16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೂ ಮುನ್ನ ನಡೆಯಲ್ಲಿರುವ ಮಿನಿ ಹರಾಜಿಗೆ ಬಿಸಿಸಿಐ (BCCI) ಇದಾಗಲೇ ಸಕಲ ತಯಾರಿ ಮಾಡಿಕೊಂಡಿದೆ. ಅದರ ಅಂಗವಾಗಿ ಮಿನಿ ಹರಾಜಿಗೆ ಆಟಗಾರರ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಐಪಿಎಲ್ ಆಡುವ ಸಲುವಾಗಿ ಬರೋಬ್ಬರಿ 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 714 ಭಾರತೀಯ ಆಟಗಾರರಿದ್ದರೆ, 277 ವಿದೇಶಿ ಪ್ಲೇಯರ್ಸ್ ಆಗಿದ್ದಾರೆ. ಅದರಲ್ಲೂ ವಿದೇಶಿ ಆಟಗಾರರ ಖರೀದಿಗೆ ಮುಂದಾಗಿರುವ ಫ್ರಾಂಚೈಸಿಗಳು ಈ ಬಾರಿಯ ಟಿ20 ಚಾಂಪಿಯನ್ (T20 World Cup 2023) ಇಂಗ್ಲೆಂಡ್ ತಂಡದ ಆಟಗಾರರ ಮೇಲೆ ಹಣದ ಹೊಳೆಯನ್ನೇ ಹರಿಸುವ ಸಾಧ್ಯತೆಗಳಿವೆ.
ಅದರಲ್ಲೂ ಟಿ20 ವಿಶ್ವಕಪ್ ಫೈನಲ್‌ನ ಹೀರೋ ಬೆನ್ ಸ್ಟೋಕ್ಸ್ ಮತ್ತು ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಸ್ಯಾಮ್ ಕರನ್ ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುವುದು ಖಚಿತ. ಇದೇ ತಿಂಗಳು ನಡೆಯಲಿರುವ ಹರಾಜಿಗೆ ಇಬ್ಬರೂ ಅತ್ಯಧಿಕ ಮೂಲ ಬೆಲೆ ಅಂದರೆ 2 ಕೋಟಿ ರೂ. ಕ್ಯಾಟಗರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರ ಹೊರತಾಗಿ ಅನೇಕ ವಿದೇಶಿ ಆಟಗಾರರು ಈ ಮೂಲ ಬೆಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇನ್ನುಳಿದಂತೆ ಯಾವುದೇ ಭಾರತೀಯ ಆಟಗಾರರು ಈ ಕ್ಯಾಟಗರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸದಿರುವುದು ಅಚ್ಚರಿಯ ಸಂಗತಿಯಾಗಿದೆ.
ಒಟ್ಟು 991 ಆಟಗಾರರು
ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಮಿನಿ ಹರಾಜಿಗೆ ಒಟ್ಟು 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ, ಡಿಸೆಂಬರ್ 1 ರಂದು ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಕುರಿತು ಈ ಮಾಹಿತಿಯನ್ನು ನೀಡಿದೆ. 714 ಭಾರತೀಯ (ಕ್ಯಾಪ್ಡ್ ಮತ್ತು ಅನ್‌ಕ್ಯಾಪ್ಡ್ ಸೇರಿದಂತೆ) ಮತ್ತು 277 ವಿದೇಶಿ ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದಿಂದ ಗರಿಷ್ಠ 57 ಆಟಗಾರರು ಹೆಸರು ನೀಡಿದ್ದಾರೆ. ಇವರಲ್ಲದೆ 20 ಆಟಗಾರರು ಸಹವರ್ತಿ ತಂಡಗಳಿಂದ ಕೂಡಿದ್ದಾರೆ.
