IPL 2024: 6,6,6.. 4 ಎಸೆತಗಳಲ್ಲಿ 20 ರನ್! 42 ರ ಯುವಕ ಧೋನಿ; ವಿಡಿಯೋ ನೋಡಿ

IPL 2024: ಒಂದು ಹಂತದಲ್ಲಿ ಸಿಎಸ್​​ಕೆ 200 ರ ಗಡಿ ದಾಟುವುದು ಅನುಮಾನ ಎಂದು ತೋರುತ್ತಿತ್ತು. ಆದರೆ ಕೊನೆಯಲ್ಲಿ ಶಿವಂ ದುಬೆ ಹಾಗೂ ನಾಯಕ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡವನ್ನು 206 ರನ್​ಗಳಿಗೆ ಕೊಂಡೊಯ್ದರು.

IPL 2024: 6,6,6.. 4 ಎಸೆತಗಳಲ್ಲಿ 20 ರನ್! 42 ರ ಯುವಕ ಧೋನಿ; ವಿಡಿಯೋ ನೋಡಿ
ಎಂ ಎಸ್ ಧೋನಿ

Updated on: Apr 14, 2024 | 11:03 PM

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2024 ರ (IPL 2024) 29ನೇ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ (Mumbai Indians vs Chennai Super Kings) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ತಂಡ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 206 ರನ್ ಕಲೆಹಾಕಿತು. ಒಂದು ಹಂತದಲ್ಲಿ ಸಿಎಸ್​​ಕೆ 200 ರ ಗಡಿ ದಾಟುವುದು ಅನುಮಾನ ಎಂದು ತೋರುತ್ತಿತ್ತು. ಆದರೆ ಕೊನೆಯಲ್ಲಿ ಶಿವಂ ದುಬೆ ಹಾಗೂ ಮಾಜಿ ನಾಯಕ ಧೋನಿ (MS Dhoni) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡವನ್ನು 206 ರನ್​ಗಳಿಗೆ ಕೊಂಡೊಯ್ದರು. ಅದರಲ್ಲೂ ಕೊನೆಯ ಓವರ್​ನಲ್ಲಿ ಬ್ಯಾಟಿಂಗ್​ಗೆ ಬಂದ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಇಡೀ ಮೈದಾನ ಹುಚ್ಚೆದ್ದು ಕುಣಿಯುಂತೆ ಮಾಡಿದರು.

ಪಂದ್ಯದ ಹೈಲೇಟ್ಸ್ 20ನೇ ಓವರ್

ಸಿಎಸ್​ಕೆ ಇನ್ನಿಂಗ್ಸ್​ನ 20ನೇ ಓವರ್​ ಬೌಲ್ ಮಾಡುವ ಜವಬ್ದಾರಿಯನ್ನು ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಹೊತ್ತುಕೊಂಡರು. ಈ ಓವರ್​ನ 2ನೇ ಎಸೆತದಲ್ಲಿ ಪಾಂಡ್ಯ, ಡೇರಿಲ್ ಮಿಚೆಲ್ ವಿಕೆಟ್ ಉರುಳಿಸಿ ಮುಂಬೈ ಮೇಲುಗೈ ಸಾಧಿಸುವಂತೆ ಮಾಡಿದರು. ಆದರೆ ಮುಂದಿನ 4 ಎಸೆತಗಳಲ್ಲಿ ಪಾಂಡ್ಯ ಮಿಚೆಲ್ ವಿಕೆಟ್ ಉರುಳಿಸದಿದ್ದರೆ ಚೆನ್ನಾಗಿತ್ತು ಎಂಬ ಭಾವನೆಯನ್ನು ಧೋನಿ ಮುಂಬೈ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿಸಿದರು.

IPL 2024: ಸಿಎಸ್​ಕೆ ಪರ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಎಂಎಸ್ ಧೋನಿ..!

ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಧೋನಿ

ವಾಸ್ತವವಾಗಿ 20ನೇ ಓವರ್​ನ ಕೊನೆಯ 4 ಎಸೆತಗಳು ಬಾಕಿ ಇರುವಾಗ ಬ್ಯಾಟಿಂಗ್​ಗೆ ಬಂದ ಧೋನಿ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ 2 ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. ಒಟ್ಟಾರೆಯಾಗಿ ಧೋನಿ ಕೇವಲ 4 ಎಸೆತಗಳಲ್ಲಿ 20 ರನ್ ಕಲೆಹಾಕಿ ಚೆನ್ನೈ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು. ಇನ್ನೊಂದೆಡೆ ತನ್ನ ಸ್ಫೋಟಕ ಇನ್ನಿಂಗ್ಸ್ ಮೂಲಕ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಈ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದ ಧೋನಿ

ಐಪಿಎಲ್​ನ ಕೊನೆಯ ಸೀಸನ್ ಆಡುತ್ತಿರುವ ಧೋನಿಗೆ ಈ ಪಂದ್ಯ ಬಹಳ ವಿಶೇಷವಾಗಿತ್ತು. ಏಕೆಂದರೆ 2008 ರಿಂದಲೂ ಚೆನ್ನೈ ಪರ ಆಡುತ್ತಿರುವ ಧೋನಿಗೆ ಸಿಎಸ್​ಕೆ ಪರ ಈ ಪಂದ್ಯ 250ನೇ ಪಂದ್ಯವಾಗಿತ್ತು. ಈ ದಾಖಲೆಯ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ತನ್ನಲ್ಲಿರುವ ಆಟದ ಹಸಿವನ್ನು ಮತ್ತೊಮ್ಮೆ ವ್ಯಕ್ತಪಡಿಸಿದರು. ಅಲ್ಲದೆ ಈ 20 ರನ್​ಗಳ ಮೂಲಕ ಸಿಎಸ್​ಕೆ ಪರ 5000 ರನ್ ಪೂರೈಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ಧೋನಿ ನಿರ್ಮಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 pm, Sun, 14 April 24