ಐಪಿಎಲ್ 2024 ರ 28 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಇತ್ತ ಲಕ್ನೋ ಸತತ ಎರಡನೇ ಸೋಲು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಕೆಕೆಆರ್ ಗೆಲುವಿಗೆ 162 ರನ್ಗಳ ಗುರಿ ನೀಡಿತು.
ಈ ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಿಂದಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದಲ್ಲದೆ, ಲಕ್ನೋ ತಂಡವನ್ನು ಆರಂಭದಲ್ಲೇ ಪಂದ್ಯದಿಂದ ಹೊರಹಾಕಿತು. ಇದರಲ್ಲಿ ಲಕ್ನೋ ಬೌಲರ್ ಶಮರ್ ಜೋಸೆಫ್ ಎಸೆದ ಮೊದಲ ಓವರ್ ಕೂಡ ಲಕ್ನೋ ತಂಡಕ್ಕೆ ಭಾರಿ ದುಬಾರಿಯಾಯಿತು.
ವಾಸ್ತವವಾಗಿ ಈ ಪಂದ್ಯದೊಂದಿಗೆ ವೆಸ್ಟ್ ಇಂಡೀಸ್ ವೇಗಿ ಜೋಸೆಫ್ ಲಕ್ನೋ ಪರ ಐಪಿಎಲ್ ಪಾದಾರ್ಪಣೆ ಮಾಡಿದರು. ಈ ಯುವ ವೇಗಿಗೆ ಲಕ್ನೋ ನಾಯಕ ಕೆಎಲ್ ರಾಹುಲ್ ಇನ್ನಿಂಗ್ಸ್‌ನ ಮೊದಲ ಓವರ್ ಬೌಲ್ ಮಾಡುವ ಜವಬ್ದಾರಿ ನೀಡಿದರು. ಓವರ್ ಅನ್ನು ಉತ್ತಮವಾಗಿ ಆರಂಭಿಸಿದ ಶಮರ್ ಜೋಸೆಫ್ ಆ ನಂತರ ಹಳಿ ತಪ್ಪಿದರು.
ಮೊದಲ ಓವರ್ನಲ್ಲೇ ಶಮರ್ ಜೋಸೆಫ್ ಬರೋಬ್ಬರಿ ಒಟ್ಟು 22 ರನ್‌ಗಳನ್ನು ಬಿಟ್ಟುಕೊಟ್ಟು, ತಂಡವನ್ನು ಮೊದಲ ಓವರ್‌ನಲ್ಲಿ ಪಂದ್ಯದ ಹೊರಹಾಕಿದರು. ಅಲ್ಲದೆ ಜೋಸೆಫ್ ಐಪಿಎಲ್ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟು ಯಾರೂ ಮಾಡದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.
ಶಮರ್ ಜೋಸೆಫ್ ತಮ್ಮ ಓವರ್ನ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಎರಡನೇ ಎಸೆತದ ಲೆಗ್ ಬೈಸ್ ಆಯಿತು. ಮೂರನೇ ಎಸೆತದಲ್ಲಿ ಬೌಂಡರಿ ಬಂದರೆ, ನಾಲ್ಕನೇ ಎಸೆತದಲ್ಲಿ 2 ರನ್ ಬಂತು. ಐದನೇ ಎಸೆತದಲ್ಲೂ ಬೈಸ್ ಮೂಲಕ 1 ರನ್ ಬಂತು.
ಆದರೆ ಆರನೇ ಎಸೆತವೇ ಜೋಸೆಫ್ಗೆ ದುಸ್ವಫ್ನವಾಗಿ ಕಾಡಿತು. ಕೊನೆಯ ಎಸೆತದಲ್ಲಿ ಜೋಸೆಫ್ ಒಟ್ಟಾರೆ 14 ರನ್ ನೀಡಿದರು. ಕೊನೆಯ ಎಸೆತದಲ್ಲಿ ಜೋಸೆಫ್ 2 ವೈಡ್, 2 ನೋ ಬಾಲ್, ವೈಡ್ ಫೋರ್, ಒಂದು ಸಿಕ್ಸರ್ ಕೂಡ ಸೇರಿತ್ತು.
ವಾಸ್ತವವಾಗಿ ಲಕ್ನೋ ಪರ ಐಪಿಎಲ್ಗೆ ಪದಾರ್ಪಣೆ ಮಾಡಿರುವ ಜೋಸೆಫ್, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಗಬ್ಬಾ ಟೆಸ್ಟ್ ಮೂಲಕ ಬೆಳಕಿಗೆ ಬಂದವರು. ಈ ಪಂದ್ಯದಲ್ಲಿ ವಿಂಡೀಸ್ ಗೆಲುವಿನಲ್ಲಿ ಜೋಸೆಫ್ ಪಾತ್ರ ಅಪಾರವಾಗಿತ್ತು.
ಈ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಜೋಸೆಫ್ ಕೇವಲ 12 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಮೂಲಕ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ವಿರುದ್ಧದ ಗೆಲುವು 27 ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಅವರ ಮೊದಲ ಜಯ ಎಂಬ ಇತಿಹಾಸ ಕೂಡ ನಿರ್ಮಿಸಿತ್ತು.
Published On - 8:33 pm, Sun, 14 April 24