IPL 2024: ಲೀಗ್​ ಹಂತದಲ್ಲೇ ಮುಗ್ಗರಿಸಿದ ಮುಂಬೈ, ಹಿರಿಯರ ಅಸಮಾಧಾನ! ಪಾಂಡ್ಯ ನಾಯಕತ್ವಕ್ಕೆ ಕುತ್ತು?

|

Updated on: May 09, 2024 | 4:01 PM

IPL 2024: ಮುಂಬೈ ತಂಡ ಈ ಆವೃತ್ತಿಯಲ್ಲೂ ಲೀಗ್​ ಹಂತದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ಇದು ಫ್ರಾಂಚೈಸಿ ಹಾಗೂ ಅಭಿಮಾನಿಗಳನ್ನು ಕೋಪುಗೊಳ್ಳುವಂತೆ ಮಾಡಿದೆ. ಇದರ ಜೊತೆಗೆ ನಾಯಕನ ಕೆಲವು ನಿರ್ಧಾರಗಳು ತಂಡದಲ್ಲಿ ಒಡಕು ಮೂಡುವಂತೆ ಮಾಡಿದೆ ಎಂದು ವರದಿಯಿದೆ.

IPL 2024: ಲೀಗ್​ ಹಂತದಲ್ಲೇ ಮುಗ್ಗರಿಸಿದ ಮುಂಬೈ, ಹಿರಿಯರ ಅಸಮಾಧಾನ! ಪಾಂಡ್ಯ ನಾಯಕತ್ವಕ್ಕೆ ಕುತ್ತು?
ಮುಂಬೈ ಇಂಡಿಯನ್ಸ್
Follow us on

ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದರು ಕಳೆದೆರಡು ಆವೃತ್ತಿಗಳಿಂದ ಮುಂಬೈ ತಂಡದ (Mumbai Indians) ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ಅದಾಗ್ಯೂ ಈ ಬಾರಿಯ ಐಪಿಎಲ್ (IPL 2024) ಆರಂಭಕ್ಕೂ ಮುನ್ನ ಮುಂಬೈ ಫ್ರಾಂಚೈಸಿ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಲೀಗ್​ಗೆ ಎಂಟ್ರಿಕೊಟ್ಟಿತ್ತು. ಇದರಲ್ಲಿ ಪ್ರಮುಖವಾಗಿ ನಾಯಕನನ್ನು ಬದಲಿಸಿದ್ದ ಫ್ರಾಂಚೈಸಿ ರೋಹಿತ್ ಬದಲು ಹಾರ್ದಿಕ್ ಪಾಂಡ್ಯಗೆ (Hardik Pandya) ನಾಯಕತ್ವದ ಪಟ್ಟಕಟ್ಟಿತ್ತು. ಕಳೆದೆರಡು ಆವೃತ್ತಿಗಳಲ್ಲಿ ಗುಜರಾತ್ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಪಾಂಡ್ಯ, ಮುಂಬೈ ತಂಡದಲ್ಲೂ ಸಂಚಲನ ಮೂಡಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕ ಬದಲಾದರೂ ತಂಡದ ಪ್ರದರ್ಶನ ಮಾತ್ರ ಬದಲಾಗಲಿಲ್ಲ. ಹೀಗಾಗಿ ಮುಂಬೈ ತಂಡ ಈ ಆವೃತ್ತಿಯಲ್ಲೂ ಲೀಗ್​ ಹಂತದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ಇದು ಫ್ರಾಂಚೈಸಿ ಹಾಗೂ ಅಭಿಮಾನಿಗಳನ್ನು ಕೋಪುಗೊಳ್ಳುವಂತೆ ಮಾಡಿದೆ. ಇದರ ಜೊತೆಗೆ ನಾಯಕನ ಕೆಲವು ನಿರ್ಧಾರಗಳು ತಂಡದಲ್ಲಿ ಒಡಕು ಮೂಡುವಂತೆ ಮಾಡಿದೆ ಎಂದು ವರದಿಯಿದೆ. ಹೀಗಾಗಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯರ ತಲೆದಂಡ ಆಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಲೀಗ್ ಹಂತದಲ್ಲೇ ಔಟ್

ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ 17 ಐಪಿಎಲ್ ಸೀಸನ್‌ಗಳನ್ನು ಆಡಿದೆ. ಈ ಪೈಕಿ ತಂಡ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇಂತಹ ಬಲಿಷ್ಠ ತಂಡ ಇದೀಗ ಈ ಆವೃತ್ತಿಯಲ್ಲಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿದೆ. ವಾಸ್ತವವಾಗಿ ಈ ಸೀಸನ್​ನಲ್ಲಿ 12 ಪಂದ್ಯಗಳನ್ನಾಡಿರುವ ಮುಂಬೈ ಕೇವಲ 4 ಪಂದ್ಯಗಳನ್ನು 8 ಅಂಕ ಸಂಪಾದಿಸಿತ್ತು. ನಿನ್ನೆಯ ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಲಕ್ನೋ 10 ವಿಕೆಟ್​ಗಳ ಹೀನಾಯ ಸೋಲು ಕಂಡ ಬಳಿಕ ಮುಂಬೈ ಅಧಿಕೃತವಾಗಿ ಲೀಗ್​ನಿಂದ ಹೊರಬಿದ್ದಿತ್ತು. ಹೀಗಾಗಿ ತಂಡದಲ್ಲಿ ಬಲಿಷ್ಠ ಆಟಗಾರರ ದಂಡೇ ಇದ್ದರು ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಇದು ಫ್ರಾಂಚೈಸಿಯ ಅಸಮಾಧಾನಕ್ಕೆ ಕಾರಣವಾಗಿದೆ.

