IPL 2024: ಸೋಲಿನ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಕಾವ್ಯಾ ಮಾರನ್ ಹೇಳಿದ್ದೇನು? ವಿಡಿಯೋ ನೋಡಿ

|

Updated on: May 27, 2024 | 9:55 PM

IPL 2024: ಕಪ್ ಜಯಿಸುವ ಅವಕಾಶವನ್ನು ಕೈಚೆಲ್ಲಿದ ಹೈದರಾಬಾದ್ ಆಟಗಾರರು ನಿರಾಸೆಯೊಂದಿಗೆ ಮೈದಾನ ತೊರೆದಿದ್ದರು. ತಂಡದ ಒಡತಿ ಕಾವ್ಯಾ ಮಾರನ್ ಕೂಡ ಗ್ಯಾಲರಿಯಲ್ಲಿ ಕುಳಿತು ತಂಡದ ಸೋಲಿಗೆ ಕಣ್ಣೀರು ಸುರಿಸಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊವೊಂದು ಹರಿದಾಡುತ್ತಿದ್ದು, ಕಾವ್ಯಾ ಮಾರನ್ ಅವರ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

IPL 2024: ಸೋಲಿನ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್​ಗೆ ತೆರಳಿ ಕಾವ್ಯಾ ಮಾರನ್ ಹೇಳಿದ್ದೇನು? ವಿಡಿಯೋ ನೋಡಿ
ಕಾವ್ಯಾ ಮಾರನ್
Follow us on

ತನ್ನ ಹೊಡಿಬಡಿ ಆಟದಿಂದ ಈ ಐಪಿಎಲ್​ನ (IPL 2024) ಮೆರುಗು ಹೆಚ್ಚಿಸಿದ ತಂಡವೆಂದರೆ ಅದು ಸನ್‌ರೈಸರ್ಸ್ ಹೈದರಾಬಾದ್ (SRH). ಲೀಗ್ ಹಂತದಲ್ಲಿ ಯಾವ ಎದುರಾಳಿಯನ್ನು ಬಿಡದೆ ರನ್ ಶಿಖರವನ್ನು ಕಟ್ಟಿದ ಹೈದರಾಬಾದ್ ತಂಡ ನಿರೀಕ್ಷೆಯಂತೆಯೇ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ವಿಭಾಗ ಕೆಕೆಆರ್​ ಬೌಲರ್​ಗಳ ದಾಳಿಗೆ ನಲುಗಿ ಮಕಾಡೆ ಮಲಗಿತು. ಇಡೀ ಪಂದ್ಯವನ್ನು ಏಕಪಕ್ಷೀಯವಾಗಿಸಿದ ಕೆಕೆಆರ್ ತಂಡ ನಿರೀಕ್ಷೆಯಂತೆ ಕಪ್ ಜಯಿಸುವಲ್ಲಿ ಯಶಸ್ವಿಯಾಯಿತು. ಇತ್ತ ಮತ್ತೊಂದು ಕಪ್ ಜಯಿಸುವ ಅವಕಾಶವನ್ನು ಕೈಚೆಲ್ಲಿದ ಹೈದರಾಬಾದ್ ಆಟಗಾರರು ನಿರಾಸೆಯೊಂದಿಗೆ ಮೈದಾನ ತೊರೆದಿದ್ದರು. ತಂಡದ ಒಡತಿ ಕಾವ್ಯಾ ಮಾರನ್ (Kavya Maran) ಕೂಡ ಗ್ಯಾಲರಿಯಲ್ಲಿ ಕುಳಿತು ತಂಡದ ಸೋಲಿಗೆ ಕಣ್ಣೀರು ಸುರಿಸಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊವೊಂದು ಹರಿದಾಡುತ್ತಿದ್ದು, ಕಾವ್ಯಾ ಮಾರನ್ ಅವರ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಂಡದ ಪ್ರದರ್ಶನಕ್ಕೆ ಕಾವ್ಯಾ ಮೆಚ್ಚುಗೆ

