IPL 2024: 5 ರಲ್ಲಿ 4: ಸ್ಟಾರ್ಕ್ ಮುಂದೆ ಸೊನ್ನೆ ಸುತ್ತುವ ಹೆಡ್

|

Updated on: May 26, 2024 | 2:09 PM

IPL 2024 KKR vs SRH: ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಉಭಯ ತಂಡಗಳು ಈವರೆಗೆ ಒಟ್ಟು 27 ಬಾರಿ ಮುಖಾಮುಖಿಯಾಗಿದ್ದು, ಈ ವೇಳೆ ಕೆಕೆಆರ್ 18 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ, ಎಸ್​ಆರ್​ಹೆಚ್ ತಂಡ 9 ಪಂದ್ಯಗಳನ್ನು ಗೆದ್ದುಕೊಂಡಿದೆ.

IPL 2024: 5 ರಲ್ಲಿ 4: ಸ್ಟಾರ್ಕ್ ಮುಂದೆ ಸೊನ್ನೆ ಸುತ್ತುವ ಹೆಡ್
Travis Head vs Mitchell Starc
Follow us on

IPL 2024: ಐಪಿಎಲ್​ 2024ರ ಫೈನಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆಸ್ಟ್ರೇಲಿಯಾ ಆಟಗಾರರಾದ ಮಿಚೆಲ್ ಸ್ಟಾರ್ಕ್​ vs ಟ್ರಾವಿಸ್ ಹೆಡ್ ನಡುವಣ ಕದನವಾಗಿ ಮಾರ್ಪಡುವ ಸಾಧ್ಯತೆಯಿದೆ.

ಏಕೆಂದರೆ ಮಿಚೆಲ್ ಸ್ಟಾರ್ಕ್ ವಿರುದ್ಧ ಟ್ರಾವಿಸ್ ಹೆಡ್ ಇದುವರೆಗೆ ಒಂದೇ ಒಂದು ಫೋರ್ ಬಾರಿಸಿದ ಇತಿಹಾಸವಿಲ್ಲ. ಅಂದರೆ ಇಬ್ಬರು ಆಸ್ಟ್ರೇಲಿಯನ್ನರು ಈವರೆಗೆ 5 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಟ್ರಾವಿಸ್ ಹೆಡ್ ಕಲೆಹಾಕಿರುವ ಒಟ್ಟು ಸ್ಕೋರ್ ಕೇವಲ ಒಂದು ಎಂದರೆ ನಂಬಲೇಬೇಕು.

  • 2015 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಒನ್​ಡೇ ಕಪ್​ನಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್ ಮೊದಲ ಬಾರಿಗೆ ಎದುರು ಬದುರಾಗಿದ್ದರು. ಈ ವೇಳೆ ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲೇ ಹೆಡ್ (0) ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು.
  • 2015 ರಲ್ಲೇ ನಡೆದ ಒನ್​ಡೇ ಕಪ್​ನ ಮತ್ತೊಂದು ಪಂದ್ಯದಲ್ಲಿ ಸ್ಟಾರ್ಕ್ ಎಸೆದ 3 ಎಸೆತಗಳನ್ನು ಎದುರಿಸಿದ ಟ್ರಾವಿಸ್ ಹೆಡ್ ಒಂದು ರನ್ ಗಳಿಸಿ ಬೌಲ್ಡ್ ಆಗಿದ್ದರು.
  • 2015 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಶೆಫಿಲ್ಡ್ ಶೀಲ್ಡ್ ಪಂದ್ಯದಲ್ಲಿ ಸ್ಟಾರ್ಕ್ ಮತ್ತು ಹೆಡ್ ಮೂರನೇ ಬಾರಿ ಮುಖಾಮುಖಿಯಾದರು. ಈ ವೇಳೆ ಮೊದಲ ಎಸೆತದಲ್ಲೇ ಟ್ರಾವಿಸ್ ಹೆಡ್ (0) ಅವರನ್ನು ಸ್ಟಾರ್ಕ್ ಔಟ್ ಮಾಡಿದ್ದರು.
  • 2017 ರಲ್ಲಿ ಶೆಫಿಲ್ಡ್ ಶೀಲ್ಡ್​ ಪಂದ್ಯದಲ್ಲಿ 4ನೇ ಬಾರಿ ಮಿಚೆಲ್ ಸ್ಟಾರ್ಕ್ ಹಾಗೂ ಟ್ರಾವಿಸ್ ಹೆಡ್ ಎದುರು ಬದುರಾಗಿದ್ದರು. ಈ ವೇಳೆ ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲೇ ಟ್ರಾವಿಸ್ ಹೆಡ್ (0) ಕ್ಲೀನ್ ಬೌಲ್ಡ್ ಆಗಿದ್ದರು.
  • ಇದಾದ ಬಳಿಕ ಇಬ್ಬರು ಆಟಗಾರರು ಮುಖಾಮುಖಿಯಾಗಿದ್ದು ಈ ಬಾರಿಯ ಐಪಿಎಲ್​ನಲ್ಲಿ. ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್​ನ 2ನೇ ಎಸೆತದಲ್ಲಿ ಟ್ರಾವಿಸ್ ಹೆಡ್ (0) ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದ್ದರು.

ಅಂದರೆ ಇಲ್ಲಿ 5 ಬಾರಿಯ ಮುಖಾಮುಖಿಯಲ್ಲಿ ಟ್ರಾವಿಸ್ ಹೆಡ್ ಅವರನ್ನು ಮಿಚೆಲ್ ಸ್ಟಾರ್ಕ್ 4 ಬಾರಿ ಶೂನ್ಯಕ್ಕೆ ಔಟ್ ಮಾಡಿದ್ದಾರೆ. ಅಲ್ಲದೆ 5 ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ವಿರುದ್ಧ ಹೆಡ್ ಆಡಿರುವುದು ಕೇವಲ 8 ಎಸೆತಗಳನ್ನು ಮಾತ್ರ. ಈ ಎಂಟು ಎಸೆತಗಳಲ್ಲೇ 5 ಬಾರಿ ವಿಕೆಟ್ ಒಪ್ಪಿಸಿರುವುದು ಅಚ್ಚರಿಯೇ ಸರಿ.

ಇದನ್ನೂ ಓದಿ: ಪಾಕಿಸ್ತಾನ್ ವಿರುದ್ಧ ಆಡೋ ಬದಲು IPL ಆಡಲು ಬಿಡ್ಬೇಕಿತ್ತು: ಮೈಕೆಲ್ ವಾನ್

ಇದೀಗ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ಉಭಯರು ಮುಖಾಮುಖಿಯಾಗುವುದು ಖಚಿತ. ಇತ್ತ ಸನ್​ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ ಆರಂಭಿಕನಾಗಿ ಕಣಕ್ಕಿಳಿದರೆ, ಅತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಮಿಚೆಲ್ ಸ್ಟಾರ್ಕ್ ಮೊದಲ ಓವರ್ ಎಸೆಯಲಿದ್ದಾರೆ. ಹೀಗಾಗಿ ಅಂತಿಮ ಹಣಾಹಣಿಯ ಪೈಪೋಟಿಯಲ್ಲಿ ಸ್ಟಾರ್ಕ್​ ವಿರುದ್ಧ ಹೆಡ್ ಹಳೆಯ ಲೆಕ್ಕಗಳನ್ನು ಚುಕ್ತಾ ಮಾಡಲಿದ್ದಾರಾ ಕಾದು ನೋಡಬೇಕಿದೆ.