IPL 2024: ‘ಅಮ್ಮ ಈಗ ಏನ್ ಹೇಳ್ತಿಯಾ’?; ತಾಯಿಯೊಂದಿಗೆ ಯಶ್ ದಯಾಳ್ ಭಾವುಕ ಮಾತು

|

Updated on: May 19, 2024 | 10:14 PM

IPL 2024: ಆರ್​ಸಿಬಿಯನ್ನು ಪ್ಲೇಆಫ್‌ನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಇದೇ ಯಶ್ ದಯಾಳ್ ಒಂದು ವರ್ಷದ ಹಿಂದೆ ಒಂದು ಓವರ್​ನಲ್ಲಿ ಸತತ 5 ಸಿಕ್ಸರ್ ಹೊಡೆಸಿಕೊಂಡು ತಮ್ಮ ವೃತ್ತಿಜೀವನಕ್ಕೆ ಅಪಾಯ ತಂದುಕೊಂಡಿದ್ದರು. ಆ 5 ಸಿಕ್ಸರ್​​ಗಳ ಬಳಿಕ ಯಶ್ ದಯಾಳ್ ಹಾಗೂ ಅವರ ಕುಟುಂಬ ಅನುಭವಿಸಿದ್ದು ಅಷ್ಟಿಷ್ಟಲ್ಲ.

IPL 2024: ‘ಅಮ್ಮ ಈಗ ಏನ್ ಹೇಳ್ತಿಯಾ’?; ತಾಯಿಯೊಂದಿಗೆ ಯಶ್ ದಯಾಳ್ ಭಾವುಕ ಮಾತು
ಯಶ್ ದಯಾಳ್
Follow us on

ಯಶ್ ದಯಾಳ್ (Yash Dayal).. ಸದ್ಯ ಐಪಿಎಲ್ (IPL) ಲೋಕದಲ್ಲಿ ಸಖತ್ ಚರ್ಚೆಯಲ್ಲಿರುವ ಹೆಸರಿದು. ಕಳೆದ ಐಪಿಎಲ್​ನಲ್ಲೂ ಇದೇ ಹೆಸರು ವಿಶ್ವ ಕ್ರಿಕೆಟ್​ನಲ್ಲಿ ಸದ್ದು ಮಾಡಿತ್ತು. ಆದರೆ ಕಳೆದ ಬಾರಿ ಯಶ್ ದಯಾಳ್ ಚರ್ಚೆಗೊಳಗಾಗಿದ್ದು, ಅವರ ವೃತ್ತಿಜೀವನಕ್ಕೆ ಅಂತ್ಯಹಾಡುವಂತಿತ್ತು. ಆದರೆ ಈ ಬಾರಿ ಯಶ್ ದಯಾಳ್ ಚರ್ಚೆಗೆ ಬಂದಿರುವುದು ಅವರ ವೃತ್ತಿಬದುಕಿಗೆ ಹೊಸ ಆಯಾಮ ನೀಡಲಿದೆ. ಸಿಎಸ್​ಕೆ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್​ಸಿಬಿಯ (RCB) ಗೆಲುವಿನ ಹೀರೋ ಎನಿಸಿಕೊಂಡಿರುವ ಯಶ್ ದಯಾಳ್, ಧೋನಿ ಹಾಗೂ ರವೀಂದ್ರ ಜಡೇಜಾರಂತಹ ಸ್ಫೋಟಕ ಬ್ಯಾಟರ್​​ಗಳು ಕೊನೆಯ ಓವರ್​ನಲ್ಲಿ 17 ರನ್​ಗಳನ್ನು ಕಲೆಹಾಕದಂತೆ ತಡೆದರು. ಈ ಮೂಲಕ ಆರ್​ಸಿಬಿಯನ್ನು ಪ್ಲೇಆಫ್‌ನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದೇ ಯಶ್ ದಯಾಳ್ ಒಂದು ವರ್ಷದ ಹಿಂದೆ ಒಂದು ಓವರ್​ನಲ್ಲಿ ಸತತ 5 ಸಿಕ್ಸರ್ ಹೊಡೆಸಿಕೊಂಡು ತಮ್ಮ ವೃತ್ತಿಜೀವನಕ್ಕೆ ಅಪಾಯ ತಂದುಕೊಂಡಿದ್ದರು. ಆ 5 ಸಿಕ್ಸರ್​​ಗಳ ಬಳಿಕ ಯಶ್ ದಯಾಳ್ ಹಾಗೂ ಅವರ ಕುಟುಂಬ ಅನುಭವಿಸಿದ್ದು ಅಷ್ಟಿಷ್ಟಲ್ಲ.

