VIRAT KOHLI: ಮತ್ತೊಂದು ದಾಖಲೆ ಮೇಲೆ ಕಿಂಗ್ ಕೊಹ್ಲಿ ಕಣ್ಣು

| Updated By: ಝಾಹಿರ್ ಯೂಸುಫ್

Updated on: Mar 30, 2022 | 4:46 PM

IPL 2022: ಐಪಿಎಲ್ ಸೀಸನ್​ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2016 ರಲ್ಲಿ 973 ರನ್​ ಕಲೆಹಾಕುವ ಮೂಲಕ ಈ ದಾಖಲೆ ಬರೆದಿದ್ದರು.

VIRAT KOHLI: ಮತ್ತೊಂದು ದಾಖಲೆ ಮೇಲೆ ಕಿಂಗ್ ಕೊಹ್ಲಿ ಕಣ್ಣು
Virat Kohli
Follow us on

IPL 2022 ರಲ್ಲಿ, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ಅನ್ನು ಎದುರಿಸಲಿದೆ . ಆರ್​ಸಿಬಿ ತಂಡವು ತನ್ನ ಮೊದಲ ಪಂದ್ಯದಲ್ಲಿ 205 ರನ್ ಗಳಿಸಿದರೂ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಸೋಲನ್ನು ಎದುರಿಸಬೇಕಾಯಿತು . ಆದರೆ, ಸೋಲಿನ ಹೊರತಾಗಿಯೂ ಆ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲ ಸೇರಿದಂತೆ ಬ್ಯಾಟ್ಸ್‌ಮನ್‌ಗಳು ಉತ್ತಮ ಇನ್ನಿಂಗ್ಸ್ ಆಡಿದ್ದರು. ಹೀಗಾಗಿ ಅದೇ ಬ್ಯಾಟಿಂಗ್ ಫಾರ್ಮ್​ ಅನ್ನು ಕೋಲ್ಕತ್ತಾ ವಿರುದ್ಧ ಪುನರಾವರ್ತಿಸಬಹುದು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 29 ಎಸೆತಗಳಲ್ಲಿ 41 ರನ್‌ಗಳ ಇನಿಂಗ್ಸ್‌ ಆಡಿದ್ದರು. ಇದೀಗ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಮತ್ತೊಂದು ದಾಖಲೆ ಬರೆಯುವ ಅವಕಾಶವಿದೆ.

ವಿರಾಟ್ ಕೊಹ್ಲಿಐಪಿಎಲ್‌ನಲ್ಲಿ ಇದುವರೆಗೆ 547 ಬೌಂಡರಿಗಳನ್ನು ಬಾರಿಸಿದ್ದಾರೆ. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತೆ ಮೂರು ಬೌಂಡರಿಗಳನ್ನು ಬಾರಿಸಿದರೆ, ಐಪಿಎಲ್ ಇತಿಹಾಸದಲ್ಲಿ 550 ಬೌಂಡರಿಗಳನ್ನು ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಶಿಖರ್ ಧವನ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಧವನ್ ಇದುವರೆಗೆ ಐಪಿಎಲ್​ನಲ್ಲಿ 659 ಬೌಂಡರಿಗಳನ್ನು ಬಾರಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಮೂರನೇ ಸ್ಥಾನದಲ್ಲಿದ್ದಾರೆ. ವಾರ್ನರ್ ಇದುವರೆಗೆ 525 ಬೌಂಡರಿಗಳನ್ನು ಬಾರಿಸಿದ್ದಾರೆ. ಇದರ ನಂತರ ಸುರೇಶ್ ರೈನಾ (506 ಬೌಂಡರಿ), ರೋಹಿತ್ ಶರ್ಮಾ (495) ಹೆಸರುಗಳಿವೆ.

ಕಳೆದ ಐಪಿಎಲ್ ಸೀಸನ್​ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ 15 ಪಂದ್ಯಗಳಿಂದ 120 ಸ್ಟ್ರೈಕ್ ರೇಟ್‌ನಲ್ಲಿ 405 ರನ್ ಗಳಿಸಿದ್ದರು. ಈ ವೇಳೆ 3 ಅರ್ಧ ಶತಕಗಳನ್ನು ಬಾರಿಸಿದ್ದರು. ಈ ಸೀಸನ್​ನಲ್ಲಿ ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಕೊಹ್ಲಿ ಮೊದಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಈ ಬಾರಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದಾರೆ.

ಐಪಿಎಲ್​ನಲ್ಲಿ ಕೊಹ್ಲಿ ಹೆಸರಿನಲ್ಲಿರುವ ದಾಖಲೆಗಳು:
ಅತೀ ಹೆಚ್ಚು ರನ್​: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್​ಗಳಿಸಿದ ಆಟಗಾರ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಇದುವರೆಗೆ ಐಪಿಎಲ್​ನಲ್ಲಿ 207 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 199 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ ಬರೋಬ್ಬರಿ 6283 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಐಪಿಎಲ್​ನಲ್ಲಿ 6 ಸಾವಿರ ರನ್​ ಪೂರೈಸಿದ ಏಕೈಕ ಬ್ಯಾಟ್ಸ್​ಮನ್ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ.

ಅತ್ಯಧಿಕ ರನ್ ಬಾರಿಸಿದ ಕ್ಯಾಪ್ಟನ್: ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ನಾಯಕ. ಅಂದರೆ 2013 ರಿಂದ 2021 ರವರೆಗೆ ಆರ್​ಸಿಬಿ ತಂಡದ ನಾಯಕರಾಗಿದ್ದ ಕೊಹ್ಲಿ 4881 ರನ್​ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ.

ಅತ್ಯಧಿಕ ಶತಕ: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಇದುವರೆಗೆ 5 ಶತಕಗಳನ್ನು ಸಿಡಿಸಿದ್ದಾರೆ.

ಅತ್ಯಧಿಕ ರನ್: ಐಪಿಎಲ್ ಸೀಸನ್​ವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ 2016 ರಲ್ಲಿ 973 ರನ್​ ಕಲೆಹಾಕುವ ಮೂಲಕ ಈ ದಾಖಲೆ ಬರೆದಿದ್ದರು.

ಅತ್ಯಧಿಕ ಸಿಕ್ಸ್: ಐಪಿಎಲ್ ಸೀಸನ್​ವೊಂದರಲ್ಲಿ ಅತ್ಯಧಿಕ ಸಿಕ್ಸ್​ ಸಿಡಿಸಿದ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಕೊಹ್ಲಿ 2016 ರಲ್ಲಿ 38 ಸಿಕ್ಸ್ ಬಾರಿಸುವ ಮೂಲಕ ಈ ದಾಖಲೆ ಬರೆದಿದ್ದರು.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು