IPL 2023: ಹೈದರಾಬಾದ್ ತಂಡಕ್ಕೆ ಬಿಗ್ ಶಾಕ್; ಸ್ಟಾರ್ ಆಲ್​​ರೌಂಡರ್ ಲೀಗ್​​ನಿಂದಲೇ ಔಟ್..!

IPL 2023: ವಾಸ್ತವವಾಗಿ ಹೇಳಬೇಕೆಂದರೆ, ವಾಷಿಂಗ್ಟನ್ ಸುಂದರ್ ಈ ಆವೃತ್ತಿ ಮೊದಲ 6 ಪಂದ್ಯಗಳಲ್ಲಿ ಸೂಪರ್‌ಫ್ಲಾಪ್ ಆಗಿದ್ದರು. ಮೊದಲ 6 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲ್ಲಿಲ್ಲ.

IPL 2023: ಹೈದರಾಬಾದ್ ತಂಡಕ್ಕೆ ಬಿಗ್ ಶಾಕ್; ಸ್ಟಾರ್ ಆಲ್​​ರೌಂಡರ್ ಲೀಗ್​​ನಿಂದಲೇ ಔಟ್..!
ಹೈದರಾಬಾದ್ ತಂಡ

Updated on: Apr 27, 2023 | 3:16 PM

16ನೇ ಆವೃತ್ತಿಯ ಐಪಿಎಲ್​ನ (IPL 2023) ಅರ್ಧ ಪಯಣ ಮುಗಿದಂತ್ತಾಗಿದೆ. ಅಂದರೆ ಎಲ್ಲಾ ತಂಡಗಳು ತಲಾ 7 ಪಂದ್ಯಗಳನ್ನು ಆಡುವುದರೊಂದಿಗೆ ಟೂರ್ನಿಯಲ್ಲಿ ಮೊದಲಾರ್ಧವನ್ನು ಮುಗಿಸಿವೆ. ವಾಸ್ತವವಾಗಿ ಐಪಿಎಲ್​ನ ಲೀಗ್​ ಹಂತದಲ್ಲಿ ಎಲ್ಲಾ ತಂಡಗಳು ತಲಾ 14 ಪಂದ್ಯಗಳನ್ನು ಆಡಲಿವೆ. ಸದ್ಯ 7 ಪಂದ್ಯಗಳನ್ನಾಡಿರುವ ತಂಡಗಳು ಮುಂದಿನ 7 ಪಂದ್ಯಗಳಲ್ಲಿ ಹೆಚ್ಚಿನ ಗೆಲುವು ಸಾಧಿಸಿ ಪ್ಲೇ ಆಫ್​ಗೇರಲು ಶತ ಪ್ರಯತ್ನ ಮಾಡುತ್ತಿವೆ. ಆದರೆ ಕಳೆದ ಕೆಲವು ಸೀಸನ್​ಗಳಿಂದ ಲೀಗ್​ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುತ್ತಿರುವ ಸನ್​ರೈಸರ್ಸ್​ ಹೈದರಾಬಾದ್ (Sunrisers Hyderabad) ತಂಡ ಈ ಆವೃತ್ತಿಯಲ್ಲೂ ಅದೇ ರೀತಿಯ ಪ್ರದರ್ಶನ ನೀಡುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ ಆಗೊಮ್ಮೆ ಈಗೊಮ್ಮೆ ಗೆಲುವು ಸಾಧಿಸಿರುವ ಎಸ್​ಆರ್​ಹೆಚ್ ತಂಡ ಪ್ಲೇ ಆಫ್​ಗೇರಬೇಕೆಂದರೆ ಉಳಿದಿರುವ 7 ಪಂದ್ಯಗಳನ್ನೂ ಗೆಲ್ಲಬೇಕಾಗಿದೆ. ಆದರೆ ಈ ನಡುವೆ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್​​ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಇಂಜುರಿಯಿಂದಾಗಿ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಕಳೆದ ಬಾರಿ ನಡೆದ ಮೆಗಾ ಹರಾಜಿನಲ್ಲಿ ಹೈದರಾಬಾದ್ ವಾಷಿಂಗ್ಟನ್ ಸುಂದರ್ ಅವರನ್ನು ಬರೋಬ್ಬರಿ 8.75 ಕೋಟಿ ನೀಡಿ ಖರೀದಿಸಿತ್ತು. ಆದರೆ ಇದೀಗ ಸುಂದರ್ ಟೂರ್ನಿಯಿಂದ ಹೊರಬಿದ್ದಿರುವುದು ತಂಡಕ್ಕೆ ಭಾರಿ ಹಿನ್ನಡೆಯುಂಟು ಮಾಡಿದೆ.

