IPL 2022: ಐಪಿಎಲ್ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿ ಕೆಲ ದಾಖಲೆಗಳು ಬಹಳ ಅಪರೂಪದ ದಾಖಲೆಗಳು. ಅಂದರೆ ಕೆಲ ರೆಕಾರ್ಡ್ಗಳು ನಿರ್ಮಾಣವಾಗಿ ವರ್ಷಗಳು ಕಳೆದರೂ ಆ ದಾಖಲೆಯತ್ತ ಮತ್ಯಾವುದೇ ಆಟಗಾರರ ಹೆಸರು ಕೂಡ ಕಾಣಿಸಿಕೊಂಡಿಲ್ಲ. ಅಂತಹ ದಾಖಲೆಗಳಲ್ಲಿ ಒಂದು ಸಚಿನ್ ತೆಂಡೂಲ್ಕರ್ 2009 ರಲ್ಲಿ ನಿರ್ಮಿಸಿದ ಫುಲ್ ಇನಿಂಗ್ಸ್ ದಾಖಲೆ. ಈ ದಾಖಲೆಯ ವಿಶೇಷತೆ ಎಂದರೆ ಆ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ಆರಂಭಿಕರಾಗಿ ಕಣಕ್ಕಿಳಿದು 20 ಓವರ್ಗಳನ್ನು ಆಡಿರುವುದು. ಈ ವೇಳೆ ಒಂದೇ ಒಂದು ಸಿಕ್ಸ್ ಬಾರಿಸದೇ ಕ್ರೀಸ್ನಲ್ಲಿ ಅಜೇಯರಾಗಿ ಉಳಿದಿದ್ದರು. ಇದೀಗ ಈ ದಾಖಲೆಯನ್ನು 13 ವರ್ಷಗಳ ಬಳಿಕ ಶುಭ್ಮನ್ ಗಿಲ್ ಸರಿಗಟ್ಟಿದ್ದಾರೆ.
2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಬ್ಯಾಟ್ ಮಾಡಿದ್ದ ಸಚಿನ್ ತೆಂಡೂಲ್ಕರ್ ಪೂರ್ತಿ 20 ಓವರ್ಗಳನ್ನು ಆಡಿ ಒಂದೇ ಒಂದು ಸಿಕ್ಸರ್ ಬಾರಿಸಿರಲಿಲ್ಲ. ಅಂದು 49 ಎಸೆತಗಳನ್ನು ಎದುರಿಸಿದ್ದ ಸಚಿನ್ 7 ಫೋರ್ಗಳೊಂದಿಗೆ ಅಜೇಯ 59 ರನ್ ಬಾರಿಸಿದ್ದರು.
ಇದೀಗ ಗುಜರಾತ್ ಟೈಟನ್ಸ್ ಪರ ಆಡುತ್ತಿರುವ ಶುಭ್ಮನ್ ಗಿಲ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದಿದ್ದಾರೆ. ವಿಶೇಷ ಎಂದರೆ ಸಚಿನ್ ಅವರಂತೆಯೇ ಗಿಲ್ ಕೂಡ 20 ಓವರ್ ಆಡಿದರೂ ಒಂದೇ ಒಂದು ಸಿಕ್ಸ್ ಬಾರಿಸಿಲ್ಲ. ಈ ಪಂದ್ಯದಲ್ಲಿ 49 ಎಸೆತಗಳನ್ನು ಎದುರಿಸಿದ್ದ ಗಿಲ್ 63 ರನ್ ಕಲೆಹಾಕಿದ್ದಾರೆ. ಈ ವೇಳೆ 7 ಫೋರ್ ಮಾತ್ರ ಬಾರಿಸಿದ್ದರು. ಈ ಮೂಲಕ 13 ವರ್ಷಗಳ ಹಿಂದೆ 20 ಓವರ್ ಬ್ಯಾಟ್ ಮಾಡಿ ಸಿಕ್ಸ್ ಬಾರಿಸದೇ ಅಜೇಯರಾಗಿ ಉಳಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಶುಭ್ಮನ್ ಗಿಲ್ ಸರಿಗಟ್ಟಿದ್ದಾರೆ.
ಗುಜರಾತ್ ಟೈಟನ್ಸ್ಗೆ ಜಯ:
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೇಂಟ್ಸ್ ತಂಡವನ್ನು ಸೋಲಿಸಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (LSG vs GT) ತಂಡ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ಐಪಿಎಲ್ ಸೀಸನ್ 15 ನಲ್ಲಿ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಗುಜರಾತ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು.
ಶುಭ್ಮನ್ ಗಿಲ್ (63) ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿತು. ಈ ಸಾಧಾರಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ದ ಗುಜರಾತ್ ಟೈಟನ್ಸ್ ಬೌಲರ್ಗಳು ಪರಾಕ್ರಮ ಮೆರೆದರು. ಅದರಲ್ಲೂ ನಾಲ್ಕು ವಿಕೆಟ್ ಉರುಳಿಸುವ ಮೂಲಕ ರಶೀದ್ ಖಾನ್ ಲಕ್ನೋ ಪಾಲಿಗೆ ಕಂಟಕವಾದರು. ಅಂತಿಮವಾಗಿ 13.5 ಓವರ್ಗಳಲ್ಲಿ 82 ರನ್ಗಳಿಗೆ ಆಲೌಟ್ ಆಗುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು 62 ರನ್ಗಳಿಂದ ಹೀನಾಯ ಸೋಲೊಪ್ಪಿಕೊಂಡಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 pm, Wed, 11 May 22