
IPL 2025: ಐಪಿಎಲ್ನ 70ನೇ ಪಂದ್ಯವು ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು. ಈ ನಾಟಕೀಯ ಸನ್ನಿವೇಶಗಳ ನಡುವೆ ಎಲ್ಲರ ಗಮನ ಸೆಳೆದದ್ದು ಎಲ್ಎಸ್ಜಿ ತಂಡದ ದಿಗ್ವೇಶ್ ರಾಥಿ. ಆರ್ಸಿಬಿ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದ ಯುವ ಸ್ಪಿನ್ನರ್ ಸಿಕ್ಕ ಅವಕಾಶದಲ್ಲಿ ಜಿತೇಶ್ ಶರ್ಮಾ ಅವರನ್ನು ಮಂಕಡ್ ರನೌಟ್ ಮಾಡಿದ್ದರು. ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಮಾಡಿ ದಿಗ್ವೇಶ್ ಮಾಡಿದ ಮನವಿಯನ್ನು ರಿಷಭ್ ಪಂತ್ ಹಿಂತೆಗೆದುಕೊಂಡಿದ್ದರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನ ಈ ನಿರ್ಧಾರಕ್ಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿಗ್ವೇಶ್ ರಾಥಿ ಮಾಡಿದ ಮಂಕಡ್ ರನೌಟ್ ಬಗ್ಗೆ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿರುವ ಅಶ್ವಿನ್, ದಿಗ್ವೇಶ್ ರಾಥಿ ನನ್ನ ಸಂಬಂಧಿ ಅಲ್ಲ, ಅವರು ಯಾರೆಂದು ನನಗೆ ತಿಳಿದಿಲ್ಲ. ಆದರೆ ನಾನು ಹೇಳಲು ಬಯಸುವುದೇನೆಂದರೆ ರಿಷಭ್ ಪಂತ್ ತೆಗೆದುಕೊಂಡ ನಿರ್ಧಾರವು ಬೌಲರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಯಾರೂ ಕೂಡ ಬೌಲರ್ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅವರ ಮನವಿಯನ್ನು ಏಕೆ ಹಿಂತೆಗೆದುಕೊಳ್ಳಬೇಕು. ಕೋಟ್ಯಂತರ ಜನರ ಮುಂದೆ ಅವರನ್ನು ಏಕೆ ಅವಮಾನಿಸಬೇಕು?. ದಿಗ್ವೇಶ್ ರಾಥಿ ನಿಯಮಗಳ ಪ್ರಕಾರವೇ ರನೌಟ್ಗೆ ಮನವಿ ಮಾಡಿದ್ದರು. ಇದಾಗ್ಯೂ ರಿಷಭ್ ಪಂತ್ ಈ ಮನವಿಯನ್ನು ಏಕೆ ಹಿಂಪಡೆದರು? ಇದು ಬೌಲರ್ಗೆ ಮಾಡುವಂತಹ ಅವಮಾನವಲ್ಲವೇ ಎಂದು ರವಿಚಂದ್ರನ್ ಅಶ್ವಿನ್ ಪ್ರಶ್ನಿಸಿದ್ದಾರೆ.
ನಾಯಕ ಎನಿಸಿಕೊಂಡವನು ಬೌಲರ್ಗಳಿಗೆ ಬೆಂಬಲ ನೀಡಬೇಕು. ಪಂತ್ ತಮ್ಮ ಬೌಲರ್ ಪರ ವಹಿಸಬೇಕಿತ್ತು. ಆದರೆ ಕ್ಯಾಪ್ಟನ್ಗಳು ನಾನ್ ಸ್ಟ್ರೈಕರ್ ಎಂಡ್‌ನಲ್ಲಿ ರನೌಟ್ ಆಗುವ ಬ್ಯಾಟ್ಸ್ಮನ್ಗಳ ಪರ ನಿಲ್ಲುತ್ತಿದ್ದಾರೆ. ದಿಗ್ವೇಶ್ ರಾಥಿ ವಿಷಯದಲ್ಲೂ ಅದೇ ಆಗಿದೆ ಎಂದು ಅಶ್ವಿನ್ ಆಕ್ರೋಶ ಹೊರಹಾಕಿದ್ದಾರೆ.
ಕೋಟ್ಯಂತರ ಜನರ ಮುಂದೆ ಯುವ ಆಟಗಾರನಿಗೆ ಮಾನಹಾನಿ ಮಾಡಿದ್ದಾರೆ. ಇಂತಹವುಗಳನ್ನೆಲ್ಲಾ ನಿಲ್ಲಿಸಿ. ನಾವು ಬೇರೆಯವರಿಗೆ ಹೀಗೆ ಮಾಡುತ್ತೇವೆಯೇ? ಒಬ್ಬ ಬೌಲರ್ ನಿಮಗೆ ಏಕೆ ಸಣ್ಣದಾಗಿ ಕಾಣುತ್ತಾನೆ? ಇದು ನಿಜಕ್ಕೂ ಅವಮಾನ ಎಂದು ರಿಷಭ್ ಪಂತ್ ನಡೆಯನ್ನು ಅಶ್ವಿನ್ ಟೀಕಿಸಿದ್ದಾರೆ.
