Yuzvendra Chahal: ಚಹಲ್ ಹ್ಯಾಟ್ರಿಕ್ ವಿಕೆಟ್ ತಪ್ಪಿಸಿದ ಕನ್ನಡಿಗ..!
IPL 2022: ಯುಜುವೇಂದ್ರ ಚಹಲ್ ದೀರ್ಘಕಾಲ RCB ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ಅವರನ್ನು ಹರಾಜಿನಲ್ಲಿ ಖರೀದಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2022) ಇದುವರೆಗೆ 20 ಹ್ಯಾಟ್ರಿಕ್ ವಿಕೆಟ್ಗಳು ಮೂಡಿಬಂದಿವೆ. 2008 ರಲ್ಲಿ ಲಕ್ಷ್ಮೀಪತಿ ಬಾಲಾಜಿ ಹ್ಯಾಟ್ರಿಕ್ ವಿಕೆಟ್ ಪಡೆದರೆ, ಕಳೆದ ಸೀಸನ್ನಲ್ಲಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಉರುಳಿಸಿ ಮಿಂಚಿದ್ದರು. ಈ ಬಾರಿ ಕೂಡ ಮೊದಲ ಹ್ಯಾಟ್ರಿಕ್ ವಿಕೆಟ್ ಯುಜುವೇಂದ್ರ ಚಹಲ್ (Yuzvendra Chahal) ಅವರ ಪಾಲಾಗುತ್ತಿತ್ತು. ಆದರೆ ಸಬ್ ಫೀಲ್ಡರ್ ಮಾಡಿದ ತಪ್ಪಿನಿಂದಾಗಿ ಚೊಚ್ಚಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಚಹಲ್ ಅವರ ಅವಕಾಶ ಕೈತಪ್ಪಿತು. ಐಪಿಎಲ್ನ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಬೌಲಿಂಗ್ ಮುಂಬೈ ಆಯ್ದುಕೊಂಡಿದ್ದರು. ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು 193 ಕ್ಕೆ ತಂದು ನಿಲ್ಲಿಸಿದರು. 194 ರನ್ಗಳ ಟಾರ್ಗೆಟ್ ಪಡೆದ ಮುಂಬೈ ಪರ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಅರ್ಧಶತಕ ಬಾರಿಸಿ ಮಿಂಚಿದ್ದರು.
ಆದರೆ ರಾಜಸ್ಥಾನ್ ರಾಯಲ್ಸ್ ತಂಡದ ಉತ್ತಮ ಬೌಲಿಂಗ್ ಮುಂದೆ ಮುಂಬೈ ತಂಡದ ಉಳಿದ ಬ್ಯಾಟ್ಸ್ಮನ್ಗಳು ರನ್ಗಳಿಸಲು ಪರದಾಡಿದರು. ಅದರಲ್ಲೂ ಯುಜುವೇಂದ್ರ ಚಹಲ್ ಈ ಬಾರಿ ಕೂಡ ತಮ್ಮ ಸ್ಪಿನ್ ಮೋಡಿ ತೋರಿಸಿದರು. ಚಹಲ್ 4 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ 2 ವಿಕೆಟ್ ಪಡೆದಿದ್ದರು.
ವಿಶೇಷ ಎಂದರೆ ಚಹಲ್ ಈ ಎರಡು ವಿಕೆಟ್ಗಳನ್ನು ಬ್ಯಾಕ್ ಟು ಬ್ಯಾಕ್ ಪಡೆದಿದ್ದರು. ಪಂದ್ಯದ 16ನೇ ಓವರ್‌ನ ಮೊದಲ ಎಸೆತದಲ್ಲಿ ಚಹಲ್ ಟಿಮ್ ಡೇವಿಡ್ ಅವರನ್ನು ಔಟ್ ಮಾಡಿದರು. ಎರಡನೇ ಎಸೆತದಲ್ಲಿ ಡೇನಿಯನ್ ಸಾಮ್ಸ್ ಕೂಡ ಔಟಾದರು. ಆ ಬಳಿಕ ಬಂದ ಮುರುಗನ್ ಅಶ್ವಿನ್ಗೆ ಚಹಲ್ ಗೂಗ್ಲಿ ಎಸೆದರು. ಬ್ಯಾಟ್ನ ಹೊರ ಅಂಚಿಗೆ ತಾಗಿ ಚೆಂಡು ಸ್ಲಿಪ್ನತ್ತ ಸಾಗಿತು. ಆದರೆ ಅಲ್ಲೇ ಫೀಲ್ಡಿಂಗ್ನಲ್ಲಿದ್ದ ಕರುಣ್ ನಾಯರ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರೊಂದಿಗೆ ಚಹಲ್ ಅವರ ಚೊಚ್ಚಲ ಬಾರಿಗೆ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶ ಕೂಡ ಕೈತಪ್ಪಿತು.
ವಿಶೇಷ ಎಂದರೆ ಈ ಪಂದ್ಯದಲ್ಲಿ ಕರುಣ್ ನಾಯರ್ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿರಲಿಲ್ಲ. ಬದಲಿ ಫೀಲ್ಡರ್ ಆಗಿ ಕಾಣಿಸಿಕೊಂಡ ಕರುಣ್ ಹ್ಯಾಟ್ರಿಕ್ ವಿಕೆಟ್ನ ಕ್ಯಾಚ್ ಕೈಬಿಡುವ ಮೂಲಕ ಚಹಲ್ ಪಾಲಿಗೆ ವಿಲನ್ ಆದರು.
— Peep (@Peep00470121) April 2, 2022
ಯುಜುವೇಂದ್ರ ಚಹಲ್ ದೀರ್ಘಕಾಲ RCB ತಂಡದ ಭಾಗವಾಗಿದ್ದರು. ಆದರೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ಅವರನ್ನು ಹರಾಜಿನಲ್ಲಿ ಖರೀದಿಸಿದೆ. 31ರ ಹರೆಯದ ಚಹಲ್ ಆರ್ಆರ್ ಪರ ಉತ್ತಮ ಆರಂಭ ಪಡೆದಿದ್ದಾರೆ. ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧವೂ ಉತ್ತಮ ಬೌಲಿಂಗ್ ಮಾಡಿದ್ದರು. 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಇದೀಗ ಮುಂಬೈ ಇಂಡಿಯನ್ಸ್ ವಿರುದ್ದ 4 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು
(IPL 2022: Karun Nair drops catch, denies Yuzvendra Chahal dream hat-trick)