
IPL 2025: ಐಪಿಎಲ್ ಸೀಸನ್-18ರ ಪ್ಲೇಆಫ್ ರೇಸ್ನಿಂದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಹೊರಬಿದ್ದಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಸೋಲನುಭವಿಸುವ ಮೂಲಕ. ಈ ಸೋಲುಗಳ ನಡುವೆ ಡೆಲ್ಲಿ ಪಡೆಗೆ ಪ್ಲೇಆಫ್ಗೆ ಪ್ರವೇಶಿಸಲು ಉತ್ತಮ ಅವಕಾಶವಿತ್ತು. ಈ ಅವಕಾಶ ಒದಗಿ ಬಂದಿದ್ದು ಮೊದಲ ಸುತ್ತಿನ ಪಂದ್ಯಗಳ ಜಯದಿಂದ ಎಂಬುದು ವಿಶೇಷ.
ಅಂದರೆ ಈ ಬಾರಿಯ ಐಪಿಎಲ್ನ ಮೊದಲ 6 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿತ್ತು. ಅದರಲ್ಲೂ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಡೆಲ್ಲಿ ಪಡೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಶುರುವಾಗಿದ್ದು, ಆರ್ಸಿಬಿ ವಿರುದ್ಧದ ಗೆಲುವಿನೊಂದಿಗೆ ಎಂಬುದು ವಿಶೇಷ.
ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಕನ್ನಡಿಗ ಕೆಎಲ್ ರಾಹುಲ್ ಕಾಂತಾರ ಶೈಲಿಯಲ್ಲಿ ವೃತ್ತ ಎಳೆದು ಸಂಭ್ರಮಿಸಿದ್ದರು. ಕಾಕತಾಳೀಯ ಎಂಬಂತೆ ಈ ವೃತ್ತದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೋಲಿನ ಸುಳಿಗೆ ಸಿಲುಕಿತು.
ಏಕೆಂದರೆ ಆ ಬಳಿಕ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 12 ರನ್ಗಳಿಂದ ಸೋಲೊಪ್ಪಿಕೊಂಡಿತು. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಅತ್ತ ಆರ್ಆರ್ ಪಡೆ ಮಾಡಿದ ತಪ್ಪಿನಿಂದಾಗಿ ಸೂಪರ್ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜಯ ದಕ್ಕಿತು ಎಂದರೆ ತಪ್ಪಾಗಲಾರದು.
ಇದಾದ ಬಳಿಕ ಗುಜರಾತ್ ಟೈಟಾನ್ಸ್ ವಿರುದ್ಧ 7 ವಿಕೆಟ್ಗಳಿಂದ ಸೋಲನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಲಕ್ನೋ ಸೂಪರ್ ಜೈಂಟ್ಸ್ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಆ ಬಳಿಕ ಆರ್ಸಿಬಿ ವಿರುದ್ಧ 6 ವಿಕೆಟ್ಗಳ ಹೀನಾಯ ಸೋಲು, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 14 ರನ್ಗಳ ಸೋಲು, ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ರದ್ದು. ಗುಜರಾತ್ ಟೈಟಾನ್ಸ್ ವಿರುದ್ಧ 10 ವಿಕೆಟ್ಗಳಿಂದ ಹೀನಾಯ ಸೋಲು.
ಹೀಗೆ ಸತತ ಪರಾಜಯಗಳೊಂದಿಗೆ ಕಂಗೆಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ ಪ್ಲೇಆಫ್ ಹಂತಕ್ಕೇರುವ ಅವಕಾಶವಿತ್ತು. ಆದರೆ ಮುಂಬೈ ವಿರುದ್ಧ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ 59 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಅಂದರೆ ಇಲ್ಲಿ ಮೊದಲ ಸುತ್ತಿನ 7 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿ 10 ಅಂಕಗಳನ್ನು ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ಆ ಬಳಿಕ ಕಣಕ್ಕಿಳಿದ 6 ಮ್ಯಾಚ್ಗಳಿಂದ ಪಡೆದಿರುವುದು ಕೇವಲ 3 ಪಾಯಿಂಟ್ಸ್ ಮಾತ್ರ.
ಇದನ್ನೂ ಓದಿ: VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
ಅತ್ತ ಕೆಎಲ್ ರಾಹುಲ್ ಅವರ ಕಾಂತಾರ ಸೆಲೆಬ್ರೇಷನ್ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದಿರುವುದು 2 ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ ಪಂದ್ಯಗಳಲ್ಲಿ ಸೋಲುವ ಮೂಲಕ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಹೀಗಾಗಿಯೇ ರಾಹುಲ್ ಎಳೆದದ್ದು ವೃತ್ತ ಅಲ್ಲ, ಅದು ಸೋಲಿನ ಸುಳಿ ಎಂದು ಟ್ರೋಲ್ ಮಾಡಲಾಗುತ್ತಿದೆ.