RCB vs PBKS: ಟಾಸ್ ಗೆದ್ದ ತಂಡ ಆಯ್ಕೆ ಮಾಡುವುದೇನು?
IPL 2025 RCB vs PBKS Final: ಇಂಡಿಯನ್ ಪ್ರೀಮಿಯರ್ ಲೀಗ್ನ ಮಹಾಸಮರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂದು ನಡೆಯಲಿರುವ ಐಪಿಎಲ್ ಸೀಸನ್-18ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟಾಸ್ ಕೂಡ ನಿರ್ಣಾಯಕ ಪಾತ್ರವಹಿಸಬಹುದು. ಏಕೆಂದರೆ ಈ ಮೈದಾನದಲ್ಲಿ ಈವರೆಗೆ 44 ಟಿ20 ಪಂದ್ಯಗಳನ್ನು ಆಡಲಾಗಿದೆ. ಈ ವೇಳೆ ಟಾಸ್ ಗೆದ್ದ ತಂಡಗಳ ಆಯ್ಕೆ ಏನಾಗಿತ್ತು? ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..
ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈವರೆಗೆ 44 ಟಿ20 ಪಂದ್ಯಗಳನ್ನಾಡಲಾಗಿದೆ. 44 ಪಂದ್ಯಗಳಲ್ಲಿ 12 ತಂಡಗಳು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 5 ಮ್ಯಾಚ್ಗಳಲ್ಲಿ ಮಾತ್ರ. ಅಂದರೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ತಂಡ 7 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಇನ್ನು 44 ಮ್ಯಾಚ್ಗಳಲ್ಲಿ 32 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ದುಕೊಂಡ ಇತಿಹಾಸವಿದೆ. ಈ ವೇಳೆ ಚೇಸಿಂಗ್ ಮಾಡಿದ ತಂಡ 15 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು 16 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ ಸೋತರೆ, ಒಂದು ಪಂದ್ಯವು ಟೈನಲ್ಲಿ ಅಂತ್ಯ ಕಂಡಿದೆ.
ಐಪಿಎಲ್ 2025 ರ ಟಾಸ್ ಫಲಿತಾಂಶ:
ಈ ಬಾರಿಯ ಐಪಿಎಲ್ನಲ್ಲಿ ಅಹಮದಾಬಾದ್ನಲ್ಲಿ ಒಟ್ಟು 8 ಪಂದ್ಯಗಳನ್ನಾಡಲಾಗಿದೆ. ಈ ವೇಳೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ತಂಡ ಗೆದ್ದಿರುವುದು ಕೇವಲ ಒಂದು ಮ್ಯಾಚ್ ಮಾತ್ರ. ಹಾಗೆಯೇ ಉಳಿದ 7 ಪಂದ್ಯಗಳಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ತಂಡ 2 ಬಾರಿ ಮಾತ್ರ ಗೆಲುವು ದಾಖಲಿಸಿದೆ.
ಈ ಅಂಕಿ ಅಂಶಗಳ ಪ್ರಕಾರ, ಟಾಸ್ ಪ್ರಮುಖ ಪಾತ್ರವಹಿಸಲ್ಲ ಎಂದೆನಿಸಬಹುದು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಈ ಮೈದಾನದಲ್ಲಿ ಆಡಿದ 8 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 6 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಚೇಸಿಂಗ್ನಲ್ಲಿ 2 ತಂಡಗಳು ಮಾತ್ರ ಜಯ ಸಾಧಿಸಿದೆ.
ಅಂದರೆ ಇಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳ ಗೆಲುವಿನ ಸಂಖ್ಯೆ ಹೆಚ್ಚಿದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚು.
ಇದಾಗ್ಯೂ ಬೃಹತ್ ಮೊತ್ತ ಪೇರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದ ಫಲಿತಾಂಶ ಸಾಕ್ಷಿ. ಏಕೆಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದರೂ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು.
ಇದನ್ನೂ ಓದಿ: IPL 2025: ಫೈನಲ್ ಪಂದ್ಯಕ್ಕೂ ಮುನ್ನ RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಡೌಟ್
ಹೀಗಾಗಿ ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ತಂಡವು ಬೃಹತ್ ಮೊತ್ತ ಪೇರಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಚೇಸಿಂಗ್ ಟೀಮ್ ಬೆನ್ನತ್ತಿ ಗೆಲ್ಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
Published On - 11:05 am, Tue, 3 June 25
