ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2022) 10ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (PBKS vs CSK) ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಂಜಾಬ್ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಲು ಬಯಸುತ್ತಿದ್ದರೆ, ಸಿಎಸ್ಕೆ ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಇನ್ನು ಈ ಪಂದ್ಯವು ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ತುಂಬಾ ವಿಶೇಷವಾದ ಮ್ಯಾಚ್. ಏಕೆಂದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ವಿಶೇಷ ದಾಖಲೆಯನ್ನು ಮುರಿಯುವ ಅವಕಾಶ ಧವನ್ ಮುಂದಿದೆ. ಇದಕ್ಕಾಗಿ ಕೇವಲ 41 ರನ್‌ಗಳಸಬೇಕಷ್ಟೇ.
ಪಂಜಾಬ್ ಕಿಂಗ್ಸ್ ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಶಿಖರ್ ಧವನ್ ಈ ಸೀಸನ್ನಲ್ಲಿ ಉತ್ತಮ ಆರಂಭ ಪಡೆದಿಲ್ಲ. ಇಬ್ಬರೂ ಮೊದಲೆರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಇದಾಗ್ಯೂ ಈ ಜೋಡಿ ಈ ಬಾರಿಯ ಐಪಿಎಲ್‌ನ ಅತ್ಯಂತ ಅಪಾಯಕಾರಿ ಓಪನಿಂಗ್ ಜೋಡಿ ಎಂದು ಪರಿಗಣಿಸಲಾಗಿದೆ. ಶಿಖರ್ ಧವನ್ ಅತ್ಯಂತ ಅನುಭವಿ ಆಟಗಾರ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 41 ರನ್ಗಳಿಸಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.
ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಟ್ಟು 948 ರನ್ ಗಳಿಸಿದ್ದಾರೆ. ಅಂದರೆ ಸಿಎಸ್ಕೆ ವಿರುದ್ದ ಐಪಿಎಲ್ನಲ್ಲಿ ಅತ್ಯಧಿಕ ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಸಿಎಸ್ಕೆ ವಿರುದ್ದ 908 ರನ್ ಗಳಿಸಿರುವ ಧವನ್ ಇಂದಿನ ಪಂದ್ಯದಲ್ಲಿ 41 ರನ್ಗಳಿಸಿದರೆ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆಯನ್ನು ಮುರಿದು ಚೆನ್ನೈ ವಿರುದ್ದ ಅತೀ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆಯಲಿದ್ದಾರೆ.
ಇದಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಒಂದು ಸಾವಿರ ಬೌಂಡರಿಗಳನ್ನು ಪೂರೈಸಲು ಶಿಖರ್ ಧವನ್‌ಗೆ ಏಳು ಬೌಂಡರಿಗಳ ಅಗತ್ಯವಿದೆ. ಚೆನ್ನೈ ವಿರುದ್ಧ 7 ಬೌಂಡರಿ ಬಾರಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 1000 ಬೌಂಡರಿ ಪೂರೈಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಧವನ್ ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ 993 ಬೌಂಡರಿಗಳನ್ನು ಬಾರಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಸಾವಿರಕ್ಕೂ ಅಧಿಕ ಬೌಂಡರಿ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ (1132) ಇದ್ದು, 2ನೇ ಸ್ಥಾನದಲ್ಲಿ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ (1054) ಮತ್ತು ಮೂರನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ (1005) ಇದ್ದಾರೆ. ಇದೀಗ 7 ಬೌಂಡರಿ ಬಾರಿಸಿದರೆ ಈ ವಿಶೇಷ ಸಾಧಕರ ಪಟ್ಟಿಗೆ ಶಿಖರ್ ಧವನ್ ಕೂಡ ಸೇರ್ಪಡೆಯಾಗಲಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು
(IPL 2022: Dhawan sets eye on Kohli’s massive record against CSK)