ಗೆಲುವಿನ ಹೀರೋ ದಯಾಳ್

ಆರ್​​ಸಿಬಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್​ನಲ್ಲಿ ಸಿಎಸ್​ಕೆ ಗೆಲುವಿಗೆ 17 ರನ್​ಗಳ ಅಗತ್ಯವಿತ್ತು. ಈ ವೇಳೆ ಎದುರಿಗಿದಿದ್ದು ಗೇಮ್ ಫಿನಿಶರ್​ಗೆ ಇನ್ನೊಂದು ಹೆಸರೆನಿಸಿಕೊಂಡಿರುವ ಎಂಎಸ್ ಧೋನಿ. ನಿರೀಕ್ಷೆಯಂತೆ ಧೋನಿ ಮೊದಲ ಎಸೆತವನ್ನು ಸಿಕ್ಸರ್​ಗಟ್ಟುವಲ್ಲಿ ಯಶಸ್ವಿಯಾದರು. ಈ ವೇಳೆ ಮತ್ತೊಮ್ಮೆ ಕಳೆದ ವರ್ಷದಂತೆ ಈ ವರ್ಷವೂ ತಂಡದ ಸೋಲಿಗೆ ನಾನು ಕಾರಣನಾಗುವೆನೆಂಬ ಆತಂಕ ದಯಾಳ್ ಮನದಲ್ಲಿ ಮೂಡಿದ್ದು ಉಂಟು. ಆದರೆ ಆ ಬಳಿಕ ಎಚ್ಚೆತ್ತುಕೊಂಡ ದಯಾಳ್ ನಂತರದ ಎಸೆತದಲ್ಲಿ ಧೋನಿ ವಿಕೆಟ್ ಕಬಳಿಸಿದರು. ಉಳಿದ 4 ಎಸೆತಗಳಲ್ಲಿ ಕೇವಲ 1 ರನ್ ನೀಡಿ ಆರ್​ಸಿಬಿಯ ಗೆಲುವಿನ ಹೀರೋ ಎನಿಸಿಕೊಂಡರು.

ತಾಯಿಯೊಂದಿಗೆ ವಿಡಿಯೋ ಕಾಲ್

ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ ಯಶ್ ದಯಾಳ್, ಪಂದ್ಯದ ನಂತರ ತಮ್ಮ ಸಂತಸದ ಕ್ಷಣಗಳನ್ನು ವಿಡಿಯೋ ಕಾಲ್ ಮೂಲಕ ತಮ್ಮ ತಾಯಿಯೊಂದಿಗೆ ಹಂಚಿಕೊಂಡಿದ್ದಾರೆ. ಈ ವೇಳೆ ದಯಾಳ್, ತಮ್ಮ ತಾಯಿಗೆ ‘ಅಮ್ಮ ಇವತ್ತಿನ ನನ್ನ ಪ್ರದರ್ಶನ ಹೇಗಿತ್ತು?’ ಎಂದು ತಮ್ಮ ತಾಯಿಯ ಬಳಿ ಕೇಳಿದ್ದಾರೆ. ವಾಸ್ತವವಾಗಿ ದಯಾಳ್ ಈ ರೀತಿಯಾಗಿ ಅವರ ತಾಯಿಯನ್ನು ಕೇಳಲು ಬಲವಾದ ಕಾರಣವೂ ಇದೆ. ಇಂದಿಗೆ ಸರಿಯಾಗಿ 405 ದಿನಗಳ ಹಿಂದೆ ಗುಜರಾತ್ ಟೈಟಾನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಗೆಲುವಿಗೆ ಕೊನೆಯ ಓವರ್​ನಲ್ಲಿ 29 ರನ್​​ಗಳ ಅಗತ್ಯವಿತ್ತು.