ಈ ವಿಚಾರವನ್ನು ಸ್ವತಃ ಫ್ರಾಂಚೈಸಿಯೇ ಹೊರಹಾಕಿದ್ದು, ಸುಂದರ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಲೀಗ್​ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ನೀಡಿದೆ. ಸದ್ಯ ಹೈದರಾಬಾದ್ ತಂಡ ಲೀಗ್‌ನಲ್ಲಿ ಆಡಿರುವ 7 ಪಂದ್ಯಗಳಲ್ಲಿ ಇದುವರೆಗೆ ಕೇವಲ 2 ಗೆಲುವು ಸಾಧಿಸಿದ್ದು, ಒಟ್ಟು 4 ಅಂಕಗಳೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಕಳೆದ ಪಂದ್ಯದಲ್ಲಿ ಫಾರ್ಮ್​ಗೆ ಬಂದಿದ್ದ ಸುಂದರ್

ವಾಸ್ತವವಾಗಿ ಹೇಳಬೇಕೆಂದರೆ, ವಾಷಿಂಗ್ಟನ್ ಸುಂದರ್ ಈ ಆವೃತ್ತಿ ಮೊದಲ 6 ಪಂದ್ಯಗಳಲ್ಲಿ ಸೂಪರ್‌ಫ್ಲಾಪ್ ಆಗಿದ್ದರು. ಮೊದಲ 6 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲ್ಲಿಲ್ಲ. ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದ್ದ ಸುಂದರ್, ಡೆಲ್ಲಿ ವಿರುದ್ಧ 28 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಅದರಲ್ಲೂ ಒಂದೇ ಓವರ್‌ನಲ್ಲಿ ಎಲ್ಲಾ ಮೂರು ವಿಕೆಟ್‌ಗಳನ್ನು ಪಡೆದಿದ್ದು ವಿಶೇಷವಾಗಿತ್ತು. ಇದಲ್ಲದೇ ಬ್ಯಾಟಿಂಗ್​ನಲ್ಲೂ ಮಿಂಚಿದ್ದ ಸುಂದರ್ ಕೇವಲ 15 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿದರಾದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿರಲಿಲ್ಲ.

IPL 2023 RCB vs KKR Highlights: ಕೆಕೆಆರ್ ವಿರುದ್ಧ ಮತ್ತೆ ಎಡವಿದ ಆರ್​ಸಿಬಿಗೆ 22 ರನ್ ಸೋಲು

ಫೀಲ್ಡಿಂಗ್‌ನಲ್ಲೂ ಅದ್ಭುತ ಪ್ರದರ್ಶನ

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ ಮತ್ತು ಬಾಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸುಂದರ್, ಅದೇ ಪಂದ್ಯದಲ್ಲಿ, ಅದ್ಭುತ ಫೀಲ್ಡಿಂಗ್ ಕೂಡ ಮಾಡಿದ್ದರು. ಬೌಲಿಂಗ್​​ನಲ್ಲಿ ನಾಯಕ ಡೇವಿಡ್ ವಾರ್ನರ್, ಸರ್ಫರಾಜ್ ಖಾನ್ ಮತ್ತು ಅಮನ್ ಖಾನ್ ಅವರ ವಿಕೆಟ್ ಉರುಳಿಸಿದ್ದ ಸುಂದರ್, ಫಿಲ್ಡಿಂಗ್​​ನಲ್ಲಿ ಮನೀಶ್ ಪಾಂಡೆಯನ್ನು ರನ್ ಔಟ್ ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು.

ಹೈದರಾಬಾದ್ ಬಗ್ಗೆ ಚಿಂತೆ ಶುರು

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸುಂದರ್ ಫಾರ್ಮ್​ಗೆ ಮರಳಿದ್ದನ್ನು ಕಂಡು ಅವರ ಅಭಿಮಾನಿಗಳು ಹಾಗೂ ಫ್ರಾಂಚೈಸಿಯ ಟೆನ್ಷನ್ ಬಹುತೇಕ ಕಡಿಮೆಯಾಗಿತ್ತು.ಆದರೆ ಮುಂದಿನ ಪಂದ್ಯಕ್ಕೂ ಮುನ್ನವೇ ಟೂರ್ನಿಯಿಂದ ನಿರ್ಗಮಿಸಿದ್ದರಿಂದ ಹೈದ್ರಾಬಾದ್‌ಗೆ ಈಗ ಮತ್ತೆ ತಲೆನೋವು ಹೆಚ್ಚಿದೆ. ಸನ್‌ರೈಸರ್ಸ್ ಹೈದರಾಬಾದ್ ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 29 ರಂದು ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