ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ನಡೆದ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ನ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಫಿಲ್ ಸಾಲ್ಟ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಖರೀದಿಸಿದೆ. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಸ್ಟಾರ್ ವಿಕೆಟ್ ಕೀಪರ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಸಾಲ್ಟ್ ಖರೀದಿಗೆ ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಿಸಲಿಲ್ಲ. ಇದಾಗ್ಯೂ ಅಂತಿಮ ಹಂತದಲ್ಲಿ ಡೆಲ್ಲಿ ತಂಡವು 2 ಕೋಟಿಗೆ ಬಿಡ್ ಕೂಗುವ ಮೂಲಕ ಇಂಗ್ಲೆಂಡ್ ಆಟಗಾರನನ್ನು ತನ್ನದಾಗಿಸಿಕೊಂಡಿದೆ.
ಇಂಗ್ಲೆಂಡ್ ಪರ 12 ಟಿ20 ಇನಿಂಗ್ಸ್ ಆಡಿರುವ ಫಿಲ್ ಸಾಲ್ಟ್ 2 ಅರ್ಧಶತಕದೊಂದಿಗೆ 245 ರನ್ ಕಲೆಹಾಕಿದ್ದಾರೆ. ಈ ವೇಳೆ 9 ಸಿಕ್ಸ್ ಹಾಗೂ 28 ಫೋರ್ಗಳನ್ನು ಬಾರಿಸಿದ್ದರು. ಅಲ್ಲದೆ ದಿ ಹಂಡ್ರೆಡ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್ನಲ್ಲೂ ಫಿಲ್ ಸಾಲ್ಟ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಬಾರಿ ಐಪಿಎಲ್ನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳ ಖರೀದಿಗೆ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಪರಿಣಾಮ ಬೇಸ್ ಪ್ರೈಸ್ನೊಂದಿಗೆ ಫಿಲ್ ಸಾಲ್ಟ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು.
ಮತ್ತೊಂದೆಡೆ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಗಿದೆ. ಹಾಗೆಯೇ ಅಚ್ಚರಿ ಎಂಬಂತೆ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್, ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿ ಬರೋಬ್ಬರಿ 16 ಕೋಟಿಗೆ ಖರೀದಿ ಮಾಡಿದೆ.
ಇನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಸಿಎಸ್ಕೆ ತಂಡವು ದಾಖಲೆಯ 16.25 ಕೋಟಿ ಮೊತ್ತಕ್ಕೆ ಖರೀದಿಸಿದರೆ, ಆಸ್ಟ್ರೇಲಿಯಾದ ಯುವ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 17.5 ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದೆ.
ಐಪಿಎಲ್ ಮಿನಿಹರಾಜು ಪ್ರಕ್ರಿಯೆ ಲೈವ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Fri, 23 December 22