IPL 2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು! ವಿಡಿಯೋ ಸಾಕ್ಷಿ ಇದೆ

IPL 2024: ಆಡಿದ ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ತನ್ನ ನಾಯಕತ್ವದ ನಿರ್ಧಾರಗಳಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಇದೀಗ ತಂಡದ ಬೌಲಿಂಗ್ ಕೋಚ್ ಹಾಗೂ ತಂಡದ ಮಾಜಿ ಹಿರಿಯ ಆಟಗಾರ ಲಸಿತ್ ಮಾಲಿಂಗ ಅವರನ್ನು ನಡೆಸಿಕೊಂಡ ರೀತಿಯಿಂದಾಗಿ ಮತ್ತೊಮ್ಮೆ ಚರ್ಚೆಗೆ ಒಳಗಾಗಿದ್ದಾರೆ.

IPL 2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು! ವಿಡಿಯೋ ಸಾಕ್ಷಿ ಇದೆ
ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ

Updated on: Mar 29, 2024 | 3:42 PM

ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ನಾಯಕನಾಗಿ ಆಯ್ಕೆಯಾದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಾಗುತ್ತಲೇ ಇದ್ದಾರೆ. ಆಡಿದ ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ತನ್ನ ನಾಯಕತ್ವದ ನಿರ್ಧಾರಗಳಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಇದೀಗ ತಂಡದ ಬೌಲಿಂಗ್ ಕೋಚ್ ಹಾಗೂ ತಂಡದ ಮಾಜಿ ಹಿರಿಯ ಆಟಗಾರ ಲಸಿತ್ ಮಾಲಿಂಗ (Lasith Malinga) ಅವರನ್ನು ನಡೆಸಿಕೊಂಡ ರೀತಿಯಿಂದಾಗಿ ಮತ್ತೊಮ್ಮೆ ಚರ್ಚೆಗೆ ಒಳಗಾಗಿದ್ದಾರೆ. ವಾಸ್ತವವಾಗಿ ಕೆಲವು ದಿನಗಳಿಂದ ಮುಂಬೈ ಇಂಡಿಯನ್ಸ್ ಪಾಳಯದಲ್ಲಿ ಎಲ್ಲವೂ ಸರಿ ಇಲ್ಲ ಎಂದು ವರದಿಯಾಗುತ್ತಿದೆ. ಅದರಂತೆ ತಂಡದಲ್ಲಿ ಎರಡೂ ಗುಂಪುಗಳಾಗಿದ್ದು, ಒಂದು ಗುಂಪು ರೋಹಿತ್ ಶರ್ಮಾ (Rohit Sharma) ಅವರ ಪರವಾಗಿ ಇನ್ನೊಂದು ಗುಂಪು ಹಾರ್ದಿಕ್ ಪಾಂಡ್ಯ ಪರವಾಗಿದೆ ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕೆಲವೊಂದು ವಿಡಿಯೋ ಸಾಕ್ಷಿಗಳು ಹೊರಬಿದ್ದಿವೆ.

ಮುಂಬೈಗೆ ಹೀನಾಯ ಸೋಲು

ಇದೆಲ್ಲದರ ನಡುವೆ ತಂಡದ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಸಂಬಂಧ ಹಳಸಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಒಬ್ಬೊಬ್ಬರಿಗೊಬ್ಬರು ಮುಖ ಕೂಡ ನೋಡದಷ್ಟು ದ್ವೇಷ ಬೆಳೆಸಿಕೊಂಡಿದ್ದಾರೆ ಎಂಬುದು ವೈರಲ್ ಆಗಿರುವ ವಿಡಿಯೋದಲ್ಲಿ ಬಹಿರಂಗಗೊಂಡಿದೆ. ವಾಸ್ತವವಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ 31 ರನ್‌ಗಳ ಸೋಲನ್ನು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ತಂಡದ ಬೌಲಿಂಗ್ ತೀರಾ ಕಳಪೆಯಾಗಿದ್ದು, 277 ರನ್ ಬಿಟ್ಟುಕೊಟ್ಟು ಬೇಡದ ದಾಖಲೆ ಬರೆದಿತ್ತು. ಇದು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡದ ಸತತ ಎರಡನೇ ಸೋಲಾಗಿತ್ತು.

