17ನೇ ಆವೃತ್ತಿಯ ಐಪಿಎಲ್ನ (IPL 2024) ನಿರ್ಣಾಯಕ ಪಂದ್ಯ ಇದೇ ಭಾನುವಾರ ಅಂದರೆ ನಾಳೆ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (KKR vs SRH) ನಡುವೆ ನಡೆಯಲಿದೆ . ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ (MA Chidambaram Stadium) ಎರಡೂ ತಂಡಗಳು ಟ್ರೋಫಿಗಾಗಿ ಸೆಣಸಲಿವೆ. ಈ ಸೀಸನ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ಕೋಲ್ಕತ್ತಾ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಇದೇ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ನೇರವಾಗಿ ಫೈನಲ್ ತಲುಪಿತ್ತು. ಇತ್ತ ಹೈದರಾಬಾದ್ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಈಗ ಭಾನುವಾರ ಉತ್ತಮ ಪ್ರದರ್ಶನ ನೀಡುವ ತಂಡ ಟ್ರೋಫಿ ಗೆಲ್ಲಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಅಂಕಿಅಂಶಗಳನ್ನು ನಾವು ನೋಡುವುದಾದರೆ, ಲೀಗ್‌ನಲ್ಲಿ ಹೈದರಾಬಾದ್ಗಿಂತ ಕೆಕೆಆರ್ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 27 ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಕೋಲ್ಕತ್ತಾ 18 ಪಂದ್ಯಗಳನ್ನು ಗೆದ್ದಿದ್ದರೆ, ಹೈದರಾಬಾದ್ ಕೇವಲ 9 ಪಂದ್ಯಗಳನ್ನು ಗೆಲ್ಲಲು ಶಕ್ತವಾಗಿದೆ. ಉಭಯ ತಂಡಗಳ ನಡುವಿನ ಕಳೆದ 6 ಪಂದ್ಯಗಳನ್ನು ಗಮನಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ 4 ಪಂದ್ಯಗಳನ್ನು ಮತ್ತು ಸನ್ ರೈಸರ್ಸ್ ಹೈದರಾಬಾದ್ 2 ಪಂದ್ಯಗಳನ್ನು ಗೆದ್ದಿದೆ.
IPL 2024: ‘ಬೇಡ ಅಂದ್ರೂ ಈ ಕೆಲಸ ಮಾಡಿದ್ದಾರೆ’; ಐಪಿಎಲ್ ಪ್ರಸಾರಕರ ವಿರುದ್ಧ ರೋಹಿತ್ ಬೇಸರ
ಇನ್ನು ಈ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡು ಬಾರಿ ಮುಖಾಮುಖಿಯಾಗಿದ್ದವು. ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಕೆಕೆಆರ್ 4 ರನ್ಗಳಿಂದ ಹೈದರಾಬಾದ್ ತಂಡವನ್ನು ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಫಿಲ್ ಸಾಲ್ಟ್ (54) ಮತ್ತು ಆಂಡ್ರೆ ರಸೆಲ್ (64) ಅವರ ಅರ್ಧಶತಕಗಳ ನೆರವಿನಿಂದ 208 ರನ್ ಕಲೆಹಾಕಿತ್ತು. ಉತ್ತರವಾಗಿ ಹೈದರಾಬಾದ್ 204 ರನ್ ಗಳಿಸಲಷ್ಟೇ ಶಕ್ತವಾಯಿತು. ಹೆನ್ರಿಕ್ ಕ್ಲಾಸೆನ್ 63 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೂ ಸಹ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಈ ಸೀಸನ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್, ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ 159 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ರಾಹುಲ್ ತ್ರಿಪಾಠಿ ಗರಿಷ್ಠ 55 ರನ್ ಗಳಿಸಿದ್ದರು. ಉತ್ತರವಾಗಿ ಕೋಲ್ಕತ್ತಾ ಕೇವಲ 13.4 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. ವೆಂಕಟೇಶ್ ಅಯ್ಯರ್ ಅಜೇಯ 51 ಮತ್ತು ನಾಯಕ ಶ್ರೇಯಸ್ ಅಯ್ಯರ್ ಅಜೇಯ 58 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