ಇದನ್ನೂ ಓದಿ: ಓಲಾ, ಊಬರ್, ರ್‍ಯಾಪಿಡೊ ಕಂಪನಿಗಳಿಗೆ ಕಡಿವಾಣ ಹಾಕಿ: ಕಾನೂನು ಪ್ರಾಧಿಕಾರಕ್ಕೆ ಆಟೊ ಚಾಲಕರ ಮನವಿ
ಅತ್ಯಧಿಕ ಮೂಲ ಬೆಲೆಯಲ್ಲಿ 21 ಆಟಗಾರರು
ESPN-Cricinfo ವರದಿಯ ಪ್ರಕಾರ, ಹರಾಜಿಗೆ ನಿಗದಿಪಡಿಸಲಾದ ಅತ್ಯಧಿಕ ಮೂಲ ಬೆಲೆಯಲ್ಲಿ ಇಬ್ಬರು ಇಂಗ್ಲೆಂಡ್ ಆಲ್-ರೌಂಡರ್‌ಗಳಾದ ಸ್ಯಾಮ್ ಕರನ್ ಮತ್ತು ಬೆನ್ ಸ್ಟೋಕ್ಸ್ ಸೇರಿದ್ದಾರೆ ಎಂದು ಹೇಳಲಾಗಿದೆ. ಸ್ಯಾಮ್ ಕರನ್ 2021 ರ ಐಪಿಎಲ್ ಸೀಸನ್ವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಆದರೆ ಗಾಯದ ಕಾರಣದಿಂದಾಗಿ ಕೊನೆಯ ಸೀಸನ್ನಲ್ಲಿ ಅವರಿಗೆ ಐಪಿಎಲ್ ಆಡಲು ಸಾಧ್ಯವಾಗಲಿಲ್ಲ. ಹಾಗೆಯೇ ಬೆನ್ ಸ್ಟೋಕ್ಸ್ ಕೂಡ ಗಾಯದ ಕಾರಣ 2021 ರ ಐಪಿಎಲ್ ಆರಂಭದಲ್ಲೇ ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದಿದ್ದರು.
ಅಂದಹಾಗೆ, ಒಟ್ಟು 21 ಆಟಗಾರರು ತಮ್ಮ ಹೆಸರನ್ನು 2 ಕೋಟಿ ಮೂಲ ಬೆಲೆಯಲ್ಲಿ ನೋಂದಾಯಿಸಿಕೊಂಡಿದ್ದು, ಇವರಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ಆಸ್ಟ್ರೇಲಿಯಾದ ಉದಯೋನ್ಮುಖ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಮತ್ತು ವೆಸ್ಟ್ ಇಂಡೀಸ್ ಮಾಜಿ ನಾಯಕ ನಿಕೋಲಸ್ ಪೂರನ್ ಸೇರಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಒಬ್ಬ ಭಾರತೀಯನೂ ಇಲ್ಲ. ಭಾರತದ ಆಟಗಾರರ ಪೈಕಿ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೇದಾರ್ ಜಾಧವ್ ಅವರಂತಹ ಆಯ್ದ ಆಟಗಾರರು 1 ಕೋಟಿ ಮೂಲ ಬೆಲೆಯಲ್ಲಿ ಹರಾಜಿಗೆ ಎಂಟ್ರಿಕೊಡಲಿದ್ದಾರೆ.
2 ಕೋಟಿ ಮೂಲ ಬೆಲೆಯ ಆಟಗಾರರು
ಸ್ಯಾಮ್ ಕರನ್, ಬೆನ್ ಸ್ಟೋಕ್ಸ್, ಕೇನ್ ವಿಲಿಯಮ್ಸನ್, ಜೇಮ್ಸ್ ನೀಶಮ್, ನಿಕೋಲಸ್ ಪೂರನ್, ಕ್ಯಾಮೆರಾನ್ ಗ್ರೀನ್, ನಾಥನ್ ಕೌಲ್ಟರ್-ನೈಲ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಟಾಮ್ ಬ್ಯಾಂಟನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಜೇಮೀ ಓವರ್ಟನ್, ಕ್ರೇಗ್ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಆಡಮ್ ಮಿಲ್ನೆ, ರಿಲೆ ರುಸ್ಸೋ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಂಜೆಲೊ ಮ್ಯಾಥ್ಯೂಸ್, ಜೇಸನ್ ಹೋಲ್ಡರ್.
1.5 ಕೋಟಿ ಮೂಲ ಬೆಲೆಯ ಆಟಗಾರರು
ಶಾನ್ ಅಬಾಟ್, ರೈಲಿ ಮೆರೆಡಿತ್, ಝೈ ರಿಚರ್ಡ್ಸನ್, ಆಡಮ್ ಝಂಪಾ, ಶಕೀಬ್ ಅಲ್ ಹಸನ್, ಹ್ಯಾರಿ ಬ್ರೂಕ್, ವಿಲ್ ಜ್ಯಾಕ್ಸ್, ಡೇವಿಡ್ ಮಲನ್, ಜೇಸನ್ ರಾಯ್, ಶೆರ್ಫೇನ್ ರುದರ್ಫೋರ್ಡ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:49 am, Fri, 2 December 22