ಪಂದ್ಯ ಮುಗಿದ ಬಳಿಕ ಸನ್ ರೈಸರ್ಸ್ ಹೈದರಾಬಾದ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಕಾವ್ಯಾ ಮಾರನ್ ಆಟಗಾರರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ‘ನೀವೆಲ್ಲರೂ ನಮಗೆ ಹೆಮ್ಮೆ ತಂದಿದ್ದೀರಿ. ನೀವೆಲ್ಲರೂ ಈ ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ. ಅಲ್ಲದೆ ಟಿ20 ಕ್ರಿಕೆಟ್ ಅನ್ನು ಹೇಗೆ ಆಡಬೇಕು ಎಂಬುದನ್ನು ಎಲ್ಲರಿಗೂ ತೋರಿಸಿದ್ದೀರಿ. ಎಲ್ಲರೂ ನಮ್ಮ ಬಗ್ಗೆ ಮಾತನಾಡುತ್ತಿರುವುದೆ ಇದಕ್ಕೆ ಉದಾಹರಣೆಯಾಗಿದೆ.

ಇಂದು ನಮ್ಮ ಕೆಟ್ಟ ದಿನವಾಗಿತ್ತು. ನೀವೆಲ್ಲರೂ ಬಾಲ್ ಮತ್ತು ಬ್ಯಾಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೀರಿ. ಆದರೆ ಕಳೆದ ಸೀಸನ್‌ ಅನ್ನು ನಾವು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಮುಕ್ತಾಯಗೊಳಿಸಿದ್ದವು. ಆದರೆ ಈ ಬಾರಿ ನಾವು ಫೈನಲ್ ಆಡಿದ್ದೇವೆ. ನಿಮ್ಮ ಆಟ ನೋಡಿದ ನಂತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದ್ರೂ ಕೆಕೆಆರ್ ಪ್ರಶಸ್ತಿ ಗೆದ್ದಿದೆ. ಆದರೆ ನಾವು ಕ್ರಿಕೆಟ್ ಆಡುವ ರೀತಿ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಆಟಗಾರರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಲ್ಲಿಂದ ತೆರಳಿದ್ದಾರೆ. ಸೋಲಿನಲ್ಲೂ ತಂಡದ ಪ್ರದರ್ಶನವನ್ನು ಹೊಗಳಿದ ಎಸ್​ಆರ್​ಹೆಚ್ ತಂಡದ ಒಡತಿಯ ನಡೆಯನ್ನು ಎಲ್ಲರೂ ಪ್ರಶಂಸಿಸುತ್ತಿದ್ದಾರೆ.

ಸೋತ ನಂತರ ಕಣ್ಣೀರಿಟ್ಟಿದ ಕಾವ್ಯಾ

ಕಾವ್ಯಾ ಮಾರನ್ ತನ್ನ ಆಟಗಾರರನ್ನು ಪ್ರೋತ್ಸಾಹಿಸಿದರೂ ಸಹ ತಂಡದ ಸೋಲಿನ ನಂತರ ಅವರಿಗೆ ತನ್ನನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಸ್ಟೇಡಿಯಂನಲ್ಲಿಯೇ ಭಾವುಕರಾದ ಕಾವ್ಯ ಕಣ್ಣೀರು ಸುರಿಸಿದ್ದರು. ಅಲ್ಲದೆ ತಮ್ಮ ದುಃಖವನ್ನು ಮರೆಮಾಚಲು ಕ್ಯಾಮರಾದ ಕಣ್ತಪಿಸಲು ಪ್ರಯತ್ನಿಸಿದರು. ಈ ಬಾರಿ ಚಾಂಪಿಯನ್ ಆಗಲು ಇದ್ದ ಉತ್ತಮ ಅವಕಾಶವನ್ನು ಕೈಚೆಲ್ಲಿದ ನಿರಾಸೆ ಕಾವ್ಯಾ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಆದಾಗ್ಯೂ, ಮುಂದಿನ ಬಾರಿ ಕಾವ್ಯಾ ಮಾರನ್‌ಗೆ ಇನ್ನಷ್ಟು ಕಠಿಣ ಸವಾಲು ಎದುರಾಗಲಿದೆ. ಏಕೆಂದರೆ ಮುಂದಿನ ಸೀಸನ್‌ಗೆ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ತಂಡದಲ್ಲಿ ಅವರು ಯಾರನ್ನು ಉಳಿಸಿಕೊಳ್ಳುತ್ತಾರೆ ಮತ್ತು ಯಾರನ್ನು ತಂಡದಿಂದ ಹೊರಹಾಕುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