IPL 2024: ನಿರೀಕ್ಷೆಗೂ ಮೀರಿದ ಯಶಸ್ಸು; ‘ತೆರೆಮರೆಯ ಹೀರೋಗಳಿಗೆ’ ಬಿಸಿಸಿಐ ಬಂಪರ್ ಗಿಫ್ಟ್
IPL 2024: ಈ ಬಾರಿಯ ಐಪಿಎಲ್ನಿಂದ ಬಿಸಿಸಿಐ ಖಜಾನೆ ನಿರೀಕ್ಷಿತ ಮಟ್ಟಕ್ಕಿಂತಲೂ ಭರ್ತಿಯಾಗಿರುವುದಂತೂ ಸತ್ಯ. ಯಶಸ್ವಿಯಾಗಿ 17ನೇ ಆವೃತ್ತಿಯನ್ನು ಪೂರ್ಣಗೊಳಿಸಿದ ಬಿಸಿಸಿಐ ಇದೀಗ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಅದರಂತೆ ಈ ಬಾರಿಯ ಐಪಿಎಲ್ ಪಂದ್ಯಗಳಿಗೆ ಆತಿಥ್ಯವಹಿಸಿದ್ದ 13 ಮೈದಾನಗಳ ಸಿಬ್ಬಂದಿಗೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಣೆ ಮಾಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ (KKR) ಚಾಂಪಿಯನ್ ಪಟ್ಟಕ್ಕೇರುವ ಮೂಲಕ 17ನೇ ಆವೃತ್ತಿಯ ಐಪಿಎಲ್ಗೆ (IPL 2024) ಅದ್ಧೂರಿ ತೆರೆ ಬಿದ್ದಿದೆ. ಕಳೆದ 16 ಆವೃತ್ತಿಗಳಿಗಿಂತಲೂ ಈ ಆವೃತ್ತಿ ಎಲ್ಲಾ ವಿಭಾಗದಲ್ಲೂ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ಬಡಿಸಿತ್ತು. ಕೇವಲ 3 ಪಂದ್ಯಗಳು ಮಳೆಗಾಹುತಿಯಾಗಿದ್ದನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಪಂದ್ಯಗಳು ಯಾವುದೇ ಅಡಚಣೆಗಳಿಲ್ಲದೆ ಅಂತ್ಯಗೊಂಡಿದ್ದವು. ಹಾಗೆಯೇ ಫೈನಲ್ ಪಂದ್ಯವೊಂದು ಏಕಪಕ್ಷೀಯವಾಗಿ ಅಂತ್ಯಗೊಂಡಿದ್ದನ್ನು ಬಿಟ್ಟರೆ ಉಳಿದ ಪಂದ್ಯಗಳು ರೋಚಕತೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಹೀಗಾಗಿ ಈ ಬಾರಿಯ ಐಪಿಎಲ್ನಿಂದ ಬಿಸಿಸಿಐ (BCCI) ಖಜಾನೆ ನಿರೀಕ್ಷಿತ ಮಟ್ಟಕ್ಕಿಂತಲೂ ಭರ್ತಿಯಾಗಿರುವುದಂತೂ ಸತ್ಯ. ಯಶಸ್ವಿಯಾಗಿ 17ನೇ ಆವೃತ್ತಿಯನ್ನು ಪೂರ್ಣಗೊಳಿಸಿದ ಬಿಸಿಸಿಐ ಇದೀಗ ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಅದರಂತೆ ಈ ಬಾರಿಯ ಐಪಿಎಲ್ ಪಂದ್ಯಗಳಿಗೆ ಆತಿಥ್ಯವಹಿಸಿದ್ದ 13 ಮೈದಾನಗಳ ಸಿಬ್ಬಂದಿಗೆ ಬಿಸಿಸಿಐ ಭರ್ಜರಿ ಬಹುಮಾನ ಘೋಷಣೆ ಮಾಡಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಆಡಲಾದ 74 ಪಂದ್ಯಗಳಿಗೆ 13 ಮೈದಾನಗಳು ಆತಿಥ್ಯವಹಿಸಿದ್ದವು. ಇದರಲ್ಲಿ 10 ಮೈದಾನಗಳಿಗೆ ತಲಾ 25 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗಿದೆ. ಅಂದರೆ ಪಂದ್ಯ ಸುಗಮವಾಗಿ ನಡೆಯಲು ನೆರವಾದ ಈ 10 ಮೈದಾನದ ಸಿಬ್ಬಂದಿಗಳು ( ಗ್ರೌಂಡ್ಸ್‌ಮೆನ್‌ಗಳು) ಹಾಗೂ ಪಿಚ್ ಕ್ಯುರೇಟರ್‌ಗಳು ಈ ಬಹುಮಾನದ ಪಾಲುದಾರರಾಗಲಿದ್ದಾರೆ. ಉಳಿದ 3 ಮೈದಾನಗಳಿಗೆ ತಲಾ 10 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗಿದೆ.
