಿಳಿಸಿದ್ದಾರೆ.
ಕಳೆದ 3-4 ಸೀಸನ್‌ಗಳಿಂದ ರೋಹಿತ್ ಶರ್ಮಾ ‘ಫ್ಲಾಪ್’ ರೋಹಿತ್ ಶರ್ಮಾ 3-4 ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಸರಾಸರಿ 30 ಕ್ಕಿಂತ ಕಡಿಮೆಯಾಗಿದೆ. ಈ ಬಗ್ಗೆ ಮಾತನಾಡಿದ ಸಂಜಯ್ ಮಂಜ್ರೇಕರ್, ರೋಹಿತ್ ಶರ್ಮಾ ಭಾರತಕ್ಕಾಗಿ ಆಡುವಾಗ, ಅವರ ಅಂಕಿಅಂಶಗಳು ಅದ್ಭುತವಾಗಿವೆ. ಏಕೆಂದರೆ ಆ ವೇಳೆ ರೋಹಿತ್ ತನ್ನ ಬಗ್ಗೆ ಮಾತ್ರ ಹೆಚ್ಚು ಯೋಚಿಸುತ್ತಾರೆ. ಹೀಗಾಗಿ ಅವರ ಪ್ರದರ್ಶನವೂ ಉತ್ತಮವಾಗಿದೆ ಎಂದಿದ್ದಾರೆ.
ರೋಹಿತ್ ಶರ್ಮಾ ಪ್ರಸಕ್ತ ಋತುವಿನ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. 20ರ ಸರಾಸರಿಯಲ್ಲಿ ಅವರ ಬ್ಯಾಟ್‌ನಿಂದ ಕೇವಲ 80 ರನ್‌ಗಳು ಹೊರಬಂದಿವೆ. ಅವರು ಒಂದೇ ಒಂದು ಅರ್ಧ ಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಕಳೆದ ಐದು ಸೀಸನ್‌ಗಳಲ್ಲಿಯೂ ರೋಹಿತ್ ಶರ್ಮಾ ಬ್ಯಾಟ್‌ನಿಂದ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ರೋಹಿತ್ ಶರ್ಮಾ ಅವರಂತಹ ಆಟಗಾರ 30 ಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸುತ್ತಿರುವುದು ಅವರ ಕಳಪೆ ಫಾರ್ಮ್ಗೆ ಹಿಡಿದಿರುವ ಕೈಗನ್ನಡಿಯಾಗಿದೆ. 2019 ರಲ್ಲಿ ಅವರು 400 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆದರೆ ಅಂದಿನಿಂದ ರೋಹಿತ್ ಶರ್ಮಾಗೆ ಆ ಅಂಕಿಅಂಶವನ್ನು ಮುಟ್ಟಲು ಸಾಧ್ಯವಾಗಿಲ್ಲ. ರೋಹಿತ್ ಶರ್ಮಾ ಅವರ ಬ್ಯಾಟ್‌ನಿಂದ ರನ್‌ಗಳು ಬರದಿದ್ದರೆ, ಖಂಡಿತವಾಗಿಯೂ ಅವರ ನಾಯಕತ್ವದ ಮೇಲೆ ಪ್ರಶ್ನೆಗಳು ಉದ್ಭವಿಸುತ್ತವೆ ಎಂಬುದು ಸ್ಪಷ್ಟವಾಗಿದೆ. ಈ ಬಾರಿ ರೋಹಿತ್ ಶರ್ಮಾ ವಿರುದ್ಧ ಈ ರೀತಿಯ ಆರೋಪಗಳು ಕೇಳಿಬರುತ್ತಿವೆ. ಏಕೆಂದರೆ ಅವರ ನಾಯಕತ್ವದ ಮುಂಬೈ ತಂಡವು ಆಡಿರುವ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ತಂಡ ಸೋತಾಗ ಅದರ ನಾಯಕ ಟೀಕೆಗೆ ಗುರಿಯಾಗಬೇಕಾಗುತ್ತದೆ. ಟೀಕಾಕಾರರಿಗೆ ರೋಹಿತ್ ಶರ್ಮಾ ಹೇಗೆ ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡೋಣ?
ಇದನ್ನೂ ಓದಿ:ICC Rankings: 3 ಮಾದರಿಯಲ್ಲೂ ಪಾಕ್ ವೇಗಿಯದ್ದೇ ಕಾರುಬಾರು! ಟಾಪ್ 10ರಲ್ಲಿ ಭಾರತೀಯರು ವಿರಳ