ನಾಯಕ ಎನಿಸಿಕೊಂಡವನು ಈ ರೀತಿ ಮಾಡಿದ್ರೆ, ಒಬ್ಬ ಬೌಲರ್ ತಾನು ಎಂದಿಗೂ ಸಣ್ಣವನೆಂದು ಭಾವಿಸುತ್ತಾನೆ. ಮುಂದೆ ಅವನು ಹಾಗೆ ಮಾಡುವುದಿಲ್ಲ. ಜನರು ಕೂಡ ಕಾಮೆಂಟ್‌ಗಳ ವಿಭಾಗದಲ್ಲಿ ಅವನು ಹಾಗೆ ಮಾಡಬಾರದು ಎಂದು ಹೇಳುತ್ತಾರೆ. ಏಕೆ? ಅವನು ಹಾಗೆ ಏಕೆ ಮಾಡಬಾರದು? ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
ಐಸಿಸಿ ನಿಯಮಗಳ ಪ್ರಕಾರ, ಮಂಕಡ್ ರನೌಟ್ ಮಾಡಬಹುದು. ಈ ನಿಯಮದಂತೆಯೇ ಬೌಲರ್ ನಾನ್ ಸ್ಟ್ರೈಕ್ನಲ್ಲಿ ರನೌಟ್ ಮಾಡಿದ್ದಾರೆ. ಇಲ್ಲಿ ಎಲ್ಲವೂ ನಿಯಮದ ಪ್ರಕಾರವೇ ನಡೆದಿದೆ. ಈ ವೇಳೆ ನಾಯಕ ಬೌಲರ್ನ ಬೆಂಬಲಕ್ಕೆ ನಿಲ್ಲಬೇಕಿರುವುದು ಅವನ ಕರ್ತವ್ಯ. ಅದು ಬಿಟ್ಟು, ಕ್ರೀಡಾ ಸ್ಫೂರ್ತಿಯ ಹೆಸರಿನಲ್ಲಿ ಎಲ್ಲರ ಮುಂದೆ ಅವಮಾನ ಮಾಡುವುದು ಎಷ್ಟು ಸರಿ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಮಂಕಡ್ ರನೌಟ್ ಅನ್ನು ಸಮರ್ಥಿಸಿದವರಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ಒಬ್ಬರು. ಅಲ್ಲದೆ ಈ ಹಿಂದೆ ಅಶ್ವಿನ್ ಮಂಡಕ್ ರನೌಟ್ ಮಾಡಿದಾಗ, ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅಶ್ವಿನ್ಗೆ ಬೆಂಬಲ ಸೂಚಿಸಿದ್ದರು.
ಇದನ್ನೂ ಓದಿ: ಕ್ರಿಕೆಟ್ ನಿಯಮವೇ ಗೊತ್ತಿಲ್ದೆ ಕ್ರೀಡಾ ಸ್ಫೂರ್ತಿ ಮೆರೆಯುತ್ತಿರುವ ಕ್ರಿಕೆಟಿಗರು
ಮಂಕಡ್ ರನೌಟ್ ವಿಷಯದಲ್ಲಿ ಬ್ಯಾಟರ್ಗಳಿಗೆ ಇಲ್ಲದ ಕ್ರೀಡಾ ಸ್ಫೂರ್ತಿ ಬೌಲರ್ಗಳಿಗೆ ಮಾತ್ರ ಏಕೆ?. ಬ್ಯಾಟರ್ ತನ್ನ ಅನುಕೂಲತೆಗಾಗಿ ಮೊದಲೇ ಕ್ರೀಸ್ ಬಿಡುವುದು ಯಾವ ರೀತಿಯ ಕ್ರೀಡಾ ಸ್ಫೂರ್ತಿ? ಎಂದು ಕಪಿಲ್ ದೇವ್ ಪ್ರಶ್ನಿಸಿದ್ದರು. ಇದೀಗ ದಿಗ್ವೇಶ್ ರಾಥಿ ಅವರಿಗೆ ಬೆಂಬಲ ಸೂಚಿಸಿ ರವಿಚಂದ್ರನ್ ಅಶ್ವಿನ್, ರಿಷಭ್ ಪಂತ್ ನಡೆಯನ್ನು ಪ್ರಶ್ನಿಸಿದ್ದಾರೆ.
Published On - 2:14 pm, Thu, 29 May 25