RCB vs CSK
IPL 2024: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಶನಿವಾರ (ಮೇ 18) ಬೆಂಗಳೂರಿನಲ್ಲಿ ಮಳೆಯಾಗಲಿದ್ದು, ಹೀಗಾಗಿ ಆರ್ಸಿಬಿ ಮತ್ತು ಸಿಎಸ್ಕೆ ನಡುವಣ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಏಕೆಂದರೆ ಈ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕ. ಸಿಎಸ್ಕೆ ವಿರುದ್ಧ ಗೆದ್ದರೆ ಮಾತ್ರ ಆರ್ಸಿಬಿ ತಂಡಕ್ಕೆ ಪ್ಲೇಆಫ್ ಪ್ರವೇಶಿಸಲು ಅವಕಾಶ ಇರಲಿದೆ. ಒಂದು ವೇಳೆ ಪಂದ್ಯ ರದ್ದಾರೆ ಆರ್ಸಿಬಿ ತಂಡ ಐಪಿಎಲ್ನಿಂದ ಹೊರಬೀಳಲಿದೆ.
ಪಂದ್ಯ ರದ್ದತಿ ನಿರ್ಧರಿಸುವ ನಿಯಮಗಳಾವುವು?
ಆರ್ಸಿಬಿ-ಸಿಎಸ್ಕೆ ನಡುವಣ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದ ತಕ್ಷಣವೇ ಪಂದ್ಯವನ್ನು ರದ್ದು ಮಾಡಲಾಗುವುದಿಲ್ಲ. ಬದಲಾಗಿ ಕೊನೆಯವರೆಗೆ ಪಂದ್ಯವನ್ನು ಆಯೋಜಿಸಲು ವಿವಿಧ ಮಾರ್ಗಗಳನ್ನು ಕಂಡುಕೊಳ್ಳಲಿದೆ. ಆ ನಿಯಮಗಳಾವುವು ಎಂದು ನೋಡುವುದಾದರೆ…
- ಆರ್ಸಿಬಿ ಮತ್ತು ಸಿಎಸ್ಕೆ ನಡುವಣ ಪಂದ್ಯವು ಶುರುವಾಗುವ ಸಮಯ 7:30 PM. ಇದಕ್ಕನುಗುಣವಾಗಿ ಪಂದ್ಯದ ಹೆಚ್ಚುವರಿ ಕಟ್ ಆಫ್ ಸಮಯ 11:50 PM. ಅದುವರೆಗೆ ಪಂದ್ಯ ಆಯೋಜಿಸಲು ಸಾಧ್ಯನಾ ಎಂಬುದನ್ನು ಎದುರು ನೋಡಲಿದ್ದಾರೆ.
- ಇದರ ನಡುವೆ ಪಂದ್ಯ ನಡೆಸಲು ಅವಕಾಶವಿದ್ದರೆ ಹೆಚ್ಚುವರಿ ಸಮಯವನ್ನು ಬಳಸಲಿದ್ದಾರೆ. ಅಂದರೆ ಮಳೆಯ ಕಾರಣ ಪಂದ್ಯದ ಆರಂಭವು ವಿಳಂಬವಾದರೆ ಅಥವಾ ಅಡಚಣೆಯ ಸಂದರ್ಭದಲ್ಲಿ, ಅರವತ್ತು ನಿಮಿಷಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಪೂರ್ಣ 20 ಓವರ್ಗಳನ್ನು ಆಡಿಸಲು ಅವಕಾಶ ಇದೆಯಾ ಎಂದು ನೋಡಲಾಗುತ್ತದೆ.
- ನಿಗದಿತ ಸಮಯದೊಳಗೆ 20 ಓವರ್ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂಬುದು ಕಂಡು ಬಂದರೆ ಓವರ್ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ. ಇಲ್ಲಿ ಟೈಮ್ ಔಟ್ ಸಮಯ ಹಾಗೂ ಇನ್ನಿಂಗ್ಸ್ ಬ್ರೇಕ್ಗಳನ್ನು ಸಹ ತೆಗೆದು ಹಾಕಲಾಗುತ್ತದೆ. ಆ ಮೂಲಕ ಓವರ್ ಕಡಿತದೊಂದಿಗೆ ಪಂದ್ಯ ಆಯೋಜಿಸಲಾಗುತ್ತದೆ.
