IPL 2025: ಇದು ಕ್ರಿಕೆಟ್​ ಅಲ್ಲ, ಬರೀ ಬ್ಯಾಟಿಂಗ್: ಐಪಿಎಲ್​ ವಿರುದ್ಧ ತಿರುಗಿ ನಿಂತ ರಬಾಡ

|

Updated on: Mar 27, 2025 | 9:31 AM

IPL 2025: ಈ ಬಾರಿಯ ಐಪಿಎಲ್​ನ ಮೊದಲ 5 ಪಂದ್ಯಗಳಲ್ಲೇ 6 ತಂಡಗಳು 200+ ಸ್ಕೋರ್​ಗಳಿಸಿದ್ದಾರೆ. ಅದರಲ್ಲೂ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ ಬರೋಬ್ಬರಿ 286 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಹೀಗೆ ಪ್ರತಿ ಪಂದ್ಯಗಳಲ್ಲೂ ಹೈ ಸ್ಕೋರಿಂಗ್ ಮೂಡಿಬರುತ್ತಿರುವ ಬಗ್ಗೆ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕಗಿಸೊ ರಬಾಡ ಅಸಮಾಧಾನ ಹೊರಹಾಕಿದ್ದಾರೆ.

IPL 2025: ಇದು ಕ್ರಿಕೆಟ್​ ಅಲ್ಲ, ಬರೀ ಬ್ಯಾಟಿಂಗ್: ಐಪಿಎಲ್​ ವಿರುದ್ಧ ತಿರುಗಿ ನಿಂತ ರಬಾಡ
Kagiso Rabada
Follow us on

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಇದೀಗ ಟೂರ್ನಿಯ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅಲ್ಲದೆ ಬ್ಯಾಟಿಂಗ್ ಸ್ನೇಹಿ ಪಿಚ್​​ಗಳನ್ನು ರೂಪಿಸುತ್ತಿರುವ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಬಾರಿಯ ಐಪಿಎಲ್​ನ ಪ್ರತಿ ಪಂದ್ಯಗಳಲ್ಲೂ ಬೃಹತ್ ಸ್ಕೋರ್​ಗಳು ಮೂಡಿಬರುತ್ತಿದೆ. ಅಲ್ಲದೆ ಬ್ಯಾಟರ್​ಗಳು ಸಿಕ್ಸ್​-ಫೋರ್​ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಆದರೆ ಇಂತಹ ಹೈ-ಸ್ಕೋರಿಂಗ್ ಪಂದ್ಯಗಳಿಂದ ರಬಾಡ ಪ್ರಭಾವಿತರಾಗಿಲ್ಲ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಗಿಸೊ ರಬಾಡ, ಐಪಿಎಲ್​ನಲ್ಲಿ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನವಿಲ್ಲ ಎಂದಿದ್ದಾರೆ. ಹೈ-ಸ್ಕೋರಿಂಗ್ ಪಂದ್ಯಗಳು ಇರುತ್ತವೆ, ಇರಲಿ. ಅದಕ್ಕೆ ನನಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಇದು ಪ್ರತಿ ಪಂದ್ಯಗಳಲ್ಲೂ ಪುನರಾವರ್ತನೆಯಾಗುತ್ತಿದೆ. ಇಂತಹ ಆವರ್ತನ ಕಡಿಮೆಯಾಗಬೇಕು ಎಂದಿದ್ದಾರೆ.

ನೀವು ಪ್ರತಿ ಪಂದ್ಯಕ್ಕೂ ಸಮತಟ್ಟಾದ ಪಿಚ್ ನಿರ್ಮಿಸುತ್ತಿರುವುದರಿಂದ ಬೌಲರ್​ಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಏಕೆಂದರೆ ಕ್ರಿಕೆಟ್ ಆಟವು ಸಮತೋಲನದಿಂದ ಕೂಡಿರಬೇಕು. ಅಂದರೆ ಮಾತ್ರ ಪಂದ್ಯದ ಮಜ ಸಿಗುತ್ತದೆ. ಆದರೆ ಇದೀಗ ಫ್ಲಾಟ್​ ಪಿಚ್​ಗಳನ್ನು ನಿರ್ಮಿಸಿ ಈ ಮಜವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕಗಿಸೊ ರಬಾಡ ಹೇಳಿದ್ದಾರೆ.

