
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ನ (IPL 2024) 8ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು (Sunrisers Hyderabad beat Mumbai Indians) 31 ರನ್ಗಳಿಂದ ಮಣಿಸುವ ಮೂಲಕ ಲೀಗ್ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಇತ್ತ ಹೈದರಾಬಾದ್ ವಿರುದ್ಧ ಗೆಲುವಿಗಾಗಿ ಹೋರಾಡಿ ವಿರೋಚಿತ ಸೋಲು ಕಂಡ ಮುಂಬೈ ಇಂಡಿಯನ್ಸ್ ಲೀಗ್ನಲ್ಲಿ ಸತತ ಎರಡನೇ ಸೋಲು ದಾಖಲಿಸಿದೆ. ಮೊದಲಿಗೆ ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಇತ್ತ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 5 ವಿಕೆಟ್ ಕಳೆದುಕೊಂಡು 246 ರನ್ ಗಳಿಸಿ ಸೋಲನುಭವಿಸಿತು.
ಹೈದರಾಬಾದ್ ನೀಡಿದ 277 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈಗೆ ಬಿರುಸಿನ ಆರಂಭ ಸಿಕ್ಕಿತು. ರೋಹಿತ್ ಹಾಗೂ ಕಿಶನ್ ಬೌಂಡರಿಗಳ ಮಳೆಗರೆದು ತಂಡಕ್ಕೆ ನಿರೀಕ್ಷಿತ ಆರಂಭ ಒದಗಿಸಿದರು. ಈ ಇಬ್ಬರು ಮೊದಲ ವಿಕೆಟ್ಗೆ ಕೇವಲ 3.2 ಓವರ್ಗಳಲ್ಲಿ 56 ರನ್‌ಗಳ ಜೊತೆಯಾಟ ನೀಡಿದರು. ಆದರೆ ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಇಶಾನ್ ಮುಂದಿನ ಎಸೆತದಲ್ಲಿ ಔಟಾದರು. ಕಿಶನ್ ತಮ್ಮ ಇನ್ನಿಂಗ್ಸ್ನಲ್ಲಿ 13 ಎಸೆತಗಳನ್ನು ಎದುರಿಸಿ 4 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ 34 ರನ್ ಗಳಿಸಿದರು. ಮುಂದಿನ ಓವರ್‌ನಲ್ಲಿ ರೋಹಿತ್ ಕೂಡ 12 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 26 ರನ್ ಗಳಿಸಿ ಔಟಾದರು.
ನಂತರ ಇನ್ನಿಂಗ್ಸ್ ಜವಬ್ದಾರಿ ಹೊತ್ತ ನಮನ್ ಧೀರ್ ಮತ್ತು ತಿಲಕ್ ವರ್ಮಾ ಬಿರುಸಿನ ಬ್ಯಾಟಿಂಗ್ ಮಾಡಿ ಕೇವಲ 10 ಓವರ್ಗಳಲ್ಲಿ ತಂಡದ ಮೊತ್ತವನ್ನು 141 ರನ್‌ಗಳ ಗಡಿ ದಾಟಿಸಿದರು. ಇದೇ ವೇಳೆ 30 ರನ್ ಗಳಿಸಿದ್ದ ನಮನ್ ಧೀರ್ ಅವರನ್ನು ಜಯದೇವ್ ಬಲಿ ಪಡೆದರು. ನಂತರ ಮೈದಾನಕ್ಕೆ ಬಂದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಈ ಹಂತದಲ್ಲಿ ತಿಲಕ್ ವರ್ಮಾ 24 ಎಸೆತಗಳಲ್ಲಿ ತಮ್ಮ ಅರ್ಧ ಶತಕವನ್ನು ಪೂರ್ಣಗೊಳಿಸಿದರು.