ತಬ್ಬಿಕೊಳ್ಳಲು ನಿರಾಕರಿಸಿದ ಪಾಂಡ್ಯ

ಅದಾಗ್ಯೂ ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ನಗುನಗುತ್ತಲೇ ಎದುರಾಳಿ ತಂಡದ ಆಟಗಾರರಿಗೆ ಕೈಕುಲುಕುತ್ತಾ ಶುಭಾಶಯ ಕೋರಿದ್ದರು. ಈ ವೇಳೆ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಮಾಲಿಂಗ, ಹಾರ್ದಿಕ್ ಅವರನ್ನು ತಬ್ಬಿಕೊಳ್ಳಲು ಬಂದಾಗ, ಹಾರ್ದಿಕ್ ಅವರತ್ತ ನೋಡದೆ ಮಾಲಿಂಗರನ್ನು ತಬ್ಬಿಕೊಳ್ಳದಂತೆ ದೂರ ತಳ್ಳಿದ್ದಾರೆ. ಮಾಲಿಂಗ ಕೂಡ ನಿರಾಸೆಯ ಭಾವನೆಯಿಂದ ಅಲ್ಲಿಂದ ವಾಪಸ್ಸಾಗಿದ್ದಾರೆ.

ಎದ್ದು ಹೋದ ಮಾಲಿಂಗ

ಈ ಘಟನೆಗೂ ಮುನ್ನ ನಡೆದ ಇನ್ನೊಂದು ಘಟನೆ ಕೂಡ ಈ ಇಬ್ಬರ ನಡುವೆ ಏನೂ ಸರಿ ಇಲ್ಲ ಎಂಬುದಕ್ಕೆ ಸಾಕ್ಷ್ಯ ನುಡಿಯುತ್ತಿದೆ. ವಾಸ್ತವವಾಗಿ ಮುಂಬೈ ತಂಡದ ಬ್ಯಾಟಿಂಗ್ ವೇಳೆ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಲು ಡಗೌಟ್​ನಲ್ಲಿ ತಯಾರಾಗುತ್ತಿದ್ದರು. ಅಲ್ಲೆ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್ ಮತ್ತು ಮಾಲಿಂಗ ಕುರ್ಚಿಗಳ ಮೇಲೆ ಕುಳಿತಿದ್ದರು. ನಂತರ ಪೊಲಾರ್ಡ್ ಪಾಂಡ್ಯಗೆ ಸೀಟ್ ಬಿಟ್ಟು ಕೊಡಲು ಮುಂದಾದರು. ಕೂಡಲೇ ಮಾಲಿಂಗ ಪೊಲಾರ್ಡ್ ಅವರನ್ನು ತಡೆದು, ತಾವೇ ಅಲ್ಲಿಂದ ಎದ್ದು ಹೊರಟು ಹೋದರು. ಆಗಲೂ ಮಾಲಿಂಗ ಪಾಂಡ್ಯರ ಮುಖ ಕೂಡ ನೋಡಲಿಲ್ಲ.

ಒಟ್ಟಾಗಿ ಆಡಿದ್ದ ಪಾಂಡ್ಯ- ಮಾಲಿಂಗ

ಮಾಲಿಂಗ ತಮ್ಮ ಇಡೀ ಐಪಿಎಲ್ ವೃತ್ತಿಜೀವನವನ್ನು ಮುಂಬೈ ಇಂಡಿಯನ್ಸ್‌ ತಂಡದಲ್ಲೇ ಕಳೆದಿದ್ದಲ್ಲದೆ ಅಲ್ಲದೆ ತಂಡ 5 ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಸಮಯದಲ್ಲಿ, ಹಾರ್ದಿಕ್ ಸಹ ತಂಡದ ಭಾಗವಾಗಿದ್ದರು ಮತ್ತು ಆ ಸಮಯದಲ್ಲಿ ಇಬ್ಬರ ನಡುವಿನ ಸಂಬಂಧವು ತುಂಬಾ ಚೆನ್ನಾಗಿತ್ತು. ಇದೀಗ ಇತ್ತೀಚೆಗಷ್ಟೇ ನಾಯಕತ್ವ ಬದಲಾವಣೆಯಿಂದ ಇಬ್ಬರ ನಡುವೆ ಮುನಿಸು ಬಂದಿದೆಯೋ ಅಥವಾ ಹಾರ್ದಿಕ್ ಬೌಲಿಂಗ್ ಕೋಚ್‌ನ ಪ್ಲಾನ್‌ಗಳನ್ನು ಒಪ್ಪಿಕೊಳ್ಳದ ಕಾರಣ ಪರಿಸ್ಥಿತಿ ಹದಗೆಟ್ಟಿದೆಯೋ ಎಂದು ಹೇಳುವುದು ಕಷ್ಟ. ಸದ್ಯಕ್ಕೆ ಹಾರ್ದಿಕ್ ಸಂಕಷ್ಟದಲ್ಲಿರುವಂತೆ ಕಾಣುತ್ತಿರುವುದು ಸ್ಪಷ್ಟವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us