IPL 2022: ಕ್ರಿಸ್ ಗೇಲ್ ಬ್ಯಾಟ್ ಮುರಿದಿದ್ದ ಬೌಲರ್: ಯಾರು ಈ ಸಿಕ್ಸರ್ ಸ್ಮಿತ್?

| Updated By: ಝಾಹಿರ್ ಯೂಸುಫ್

Updated on: Mar 28, 2022 | 3:08 PM

Odean smith: ಪಂಜಾಬ್ ಕಿಂಗ್ಸ್​ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಇದೀಗ ಸ್ಪೋಟಕ ಬ್ಯಾಟ್ಸ್​ಮನ್ ಒಬ್ಬರು ಸಿಕ್ಕಂತಾಗಿದೆ. ಅದರ ಪರಿಣಾಮವೇ ಆರ್​ಸಿಬಿ ನೀಡಿ 205 ರನ್​ಗಳನ್ನು ಪಂಜಾಬ್ ಕಿಂಗ್ಸ್​ ನಿರಾಯಾಸವಾಗಿ ಚೇಸ್ ಮಾಡಿರುವುದು.

IPL 2022: ಕ್ರಿಸ್ ಗೇಲ್ ಬ್ಯಾಟ್ ಮುರಿದಿದ್ದ ಬೌಲರ್: ಯಾರು ಈ ಸಿಕ್ಸರ್ ಸ್ಮಿತ್?
odean smith
Follow us on

8 ಎಸೆತ, 3 ಸಿಕ್ಸ್, 1 ಫೋರ್…25 ರನ್​…ಆರ್​ಸಿಬಿ ವಿರುದ್ದ ಅಬ್ಬರಿಸುವ ಮೂಲಕ ಓಡಿಯನ್ ಸ್ಮಿತ್ (odean smith) ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಆಲ್​ರೌಂಡರ್​ ಆಗಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡ ಸ್ಮಿತ್ 4 ಓವರ್​ನಲ್ಲಿ ನೀಡಿದ್ದು ಬರೋಬ್ಬರಿ 52 ರನ್​ಗಳು. ಇದರ ಬೆನ್ನಲ್ಲೇ ಪಂಜಾಬ್ ಫ್ರಾಂಚೈಸಿಯ ಮತ್ತೊಂದು ಕೆಟ್ಟ ಆಯ್ಕೆ ಎಂದೇ ಎಲ್ಲರೂ ಮೂಗು ಮುರಿದಿದ್ದರು. ಆದರೆ ಬ್ಯಾಟಿಂಗ್​ನಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸ್ಮಿತ್ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇದರ ಬೆನ್ನಲ್ಲೇ ಗೂಗಲ್​ನಲ್ಲೂ ಯಾರಪ್ಪಾ ಈ ಓಡಿಯನ್ ಸ್ಮಿತ್ ಎಂಬ ಹುಡುಕಾಟಗಳೂ ಕೂಡ ಕಂಡು ಬಂದಿದೆ. ಅಷ್ಟಕ್ಕೂ ಯಾರು ಈ ಓಡಿಯನ್ ಸ್ಮಿತ್?

25 ವರ್ಷದ ಯುವ ಆಲ್​ರೌಂಡರ್ ಓಡಿಯನ್ ಸ್ಮಿತ್ ಹೆಸರು ಮೊದಲು ಚಾಲ್ತಿಗೆ ಬಂದಿದ್ದು ಕೆರಿಬಿಯನ್ ಪ್ರೀಮಿಯರ್ ಲೀಗ್​ ಮೂಲಕ, ಆ ಬಳಿಕ ವೆಸ್ಟ್ ಇಂಡೀಸ್​ನಲ್ಲಿ ಸ್ಮಿತ್ ಹೆಸರು ಚಿರಪರಿಚಿತವಾಗಿತ್ತು. ಏಕೆಂದರೆ ಸ್ಮಿತ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾದ ಕ್ರಿಸ್ ಗೇಲ್ ಅವರ ಬ್ಯಾಟ್ ಮುರಿದಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಓಡಿಯನ್ ಸ್ಮಿತ್ ಎಂಬ ಯುವ ವೇಗಿಯ ಎಂಟ್ರಿಯಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ಅಷ್ಟೇ ಅಲ್ಲದೆ ಕ್ರಿಕೆಟ್ ಅಂಗಳದಲ್ಲಿ ವೇಗದ ಬೌಲಿಂಗ್ ಆಲ್​ರೌಂಡರ್ ಕಾಣಿಸಿಕೊಳ್ಳುವುದು ಅಪರೂಪ. ಇದಕ್ಕೆ ಸಾಕ್ಷಿಯೇ ಆರ್​ಸಿಬಿ ವಿರುದ್ದದ ಪಂದ್ಯದಲ್ಲಿ ಸ್ಮಿತ್ ಎಸೆದ ಚೆಂಡಿನ ವೇಗ. ದಿನೇಶ್ ಕಾರ್ತಿಕ್ ಬ್ಯಾಟ್ ಮಾಡುತ್ತಿದ್ದ ವೇಳೆ ಸ್ಮಿತ್ ಬರೋಬ್ಬರಿ 148 ಕಿ.ಮೀ ವೇಗದಲ್ಲಿ ಚೆಂಡೆಸೆದು ಗಮನ ಸೆಳೆದಿದ್ದರು. ಅಂದರೆ ಪರಿಪೂರ್ಣ ವೇಗದ ಬೌಲರ್ ಆಗಿ ಸ್ಮಿತ್ ಅವರನ್ನು ತಂಡದಲ್ಲಿ ಬಳಸಿಕೊಳ್ಳಬಹುದು ಎಂಬುದು ಸ್ಪಷ್ಟ.