WHAT. A. MATCH! 🔥
Raining sixes and 500 runs scored for the first time ever in #TATAIPL 💥
Hyderabad is treated with an epic encounter 🧡💙👏
Scorecard ▶️ https://t.co/oi6mgyCP5s#SRHvMI pic.twitter.com/hwvWIDGsLh
— IndianPremierLeague (@IPL) March 27, 2024
ಆದರೆ ಇನ್ನಿಂಗ್ಸ್ನ 15ನೇ ಓವರ್‌ನ ಮೊದಲ ಎಸೆತದಲ್ಲಿ ಪ್ಯಾಟ್ ಕಮಿನ್ಸ್‌ಗೆ ತಿಲಕ್ ವರ್ಮಾ ಬಲಿಯಾದಾಗ ಮುಂಬೈ ಒತ್ತಡಕ್ಕೆ ಸಿಲುಕಿತು. ಅಂತಿಮವಾಗಿ ತಿಲಕ್ 34 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 64 ರನ್ ಗಳಿಸಿದರು. ಇದಾದ ನಂತರ ಹಾರ್ದಿಕ್ ಪಾಂಡ್ಯ ಮತ್ತು ಟಿಮ್ ಡೇವಿಡ್ ಮೇಲೆ ಜವಾಬ್ದಾರಿ ಬಿತ್ತು. ಆದರೆ ಮುಂದಿನ 18 ಎಸೆತಗಳಲ್ಲಿ ಈ ಇಬ್ಬರಿಗೆ ಯಾವುದೇ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ಇದು ಪಂದ್ಯಕ್ಕೆ ಪ್ರಮುಖ ತಿರುವು ನೀಡಿತು. ಇದರ ನಂತರ ಟಿಮ್ ಡೇವಿಡ್ ಮತ್ತು ಹಾರ್ದಿಕ್ ಪಾಂಡ್ಯ ಕೆಲವು ಉತ್ತಮ ಹೊಡೆತಗಳನ್ನು ಬಾರಿಸಿದರೂ ಸಹ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಟಿಮ್ ಡೇವಿಡ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 42 ರನ್ ಗಳಿಸಿದರೆ, ರೊಮಾರಿಯೊ ಶೆಫರ್ಡ್ 6 ಎಸೆತಗಳಲ್ಲಿ 15 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ನಾಯಕ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ 24 ರನ್ ಗಳಿಸಿ ಔಟಾಗಿದ್ದು ತಂಡದ ಸೋಲಿಗೆ ಬಹುದೊಡ್ಡ ಕಾರಣವಾಯಿತು.
ಇದಕ್ಕೂ ಮುನ್ನ ಟಾಸ್ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ಗೆ ಟ್ರಾವಿಸ್ ಹೆಡ್ ಸಿಡಿಲಬ್ಬರದ ಆರಂಭ ನೀಡಿದರು. ಆದರೆ ಇಲ್ಲಿ ಹೆಡ್ ಅವರ ಸುಲಭ ಕ್ಯಾಚ್ ಕೈಚೆಲ್ಲಿದ ಮುಂಬೈ ಆರಂಭದಲ್ಲೇ ಪಂದ್ಯದಿಂದ ಹೊರಬಿತ್ತು. ಜೀವದಾನದ ಸದುಪಯೋಗಪಡಿಸಿಕೊಂಡ ಹೆಡ್ 24 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 63 ರನ್ ಚಚ್ಚಿದರು. ಇಬ್ಬರೂ ಔಟಾದ ನಂತರ ಬಂದ ಹೆನ್ರಿಚ್ ಕ್ಲಾಸೆನ್ (34 ಎಸೆತಗಳಲ್ಲಿ ಔಟಾಗದೆ 80, ನಾಲ್ಕು ಬೌಂಡರಿ, 7 ಸಿಕ್ಸರ್) ಮತ್ತು ಏಡೆನ್ ಮಾರ್ಕ್ರಾಮ್ (28 ಎಸೆತಗಳಲ್ಲಿ 42, 2 ಬೌಂಡರಿ, ಒಂದು ಸಿಕ್ಸರ್) 55 ಎಸೆತಗಳಲ್ಲಿ 116 ರನ್‌ಗಳ ಮುರಿಯದ ಜೊತೆಯಾಟ ನೀಡಿ ತಂಡವನ್ನು 277 ರನ್‌ಗಳ ದಾಖಲೆಯ ಮೊತ್ತಕ್ಕೆ ಕೊಂಡೊಯ್ದರು
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:52 pm, Wed, 27 March 24