ಜಯ್ ಶಾ ಮಹತ್ವದ ಘೋಷಣೆ
2024 ರ ಐಪಿಎಲ್ಗೆ ಆತಿಥ್ಯವಹಿಸಿದ್ದ 13 ಕ್ರೀಡಾಂಗಣಗಳ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳಿಗೆ ಬಹುಮಾನ ಘೋಷಿಸಿರುವ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಜಯ್ ಶಾ, ‘ಈ ಬಾರಿಯ ಐಪಿಎಲ್ ಅತ್ಯಂತ ಯಶಸ್ವಿಯಾಗಲು ಅನ್‌ಸಂಗ್ ಹೀರೋಗಳು (ಮೈದಾನಗಳಲ್ಲಿ ಕೆಲಸ ಮಾಡುವ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್ಸ್) ಕಾರಣ. ಎಂತಹ ಕಠಿಣ ವಾತಾವರಣದಲ್ಲಿಯೂ ಉತ್ತಮ ಪಿಚ್‌ಗಳನ್ನು ಒದಗಿಸಲು ದಣಿವರಿಯಿಲ್ಲದೆ ಶ್ರಮಿಸಿದ 10 ಐಪಿಎಲ್ ಮೈದಾನಗಳಲ್ಲಿ ಕೆಲಸ ಮಾಡುವ ಗ್ರೌಂಡ್ಸ್‌ಮೆನ್ ಮತ್ತು ಕ್ಯುರೇಟರ್‌ಗಳಿಗೆ ತಲಾ 25 ಲಕ್ಷ ರೂ. ಮತ್ತು ಮೂರು ಹೆಚ್ಚುವರಿ ಮೈದಾನಗಳಲ್ಲಿ ಕೆಲಸ ಮಾಡುವವರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುತ್ತಿದೆ. ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
The unsung heroes of our successful T20 season are the incredible ground staff who worked tirelessly to provide brilliant pitches, even in difficult weather conditions. As a token of our appreciation, the groundsmen and curators at the 10 regular IPL venues will receive INR 25…
— Jay Shah (@JayShah) May 27, 2024
ಬಹುಮಾನದ ಪಾಲು ಹೀಗಿದೆ
25 ಲಕ್ಷ ರೂ. ಬಹುಮಾನಕ್ಕೆ ಭಾಜನವಾದ 10 ನಿಯಮಿತ ಮೈದಾನಗಳೆಂದರೆ ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ, ಚಂಡೀಗಢ, ಹೈದರಾಬಾದ್, ಬೆಂಗಳೂರು, ಲಕ್ನೋ, ಅಹಮದಾಬಾದ್ ಮತ್ತು ಜೈಪುರದ ಕ್ರೀಡಾಂಗಣಗಳಾಗಿವೆ. ಇವಲ್ಲದೆ ಈ ವರ್ಷ ಹೆಚ್ಚುವರಿಯಾಗಿ ಗುವಾಹಟಿ, ವಿಶಾಖಪಟ್ಟಣಂ ಮತ್ತು ಧರ್ಮಶಾಲಾದಲ್ಲೂ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಗುವಾಹಟಿಯು ರಾಜಸ್ಥಾನ ರಾಯಲ್ಸ್‌ನ ಎರಡನೇ ತವರು ಮೈದಾನವಾಗಿದ್ದು, ವಿಶಾಖಪಟ್ಟಣಂ ಡೆಲ್ಲಿ ಕ್ಯಾಪಿಟಲ್ಸ್‌ನ ಹೋಮ್ ಪಂದ್ಯಗಳ ಮೊದಲ ಲೆಗ್ ಅನ್ನು ಆಯೋಜಿಸಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಧರ್ಮಶಾಲಾ ಎರಡನೇ ತವರು ಮೈದಾನವಾಗಿತ್ತು. ಹೀಗಾಗಿ ಈ ಮೂರು ಮೈದಾನಗಳಿಗೆ ತಲಾ 10 ಲಕ್ಷ ರೂ. ನೀಡಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Mon, 27 May 24