
ಐಪಿಎಲ್ 2025 (IPL 2025) ಮೆಗಾ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ (RR) ಫ್ರಾಂಚೈಸಿ ತಂಡದಲ್ಲಿದ್ದ ಅನೇಕ ಸ್ಟಾರ್ ಆಟಗಾರರನ್ನು ತಂಡದಿಂದ ಕೈಬಿಟ್ಟಿತ್ತು. ತಂಡದಲ್ಲಿದ್ದವರನ್ನು ಹರಾಜಿನಲ್ಲಿ ಮತ್ತೆ ಖರೀದಿಸಲು ಸಹ ಪ್ರಯತ್ನಿಸಲಿಲ್ಲ. ಫ್ರಾಂಚೈಸಿಯ ಈ ನಿರ್ಧಾರದ ಬಗ್ಗೆ ಅನೇಕ ಕ್ರಿಕೆಟ್ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಸತತ ಸೋಲುಗಳಿಂದ ಕಂಗೆಟ್ಟು ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿರುವ ರಾಜಸ್ಥಾನ್ ಬಗ್ಗೆ ಅಚ್ಚರಿಯ ಸುದ್ದಿಯೊಂದು ಬೆಳಕಿಗೆ ಬಂದಿದೆ. ತಂಡದಿಂದ ಬಿಡುಗಡೆ ಮಾಡುವ ಮುನ್ನ ತಂಡದ ಪ್ರಮುಖ ಆಟಗಾರ ಜೋಸ್ ಬಟ್ಲರ್ (Jos Buttler) ಅವರನ್ನು ಉಳಿಸಿಕೊಳ್ಳಲು ಫ್ರಾಂಚೈಸಿ ಭರವಸೆ ನೀಡಿತ್ತು. ಆದರೆ ಕೊನೆಯ ದಿನಾಂಕದಂದು ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು ಎಂದು ಮಾಧ್ಯಮ ವರದಿಗಳು ಹೇಳಿವೆ.
ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಜೋಸ್ ಬಟ್ಲರ್ 2020 ರ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡರು. ಅದಾದ ನಂತರ, ಅವರು ಅದೇ ಫ್ರಾಂಚೈಸಿ ಪರ 5 ಸೀಸನ್ಗಳನ್ನು ಆಡಿದ್ದರು. ಅದರಲ್ಲೂ 2022 ರ ಐಪಿಎಲ್ನಲ್ಲಿ ಅವರು 4 ಶತಕಗಳ ಸಹಾಯದಿಂದ 850 ಕ್ಕೂ ಹೆಚ್ಚು ರನ್ ಗಳಿಸಿ 2008 ರ ನಂತರ ಮೊದಲ ಬಾರಿಗೆ ರಾಜಸ್ಥಾನ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಮುಂದಿನ ಎರಡು ಸೀಸನ್‌ನಲ್ಲಿ ಅವರು ಸತತವಾಗಿ 350 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅಲ್ಲದೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ಅವರು ತಂಡಕ್ಕೆ ದೊಡ್ಡ ಪಂದ್ಯ ವಿಜೇತರಾಗಿ ಹೊರಹೊಮ್ಮಿದ್ದರು. ಆದ್ದರಿಂದ, ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಆದರೀಗ ಬಟ್ಲರ್ ಅವರನ್ನು ತಂಡದಿಂದ ಕೈಬಿಟ್ಟ ಬಗ್ಗೆ ವರದಿ ಮಾಡಿರುವ ಸ್ಪೋರ್ಟ್ಸ್ ತಕ್, ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರನ್ನು ಅವಮಾನಿಸಿದೆ ಎಂದು ಹೇಳಿಕೊಂಡಿದೆ. ಬಟ್ಲರ್ ಅವರೊಂದಿಗೆ ಮಾತನಾಡಿದ್ದ ಫ್ರಾಂಚೈಸಿಯ ಆಡಳಿತ ಮಂಡಳಿಯ ಉನ್ನತ ಮಟ್ಟದ ಅಧಿಕಾರಿಗಳು, ಮೆಗಾ ಹರಾಜಿಗೆ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವ ಗಡುವಿಗೆ ಎರಡು ದಿನಗಳ ಮೊದಲು, ಬಟ್ಲರ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವುದಾಗಿ ಭರವಸೆ ನೀಡಿದ್ದರು. ಬಟ್ಲರ್ ಕೂಡ ತಮ್ಮ ಕಡೆಯಿಂದ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುವ ದಿನದಂದು ಅವರ ಹೆಸರು ಪಟ್ಟಿಯಿಂದ ಕಣ್ಮರೆಯಾಗಿತ್ತು. ಇಷ್ಟೇ ಅಲ್ಲ, ಇದಾದ ನಂತರ ಫ್ರಾಂಚೈಸಿ ಬಟ್ಲರ್ ಜೊತೆ ಮಾತನಾಡದೆ ಅವಮಾನಿಸಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
IPL 2025: ಸಿಎಸ್ಕೆ ಸೋಲುತ್ತಿದ್ದಂತೆ ಕ್ರೀಡಾಂಗಣದಲ್ಲೇ ಕಣ್ಣೀರಿಟ್ಟ ಶೃತಿ ಹಸನ್; ವಿಡಿಯೋ ನೋಡಿ
ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಗೆದ್ದಿರುವುದರಿಂದ ಬಟ್ಲರ್ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿರುವ ರಾಜಸ್ಥಾನ್ ಕೊನೆಯ 3 ಪಂದ್ಯಗಳನ್ನು ಕೈಯಾರೆ ಕಳೆದುಕೊಂಡಿತ್ತು. ಒಂದು ವೇಳೆ ಬಟ್ಲರ್ ತಂಡದಲ್ಲಿದ್ದಿದ್ದರೆ ರಾಜಸ್ಥಾನ್ಗೆ ಖಂಡಿತವಾಗಿಯೂ ನೆರವಾಗುತ್ತಿದ್ದರು .
ಮತ್ತೊಂದೆಡೆ, ಐಪಿಎಲ್ 2025 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ಬಟ್ಲರ್ ಅವರ ಬ್ಯಾಟ್ ಜೋರಾಗಿ ಸದ್ದು ಮಾಡುತ್ತಿದೆ. ಇಲ್ಲಿಯವರೆಗೆ 8 ಪಂದ್ಯಗಳನ್ನಾಡಿರುವ ಬಟ್ಲರ್ 356 ರನ್ ಗಳಿಸಿದ್ದು, ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಗುಜರಾತ್ ತಂಡ ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಜಯಗಳಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