- ಇನ್ನು ಪಂದ್ಯ ಶುರುವಾದ ಬಳಿಕ ಮಳೆ ಬಂದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.
- ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 5 ಓವರ್ಗಳ ಇನಿಂಗ್ಸ್ ಅನ್ನು ಆಡಿರಲೇಬೇಕು. ಇದಕ್ಕಿಂತ ಕಡಿಮೆ ಓವರ್ಗಳ ಪಂದ್ಯಗಳನ್ನು ಆಯೋಜಿಸಲಾಗುವುದಿಲ್ಲ. ಅದರಂತೆ ಎರಡೂ ತಂಡಗಳು ಕನಿಷ್ಠ 5 ಓವರ್ಗಳನ್ನು ಬೌಲಿಂಗ್ ಮಾಡಿದ್ರೆ ಮಾತ್ರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
- ಒಂದು ವೇಳೆ ಮೊದಲ ಇನಿಂಗ್ಸ್ ಆಡಿದ ತಂಡ 10 ಓವರ್ ಆಡಿದ್ರೆ, 2ನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್ಗಳನ್ನು ಆಡಿರಲೇಬೇಕು. ಅಂದರೆ ಮಾತ್ರ ಇಲ್ಲಿ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಗುತ್ತದೆ. ಹೀಗಾಗಿಯೇ ಆರ್ಸಿಬಿ-ಸಿಎಸ್ಕೆ ತಂಡಗಳ ನಡುವಣ ಪಂದ್ಯದ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್ಗಳ ಪಂದ್ಯವಾದರೂ ನಡೆಯಲೇಬೇಕು.
- ಆರ್ಸಿಬಿ-ಸಿಎಸ್ಕೆ ನಡುವಣ ಪಂದ್ಯದ 5 ಓವರ್ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಮ್ಯಾಚ್ ಅನ್ನು ರದ್ದುಗೊಳಿಸುವ ಬಗ್ಗೆ ಮ್ಯಾಚ್ ರೆಫರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
- ಕನಿಷ್ಠ 5 ಓವರ್ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಮಾತ್ರ ಮ್ಯಾಚ್ನ್ನು ರದ್ದು ಪಡಿಸಲಾಗುತ್ತದೆ. ಇದಾದ ಬಳಿಕ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆ.
ಮಳೆ ಬಂದರೂ ಪಂದ್ಯ ನಡೆಯುವ ಸಾಧ್ಯತೆ ಹೆಚ್ಚು:
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿದ್ದು, ಇದು ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಕನಿಷ್ಠ 5 ಓವರ್ಗಳ ಪಂದ್ಯವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: IPL 2024: RCB ಗೆಲ್ಲಲ್ಲ, ಪ್ಲೇಆಫ್ ಪ್ರವೇಶಿಸಲ್ಲ ಎಂದ ಐವರು ಮಾಜಿ ಕ್ರಿಕೆಟಿಗರು
ಪಂದ್ಯ ರದ್ದಾದರೆ ಸಿಎಸ್ಕೆ ಪ್ಲೇಆಫ್ಗೆ:
ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಸಿಎಸ್ಕೆ ತಂಡವು ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಏಕೆಂದರೆ 14 ಅಂಕಗಳನ್ನು ಹೊಂದಿರುವ ಸಿಎಸ್ಕೆ ತಂಡವು ಪಂದ್ಯ ರದ್ದತಿಯಿಂದ ಒಂದು ಅಂಕ ಪಡೆಯಲಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಟ್ಟು ಅಂಕ 15 ಕ್ಕೇರಲಿದೆ. ಅತ್ತ ಆರ್ಸಿಬಿ ತಂಡವು 13 ಅಂಕಗಳೊಂದಿಗೆ ಐಪಿಎಲ್ನಿಂದ ಹೊರಬೀಳಲಿದೆ. ಹೀಗಾಗಿಆರ್ಸಿಬಿ-ಸಿಎಸ್ಕೆ ನಡುವಣ ಪಂದ್ಯ ರದ್ದಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ಅಂಕಗಳೊಂದಿಗೆ ಪ್ಲೇಆಫ್ಗೆ ಪ್ರವೇಶಿಸಲಿದೆ.