ಐಪಿಎಲ್ 17 ನೇ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಸೋಲನ್ನು ಎದುರಿಸಿದೆ. ಐದು ಬಾರಿಯ ಚಾಂಪಿಯನ್ ತಂಡಕ್ಕೆ ಈ ರೀತಿಯಾಗಿ ಸತತ ಸೋಲುಗಳು ಎದುರಾಗುತ್ತವೆ ಎಂದು ಯಾರೂ ಕೂಡ ನಿರೀಕ್ಷಿಸಿರಲಿಲ್ಲ. ಆದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡಕ್ಕೆ ಗೆಲುವು ಮರಿಚಿಕೆಯಾಗಿದೆ.
ವಾಸ್ತವವಾಗಿ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿದ್ದ ರೋಹಿತ್ ಶರ್ಮಾರನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ, ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಹಸ್ತಾಂತರಿಸಿತ್ತು. ಫ್ರಾಂಚೈಸಿಯ ಈ ನಿರ್ಧಾರ ಅಭಿಮಾನಿಗಳಲ್ಲಿ ಕೋಪ ತರಿಸಿತ್ತು. ಇದೀಗ ಪಾಂಡ್ಯ ನಾಯಕತ್ವದಲ್ಲಿ ತಂಡದ ಕಳಪೆ ಪ್ರದರ್ಶನ ಅಭಿಮಾನಿಗಳು ಇನ್ನಷ್ಟು ಅಸಮಾಧಾನಗೊಳ್ಳುವಂತೆ ಮಾಡಿದೆ.
ಇದೆಲ್ಲದರ ನಡುವೆ ಮುಂಬೈ ತಂಡದ ನಾಯಕನಾಗಿ ಆಡಿದ ಎರಡೂ ಪಂದ್ಯಗಳನ್ನು ಸೋತಿರುವ ಹಾರ್ದಿಕ್ ಪಾಂಡ್ಯ ತನ್ನ ಖಾತೆಗೆ ಬೇಡದ ದಾಖಲೆಯೊಂದನ್ನು ಹಾಕಿಕೊಂಡಿದ್ದಾರೆ. ಅದರಂತೆ 2008 ರ ನಂತರ ಮುಂಬೈ ತಂಡ ನೂತನ ನಾಯಕನಡಿಯಲ್ಲಿ ಸೀಸನ್ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿದೆ.
ವಾಸ್ತವವಾಗಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿದ್ದ ಹರ್ಭಜನ್ ಸಿಂಗ್ ಅವರ ನಾಯಕತ್ವದಲ್ಲಿ 2008 ರ ಐಪಿಎಲ್ ಸೀಸನ್ ಆಡಿತ್ತು. ಆದರೆ ತಂಡವು ಸೀಸನ್ನ ಮೊದಲ ಮೂರು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಎದುರಿಸಬೇಕಾಯಿತು. ಆ ನಂತರ ತಂಡ ಮೊದಲ ಪಂದ್ಯ ಸೋತರೂ ಆ ನಂತರದ ಪಂದ್ಯಗಳಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳುತ್ತಿತ್ತು.
ಆದರೆ ಇದೀಗ ಮುಂಬೈ ತಂಡ ನೂತನ ನಾಯಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಪಾಂಡ್ಯ ಮೊದಲ ಬಾರಿಗೆ ಈ ಫ್ರಾಂಚೈಸಿಯ ನಾಯಕರಾಗಿ ಐಪಿಎಲ್ ಸೀಸನ್ನ ಮೊದಲ 2 ಪಂದ್ಯಗಳಲ್ಲಿ ಸೋತಿದ್ದಾರೆ.
ನಾಯಕತ್ವದಲ್ಲಿ ಮಾತ್ರವಲ್ಲದೆ ಹಾರ್ದಿಕ್ ಆಟಗಾರನಾಗಿಯೂ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 30 ರನ್ ನೀಡಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗದ ಹಾರ್ದಿಕ್ ಬ್ಯಾಟ್‌ನಿಂದ 11 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ತಮ್ಮ 4 ಓವರ್‌ಗಳಲ್ಲಿ 46 ರನ್ ನೀಡಿ 1 ವಿಕೆಟ್ ಮಾತ್ರ ಕಬಳಿಸಲು ಶಕ್ತರಾದರು. ತಂಡ 278 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಹಾರ್ದಿಕ್ 20 ಎಸೆತಗಳಲ್ಲಿ 24 ರನ್ ಗಳಿಸಿ ನಿಧಾನಗತಿಯ ಆಟವಾಡಿ ಪೆವಿಲಿಯನ್‌ಗೆ ಮರಳಿದರು.
Published On - 4:13 pm, Thu, 28 March 24