RCB vs KKR: ಫೋರ್, ಕ್ಯಾಚ್ ಡ್ರಾಪ್, ವಿಕೆಟ್; ಮೊದಲ ಓವರ್​ನಲ್ಲೇ ಮ್ಯಾಜಿಕ್ ತೋರಿಸಿದ ಆರ್​ಸಿಬಿ

|

Updated on: Mar 22, 2025 | 8:13 PM

IPL 2025, RCB vs KKR: 18ನೇ ಆವೃತ್ತಿಯ ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್ಸಿಬಿ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಕೆಕೆಆರ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಆರಂಭಿಕ ಓವರ್‌ನಲ್ಲಿಯೇ ಸುಯೇಶ್ ಶರ್ಮಾ ಅವರಿಂದ ಜೀವದಾನ ಪಡೆದರು. ಆದಾಗ್ಯೂ ಮುಂದಿನ ಎಸೆತದಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

RCB vs KKR: ಫೋರ್, ಕ್ಯಾಚ್ ಡ್ರಾಪ್, ವಿಕೆಟ್; ಮೊದಲ ಓವರ್​ನಲ್ಲೇ ಮ್ಯಾಜಿಕ್ ತೋರಿಸಿದ ಆರ್​ಸಿಬಿ
Rcb
Follow us on

18ನೇ ಆವೃತ್ತಿಯ ಐಪಿಎಲ್ (IPL 2025) ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (KKR vs RCB) ತಂಡ ಮುಖಾಮುಖಿಯಾಗಿವೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಕೆಕೆಆರ್​ಗೆ ಮೊದಲ ಓವರ್​ನಲ್ಲೇ ಆಘಾತ ಎದುರಾಗಿದೆ. ಆರಂಭಿಕ ಕ್ವಿಂಟನ್ ಡಿ ಕಾಕ್ ಮೊದಲ ಓವರ್​ನಲ್ಲಿ ಸಿಕ್ಕಿದ ಜೀವದಾನವನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಮುಂದಿನ ಎಸೆತದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದಾರೆ.

ವಾಸ್ತವವಾಗಿ ಈ ಬಾರಿ ಮೆಗಾ ಹರಾಜು ನಡೆದ ಕಾರಣ ಎಲ್ಲಾ ತಂಡಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಅದರಂತೆ ಕೆಕೆಆರ್ ತಂಡದ ಆರಂಭಿಕರಲ್ಲೂ ಬದಲಾವಣೆ ಆಗಿದೆ. ಕಳೆದ ಸೀಸನ್​ನಲ್ಲಿ ಫಿಲ್ ಸಾಲ್ಟ್ ಹಾಗೂ ಸುನಿಲ್ ನರೈನ್ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಆದರೆ ಈ ಬಾರಿ ಕ್ವಿಂಟನ್ ಡಿ ಕಾಕ್ ಹಾಗೂ ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇತ್ತ ಆರ್​ಸಿಬಿ ಪರ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹ್ಯಾಜಲ್​ವುಡ್ ಬೌಲಿಂಗ್ ಆರಂಭಿಸಿದರು.

ಸುಲಭ ಕ್ಯಾಚ್ ಡ್ರಾಪ್

ಓವರ್​ನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ ಎರಡನೇ ಎಸೆತವನ್ನು ಡಿ ಕಾಕ್ ಬೌಂಡರಿಗಟ್ಟಿದರು. ಮುಂದಿನ ಎರಡು ಎಸೆತಗಳಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ ಓವರ್​ನ ಮೂರನೇ ಎಸೆಯದಲ್ಲಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಡಿ ಕಾಕ್ ಗಾಳಿಯಲ್ಲಿ ಆಡಿದರು. ಆದರೆ ಚೆಂಡು ದೂರ ಕ್ರಮಿಸದೆ ಎತ್ತರಕ್ಕೆ ಚಿಮ್ಮಿತು. ಹೀಗಾಗಿ ಸ್ಕ್ವೈರ್ ಲೆಗ್​ನಲ್ಲಿ ನಿಂತಿದ್ದ ಸುಯೇಶ್ ಶರ್ಮಾಗೆ ಸುಲಭ ಕ್ಯಾಚ್ ಆಗಿತ್ತು. ಆದರೆ ಸುಯೇಶ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಈ ಕ್ಯಾಚ್ ಅನ್ನು ವಿಕೆಟ್ ಕೀಪರ್​ಗೂ ಹಿಡಿಯುವ ಅವಕಾಶವಿತ್ತು. ಆದರೆ ಸುಯೇಶ್ ಅದು ನನ್ನ ಕ್ಯಾಚ್ ಎಂದು ಸನ್ನೆ ಮಾಡುವ ಮೂಲಕ ಕೀಪರ್​ ಅನ್ನು ದೂರದಲ್ಲೇ ನಿಲ್ಲುವಂತೆ ಮಾಡಿದರು.ಆದಾಗ್ಯೂ ಸುಯೇಶ್ ಸುಲಭ ಕ್ಯಾಚ್ ಹಿಡಿಯುವಲ್ಲಿ ಎಡವಟ್ಟು ಮಾಡಿದರು. ಚೆಂಡು ಸುಯೇಶ್​ ಕೈಗೆ ಬಿದ್ದು ಆ ನಂತರ ಕೆಳಗೆ ಬಿತ್ತು.

5ನೇ ಎಸೆತದಲ್ಲಿ ಔಟ್

ಸುಯೇಶ್ ಅವರ ಈ ಕಳಪೆ ಫಿಲ್ಡಿಂಗ್​ನಿಂದ ಒಂದು ಕ್ಷಣ ಮೈದಾನದಲ್ಲಿ ಮೌನ ಆವರಿಸಿತ್ತು. ಆರ್​ಸಿಬಿ ಆಟಗಾರರು ಕೂಡ ಆಘಾತಕ್ಕೊಳಗಾದವರಂತೆ ಮೈದಾನದಲ್ಲಿ ನಿಂತರು. ಆದರೆ ಸುಯೇಶ್ ಕೈಚೆಲ್ಲಿದ ಕ್ಯಾಚ್ ಹೆಚ್ಚು ದುಬಾರಿಯಾಗಲಿಲ್ಲ. ಏಕೆಂದರೆ ಅದೇ ಓವರ್​ನ ಮುಂದಿನ ಎಸೆತದಲ್ಲಿ ಡಿ ಕಾಕ್, ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚಿತ್ತು, ಸ್ಕೋರ್ ಬೋರ್ಡ್​ಗೆ ಯಾವುದೇ ವ್ಯತ್ಯಾಸ ಮಾಡದೆ ಪೆವಿಲಿಯನತ್ತ ಹೆಜ್ಜೆ ಹಾಕಿದರು.

ಉಭಯ ತಂಡಗಳು

ಆರ್​ಸಿಬಿ ಪ್ಲೇಯಿಂಗ್ XI: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ, ರಸಿಕ್ ದಾರ್.

ಕೆಕೆಆರ್ ಪ್ಲೇಯಿಂಗ್ 11: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಅಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Sat, 22 March 25