IPL 2024: ಐಪಿಎಲ್​ನಲ್ಲಿ ಮಿಂಚಿದ ಈ ಐವರಿಗೆ ಶೀಘ್ರದಲ್ಲೇ ಟೀಂ ಇಂಡಿಯಾದಲ್ಲಿ ಅವಕಾಶ

ಹಿರಿಯ ಆಟಗಾರರ ಪ್ರತ್ಯೇಕ ಸಭೆ

ಹೀಗಾಗಿ ತಂಡದ ಹಿರಿಯ ಆಟಗಾರರು ತಂಡದ ಕೋಚಿಂಗ್ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇಂಗ್ಲಿಷ್ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿರುವ ಪ್ರಕಾರ ಹಿರಿಯ ಆಟಗಾರರು, ತಂಡದ ಈ ಸ್ಥಿತಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವ ಮತ್ತು ಕಾರ್ಯ ವೈಖರಿಯೇ ಕಾರಣ ಎಂದು ಹೇಳಿದ್ದಾರೆ ಎಂದು ವರದಿ ಮಾಡಿದೆ.

ಪಾಂಡ್ಯ ವಿರುದ್ಧ ಅಸಮಾಧಾನ

ಅಲ್ಲದೆ ಪಂದ್ಯಾವಳಿಯ ಆರಂಭಿಕ ಪಂದ್ಯಗಳಿಂದ, ಹಾರ್ದಿಕ್ ಪಾಂಡ್ಯ ಅವರ ಅನೇಕ ನಿರ್ಧಾರಗಳು ನಿರಂತರವಾಗಿ ಪ್ರಶ್ನಾರ್ಹವಾಗಿದ್ದವು. ಕೆಲವೊಮ್ಮೆ ಜಸ್ಪ್ರೀತ್ ಬುಮ್ರಾ ಅವರನ್ನು ಬೌಲಿಂಗ್‌ಗೆ ತಡವಾಗಿ ಕರೆತರುವುದು, ಕೆಲವೊಮ್ಮೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಸರಿಯಾದ ಬ್ಯಾಟ್ಸ್‌ಮನ್‌ಗಳನ್ನು ಸರಿಯಾದ ಸಮಯಕ್ಕೆ ಕಳುಹಿಸದಿರುವುದು ಹೆಚ್ಚಾಗಿ ಚರ್ಚೆಗೆ ಒಳಗಾಗಿತ್ತು. ಅಲ್ಲದೆ, ಪಂದ್ಯದ ಸೋಲಿನ ನಂತರ ಹಾರ್ದಿಕ್, ಅವರ ಹೆಸರನ್ನು ತೆಗೆದುಕೊಳ್ಳದೆ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರನ್ನು ಹೊಣೆಗಾರರನ್ನಾಗಿ ಮಾಡಿದ್ದು ಹಿರಿಯ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಹಾರ್ದಿಕ್‌ ತಲೆದಂಡ?

ಇದರಿಂದ ಹಾರ್ದಿಕ್ ನಾಯಕತ್ವಕ್ಕೂ ಅಪಾಯ ಎದುರಾಗಿದೆಯಂತೆ. ಈ ಸೀಸನ್​ ಅಂತ್ಯದ ನಂತರ ಪ್ರತಿ ವರ್ಷದಂತೆ ಈ ಬಾರಿಯೂ ತಂಡದ ಪ್ರದರ್ಶನದ ಬಗ್ಗೆ ಚರ್ಚೆ ನಡೆಯಲಿದ್ದು, ಅಗತ್ಯ ಬಿದ್ದರೆ ತಂಡದ ಭವಿಷ್ಯದ ಬಗ್ಗೆ ಫ್ರಾಂಚೈಸಿ ಪ್ರಮುಖ ನಿರ್ಧಾರ ಕೈಗೊಳ್ಳಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಈಗ ದೊಡ್ಡ ನಿರ್ಧಾರ ಏನಾಗಲಿದೆ ಎಂಬುದು ಕೆಲವೇ ತಿಂಗಳಲ್ಲಿ ಸ್ಪಷ್ಟವಾಗಲಿದೆ. ಅದೇನೇ ಇರಲಿ, ಈ ಸೀಸನ್ ನಂತರ ಮೆಗಾ ಹರಾಜು ನಡೆಯಬೇಕಿದ್ದರೆ, ಹಾರ್ದಿಕ್ ಬದಲಿಗೆ ರೋಹಿತ್ ಅವರನ್ನು ಮತ್ತೆ ನಾಯಕನನ್ನಾಗಿ ಮಾಡಲಿದೆಯೇ ಅಥವಾ ಸೂರ್ಯ, ಬುಮ್ರಾ ಅವರಂತಹ ಅನುಭವಿಗಳ ಪೈಕಿ ಯಾರನ್ನಾದರೂ ಆಯ್ಕೆ ಮಾಡುತ್ತದೆಯೇ ಅಥವಾ ಹಾರ್ದಿಕ್‌ಗೆ ಮತ್ತೊಂದು ಅವಕಾಶ ನೀಡಬಹುದೇ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Thu, 9 May 24