5 ಎಸೆತಗಳಲ್ಲಿ 5 ಸಿಕ್ಸರ್

ಹೀಗಾಗಿ ಎಲ್ಲರೂ ಈ ಪಂದ್ಯವನ್ನು ಗುಜರಾತ್ ಗೆಲ್ಲುತ್ತದೆ ಎಂದು ಭಾವಿಸಿದ್ದರು. ಆದರೆ ಅಲ್ಲಿ ನಡೆದಿದ್ದೆ ಬೇರೆ. ಕೆಕೆಆರ್​ನ ಯುವ ಬ್ಯಾಟರ್ ರಿಂಕು ಸಿಂಗ್, ಯಶ್ ದಯಾಳ್ ಬೌಲ್ ಮಾಡಿದ ಕೊನೆಯ ಓವರ್​ನ 5 ಎಸೆತಗಳಲ್ಲಿ ಸತತ 5 ಸಿಕ್ಸರ್ಗಳನ್ನು ಸಿಡಿಸಿ ತಂಡಕ್ಕೆ ಗೆಲುವ ತಂದುಕೊಟ್ಟಿದ್ದರು. ಇತ್ತ ಗೆಲ್ಲುವ ಪಂದ್ಯದ ಸೋಲಿಗೆ ಕಾರಣರಾಗಿದ್ದ ದಯಾಳ್ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಅಷ್ಟು ಮಾತ್ರವಲ್ಲ ಈ ಪಂದ್ಯದ ನಂತರ ಗುಜರಾತ್ ತಂಡದಿಂದ ಹೊರಬಿದ್ದಿದ್ದ ದಯಾಳ್, ಒಂದೇ ಒಂದು ಪಂದ್ಯವನ್ನು ಆಡಲಿಲ್ಲ.

ಅನಾರೋಗ್ಯಕ್ಕೆ ತುತ್ತಾಗಿದ್ದ ದಯಾಳ್ ತಾಯಿ

ಆ ಐದು ಸಿಕ್ಸರ್​ಗಳು ಯಶ್ ದಯಾಳ್ ವೃತ್ತಿಬದುಕನ್ನು ಎಷ್ಟರಮಟ್ಟಿಗೆ ದುಸ್ಥಿತಿಗೆ ತಳ್ಳಿತ್ತೆಂದರೆ, ಈ ಆಘಾತದಿಂದ ಹೊರಬರಲಾಗದೆ ದಯಾಳ್ ಖಿನ್ನತೆಗೆ ಒಳಗಾದರು. ಇದೇ ಯೋಚನೆಯಲ್ಲಿ ಇದಕ್ಕಿದಂತೆ ತಮ್ಮ ದೇಹದ ತೂಕವನ್ನು ಕಳೆದುಕೊಂಡರು. ಇತ್ತ ಮಗನ ಈ ಸ್ಥಿತಿಯನ್ನು ಕಂಡು ದಯಾಳ್ ಅವರ ಹೆತ್ತವರು ಕೂಡ ಚಿಂತೆಗೊಳಗಾಗಿದ್ದರು. ಅದರಲ್ಲೂ ಮಗನ ವೃತ್ತಿಜೀವನ ಅಂತ್ಯವಾಗುವ ಆತಂಕದಲ್ಲಿ ದಯಾಳ್ ತಾಯಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಘಟನೆಯಿಂದ ಹೊರಬರಲು ದಯಾಳ್ ಕುಟುಂಬ ಪಟ್ಟ ಪಾಡು ಅಷ್ಟಿಷ್ಟಲ್ಲ.

ಮರುಜನ್ಮ ನೀಡಿದ ಆರ್​ಸಿಬಿ

ವಾಸ್ತವವಾಗಿ ಕಳೆದ ಆವೃತ್ತಿಯಲ್ಲೂ ದಯಾಳ್ ಪ್ರದರ್ಶನ ಅದ್ಭುತವಾಗಿತ್ತು. ಆದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ದಯಾಳ್ 5 ಎಸೆತಗಳಲ್ಲಿ 5 ಸಿಕ್ಸರ್ ಹೊಡೆಸಿಕೊಂಡಿದ್ದು, ಸಾಕಷ್ಟು ಹೈಲೇಟ್ ಆಯಿತು. ಇದಾದ ಬಳಿಕ ದಯಾಳ್​ರನ್ನು ಗುಜರಾತ್ ಫ್ರಾಂಚೈಸಿ ತಂಡದಿಂದ ಹೊರಹಾಕಿತ್ತು. ಆ ಬಳಿಕ ದಯಾಳ್​ ಅವರಲ್ಲಿರುವ ಪ್ರತಿಭೆ ಗಮನಿಸಿದ್ದ ಆರ್​ಸಿಬಿ ಫ್ರಾಂಚೈಸಿ ಮಿನಿ ಹರಾಜಿನಲ್ಲಿ ಅವರನ್ನು ಖರೀದಿಸಿತ್ತು. ಇದೀಗ ಆರ್​ಸಿಬಿ ನಂಬಿಕೆಯನ್ನು ಉಳಿಸಿಕೊಂಡಿರುವ ದಯಾಳ್ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ರೂವಾರಿ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