ಇದನ್ನೂ ಓದಿ
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!
VIDEO: ಎಂಎಸ್ ಧೋನಿ ಎಂಟ್ರಿಗೆ ಕಿವಿ ಮುಚ್ಚಿ ಕೂತ ನೀತಾ ಅಂಬಾನಿ

ಇದೇ ರೀತಿ ಸಮತಟ್ಟಾದ ಪಿಚ್ ನಿರ್ಮಿಸಿ ಬ್ಯಾಟರ್​ಗಳಿಗೆ ಮಾತ್ರ ಸಹಕಾರಿಯಾಗುವಂತೆ ಮಾಡುವುದಾರೆ, ನಮ್ಮ ಈ ಕ್ರೀಡೆಯನ್ನು ಕ್ರಿಕೆಟ್ ಎನ್ನಲಾಗುವುದಿಲ್ಲ. ಬದಲಾಗಿ ಬ್ಯಾಟಿಂಗ್ ಎಂದು ಕರೆಯಬೇಕಾಗುತ್ತದೆ ಎಂದು ರಬಾಡ ಅಸಮಾಧಾನ ಹೊರಹಾಕಿದ್ದಾರೆ.

ಸದ್ಯ ಒಬ್ಬ ಬೌಲರ್ ಆಗಿ ನಾನು ಈ ಪರಿಸ್ಥಿತಿಗಳ ಬಗ್ಗೆ ದೂರು ನೀಡುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬೌಲರ್ ಆಗಿ ನಾವು ಅದರ ಬಗ್ಗೆ ಏನಾದರೂ ಮಾಡಲೇಬೇಕಾಗುತ್ತದೆ. ನೀವು ಹೆಚ್ಚಿನ ಸ್ಕೋರ್ ಪಂದ್ಯವನ್ನು ನೋಡಿ ಅಥವಾ ಕಡಿಮೆ ಸ್ಕೋರ್​ನ ಪಂದ್ಯಗಳನ್ನು ಸಹ ವೀಕ್ಷಿಸಿ, ಯಾವಾಗಲೂ ನೀರಸವಾಗಿರುತ್ತದೆ. ಆದರೆ ಅತ್ಯಂತ ರೋಮಾಂಚಕಾರಿ ಪಂದ್ಯಗಳು ಮೂಡಿಬಂದಿರುವುದು ಸಮತೋಲನದಿಂದ ಕೂಡಿದ ಪಿಚ್​ಗಳಲ್ಲಿ ಮಾತ್ರ. ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಈ ಬಗ್ಗೆ ಗಮನಹರಿಸಬೇಕಾದ ಅಗತ್ಯತೆ ಇದೆ ಎಂದು ಕಗಿಸೊ ರಬಾಡ ಹೇಳಿದ್ದಾರೆ.

ಕಗಿಸೊ ರಬಾಡ ಹೇಳಿದಂತೆ ಐಪಿಎಲ್​ನಲ್ಲಿ ಈಗ 250+ ಸ್ಕೋರ್​ಗಳು ಸಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಸನ್​ರೈಸರ್ಸ್ ಹೈದರಾಬಾದ್​ನಂತಹ ತಂಡಗಳ ಬ್ಯಾಟರ್​ಗಳು ನಮ್ಮ ಮುಂದಿನ ಗುರಿ 300 ರನ್​ಗಳು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ, ಭಾರತೀಯ ಪಿಚ್​ಗಳು ಬ್ಯಾಟಿಂಗ್ ಸ್ನೇಹಿಯಾಗಿ ಮಾರ್ಪಡುತ್ತಿರುವುದು ಸುಳ್ಳಲ್ಲ.

ಇದಾಗ್ಯೂ ಚೆನ್ನೈನ ಚೆಪಾಕ್ ಮೈದಾನವು ಈಗಲೂ ಸ್ಪಿನ್ ಸ್ನೇಹಿ ಪಿಚ್​ ಅನ್ನೇ ಬಳಸಿಕೊಳ್ಳುತ್ತಿದೆ. ಇದೇ ಕಾರಣದಿಂದ ಚೆನ್ನೈನಲ್ಲಿ ನಡೆಯುವ ಪಂದ್ಯಗಳಲ್ಲಿ ಲೋ ಸ್ಕೋರ್ ಮೂಡಿಬರುತ್ತಿದ್ದು, ಗೆಲುವಿಗಾಗಿ ಉಭಯ ತಂಡಗಳಿಂದ ಉತ್ತಮ ಪೈಪೋಟಿ ಕೂಡ ಕಂಡು ಬರುತ್ತಿದೆ.

ಇದನ್ನೂ ಓದಿ: VIDEO: ಮೈದಾನಕ್ಕೆ ನುಗ್ಗಿದ ರಿಯಾನ್ ಪರಾಗ್ ಅಭಿಮಾನಿ: ಆಮೇಲೇನಾಯ್ತು ನೀವೇ ನೋಡಿ

ಸದ್ಯ ಐಪಿಎಲ್ ಪಿಚ್​ ಬಗ್ಗೆ ಕಗಿಸೊ ರಬಾಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಇದಕ್ಕೆ ಇತರೆ ಬೌಲರ್​ಗಳು ಕೂಡ ಧ್ವನಿಗೂಡಿಸಲಿದ್ದಾರಾ ಎಂಬುದನ್ನು  ಕಾದು ನೋಡಬೇಕಿದೆ.