ಆದರೆ ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಮಾಡಬಲ್ಲೆ ಎಂಬುದಕ್ಕೆ ಆರ್​ಸಿಬಿ ವಿರುದ್ದದ ಪಂದ್ಯವೇ ಸಾಕ್ಷಿ. ಆರ್​ಸಿಬಿ ವಿರುದ್ದ 3 ಸಿಕ್ಸ್ ಬಾರಿಸಿದರೂ ಸ್ಮಿತ್ ಅದಕ್ಕಿಂತಲೂ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ. ಅದರಲ್ಲೂ ಬಿಗ್ ಹಿಟ್ಟರ್ ಎಂದೇ ಖ್ಯಾತಿ ಪಡೆದಿರುವ ಆಟಗಾರ. ಏಕೆಂದರೆ T10 ಲೀಗ್‌ನಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್‌ನ ಭಾಗವಾಗಿದ್ದ ಸ್ಮಿತ್ ಬರೋಬ್ಬರಿ 130 ಮೀಟರ್ ದೂರ ಸಿಕ್ಸ್ ಸಿಡಿಸಿ ದಾಖಲೆ ಬರೆದಿದ್ದರು. ವಿಶೇಷ ಎಂದರೆ ಐಪಿಎಲ್​ನಲ್ಲಿ ಇದುವರೆಗೆ ಯಾರು ಕೂಡ 130 ಮೀಟರ್ ಉದ್ದದ ಸಿಕ್ಸ್ ಸಿಡಿಸಿಲ್ಲ ಎಂಬುದು ವಿಶೇಷ. ಹೀಗಾಗಿ ಈ ಬಾರಿ ಓಡಿಯನ್ ಸ್ಮಿತ್ ಹೊಸ ದಾಖಲೆ ಬರೆಯಲಿದ್ದಾರಾ ಕಾದು ನೋಡಬೇಕಿದೆ.

ಸದ್ಯ ಪಂಜಾಬ್ ಕಿಂಗ್ಸ್​ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಇದೀಗ ಸ್ಪೋಟಕ ಬ್ಯಾಟ್ಸ್​ಮನ್ ಒಬ್ಬರು ಸಿಕ್ಕಂತಾಗಿದೆ. ಅದರ ಪರಿಣಾಮವೇ ಆರ್​ಸಿಬಿ ನೀಡಿ 205 ರನ್​ಗಳನ್ನು ಪಂಜಾಬ್ ಕಿಂಗ್ಸ್​ ನಿರಾಯಾಸವಾಗಿ ಚೇಸ್ ಮಾಡಿರುವುದು. ಅಷ್ಟೇ ಅಲ್ಲದೆ ಇತರೆ ವಿಂಡೀಸ್ ಆಟಗಾರರಂತೆ ಐಪಿಎಲ್​ನಲ್ಲಿ ಓಡಿಯನ್ ಸ್ಮಿತ್ ಕೂಡ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂಬ ವಿಶ್ಲೇಷಣೆಗಳು ಮೊದಲ ಪಂದ್ಯದ ಬೆನ್ನಲ್ಲೇ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಓಡಿಯನ್ ಸ್ಮಿತ್ ಐಪಿಎಲ್​ನ ಸಿಕ್ಸರ್ ಸ್ಮಿತ್ ಆಗಲಿದ್ದಾರಾ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು