IPL 2025: ರಾಜಸ್ಥಾನ್ ಹೆಗಲೇರಿದೆ ದುರಾದೃಷ್ಟ; ಕೆಕೆಆರ್ ವಿರುದ್ಧ ರಾಯಲ್ಸ್ಗೆ 1 ರನ್ ಸೋಲು
KKR's Last-Ball Thriller: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ರೋಮಾಂಚಕ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ 1 ರನ್‌ನಿಂದ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಕೆಕೆಆರ್ 206 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ 205 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಯಾನ್ ಪರಾಗ್ 95 ರನ್ ಗಳಿಸಿದರೂ ರಾಜಸ್ಥಾನ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ರೋಮಾಂಚಕಾರಿ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR vs RR) ತಂಡವು ಕೊನೆಯ ಎಸೆತದಲ್ಲಿ 1 ರನ್‌ನಿಂದ ಜಯ ಸಾಧಿಸಿತು. ಮೇ 4 ರಂದು ನಡೆದ ಐಪಿಎಲ್ (IPL 2025) 53ನೇ ಪಂದ್ಯದಲ್ಲಿ ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 206 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕೊನೆಯವರೆಗೂ ಹೋರಾಟ ನೀಡಿದ ರಾಜಸ್ಥಾನ ತಂಡ 205 ರನ್ ಕಲೆಹಾಕಿ ಕೇವಲ 1 ರನ್‌ನಿಂದ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ಪರ ರಿಯಾನ್ ಪರಾಗ್ 95 ರನ್‌ಗಳ ನಾಯಕನ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಕೋಲ್ಕತ್ತಾ ತಂಡ ಆಡಿರುವ 11 ಪಂದ್ಯಗಳಲ್ಲಿ 11 ಅಂಕಗಳನ್ನು ಸಂಪಾದಿಸಿದ್ದು, ಪ್ಲೇಆಫ್‌ಗೆ ಅರ್ಹತೆ ಪಡೆಯುವ ಭರವಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.
ರಹಾನೆ- ಗುರ್ಬಾಜ್ ಜೊತೆಯಾಟ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡವು 13 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ, ನಾಯಕ ಅಜಿಂಕ್ಯ ರಹಾನೆ ಮತ್ತು ರಹಮಾನುಲ್ಲಾ ಗುರ್ಬಾಜ್ ಎರಡನೇ ವಿಕೆಟ್‌ಗೆ 50+ ರನ್‌ಗಳನ್ನು ಸೇರಿಸಿ ಕೆಕೆಆರ್ ತಂಡವನ್ನು ಸ್ಥಿರಗೊಳಿಸಿದರು. ಗುರ್ಬಾಜ್ ಉತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದರು ಆದರೆ ಮಹೇಶ್ ತೀಕ್ಷಣ ಅವರನ್ನು ಔಟ್ ಮಾಡುವ ಮೂಲಕ ಈ ಜೋಡಿಯ ಜೊತೆಯಾಟವನ್ನು ಮುರಿದರು.
ರಸೆಲ್ ಸ್ಫೋಟಕ ಅರ್ಧಶತಕ
ನಂತರ ಜೊತೆಯಾದ ರಹಾನೆ ಮತ್ತು ಅಂಗ್ಕ್ರಿಶ್ ರಘುವಂಶಿ ಉತ್ತಮ ಜೊತೆಯಾಟ ಕಟ್ಟಿದರು. ರಹಾನೆ 44 ರನ್ ಗಳಿಸಿ ಔಟಾದರು ಆ ಬಳಿಕ ಬಂದ ರಸೆಲ್ ಸ್ಫೋಟಕ ಬ್ಯಾಟಿಂಗ್ ಮಾಡಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಕೊನೆಯ ಓವರ್‌ನಲ್ಲಿ ರಿಂಕು ಸ್ಫೋಟಕ ಬ್ಯಾಟಿಂಗ್ ಮಾಡಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿ ತಂಡದ ಸ್ಕೋರ್ ಅನ್ನು 200 ರನ್‌ಗಳ ಗಡಿ ದಾಟಿಸಿದರು. ರಾಜಸ್ಥಾನ ಪರ ಜೋಫ್ರಾ ಆರ್ಚರ್, ಯುಧ್ವೀರ್, ತೀಕ್ಷ್ಣ ಮತ್ತು ರಯಾನ್ ತಲಾ ಒಂದು ವಿಕೆಟ್ ಪಡೆದರು.
71 ರನ್‌ಗಳಿಗೆ ಐದು ವಿಕೆಟ್
207 ರನ್‌ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ 71 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದಾದ ನಂತರ, ರಿಯಾನ್ ಪರಾಗ್ ಮತ್ತು ಶಿಮ್ರಾನ್ ಹೆಟ್ಮೆಯರ್ ಆರನೇ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ಹಂಚಿಕೊಂಡು ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ವೇಳೆ ರಿಯಾನ್ ಪರಾಗ್, ಮೊಯಿನ್ ಅಲಿ ಎಸೆದ 13ನೇ ಓವರ್‌ನಲ್ಲಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿ ಪಂದ್ಯವನ್ನು ಇನ್ನಷ್ಟು ರೋಮಾಂನಚನಕಾರಿ ಮಾಡಿದರು. ಈ ಜೊತೆಯಾಟವನ್ನು ಹರ್ಷಿತ್ ರಾಣಾ 29 ರನ್ ಗಳಿಸಿ ಔಟಾದ ಹೆಟ್ಮೆಯರ್ ಅವರನ್ನು ಔಟ್ ಮಾಡುವ ಮೂಲಕ ಮುರಿದರು. ಇದಾದ ಸ್ವಲ್ಪ ಸಮಯದ ನಂತರ, ಪರಾಗ್ರನ್ನು ಔಟ್ ಮಾಡುವ ಮೂಲಕ ಹರ್ಷಿತ್ ಮತ್ತೊಂದು ಆಘಾತ ನೀಡಿದರು. ಅಂತಿಮವಾಗಿ ಪರಾಗ್ ತಮ್ಮ ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗದೆ 95 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
IPL 2025: 6,6,6,6,6,6..! ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ರಿಯಾನ್ ಪರಾಗ್; ವಿಡಿಯೋ
ಕೊನೆಯ ಓವರ್ ಥ್ರಿಲ್ಲರ್
ಕೊನೆಯ ಓವರ್‌ನಲ್ಲಿ ರಾಜಸ್ಥಾನ ಗೆಲ್ಲಲು 22 ರನ್‌ಗಳ ಅಗತ್ಯವಿತ್ತು. ರಾಜಸ್ಥಾನ್ ಪರ ಶುಭಂ ದುಬೆ ಮತ್ತು ಜೋಫ್ರಾ ಆರ್ಚರ್ ಕ್ರೀಸ್‌ನಲ್ಲಿದ್ದರೆ, ಕೆಕೆಆರ್ ಪರ ವೈಭವ್ ಅರೋರಾ ಕೊನೆಯ ಓವರ್ ಬೌಲ್ ಮಾಡಿದರು. ಆರ್ಚರ್ ಮೊದಲ ಎಸೆತದಲ್ಲಿ ಎರಡು ರನ್ ಮತ್ತು ಎರಡನೇ ಎಸೆತದಲ್ಲಿ ಒಂದು ರನ್ ಗಳಿಸಿದರು. ಈ ವೇಳೆ ಸ್ಟ್ರೈಕ್ಗೆ ಬಂದ ಶುಭಂ ಮೂರನೇ ಎಸೆತದಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕನೇ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿದರು. ಇದಾದ ನಂತರ ಅವರು ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಈಗ ರಾಜಸ್ಥಾನಕ್ಕೆ ಒಂದು ಎಸೆತದಲ್ಲಿ ಮೂರು ರನ್‌ಗಳು ಬೇಕಾಗಿದ್ದವು. ವೈಭವ್ ಚೆಂಡಿನಲ್ಲಿ ಒಂದು ರನ್ ಕದ್ದ ಶುಭಮ್ ಎರಡನೇ ರನ್ ತೆಗೆದುಕೊಳ್ಳಲು ಓಡಿದರು, ಆದರೆ ರಿಂಕು ಸಿಂಗ್ ಎಸೆತದಲ್ಲಿ ರನೌಟ್ ಆದರು. ಈ ಮೂಲಕ ಕೆಕೆಆರ್ ರೋಮಾಂಚಕ ಗೆಲುವು ದಾಖಲಿಸಿತು.
ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ 34 ರನ್ ಗಳಿಸಿದರೆ, ಶುಭಂ ದುಬೆ 14 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 25 ರನ್ ಗಳಿಸಿ ಅಜೇಯರಾಗುಳಿದರು. ಆರ್ಚರ್ 12 ರನ್ ಗಳಿಸಿ ಔಟಾದರು. ವೈಭವ್ ಸೂರ್ಯವಂಶಿ ನಾಲ್ಕು ರನ್ ಗಳಿಸಿದರೆ, ಕುನಾಲ್ ಸಿಂಗ್ ರಾಥೋಡ್, ಧ್ರುವ್ ಜುರೆಲ್ ಮತ್ತು ವನಿಂದು ಹಸರಂಗಗೆ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಕೆಕೆಆರ್ ಪರ ಮೊಯಿನ್, ಹರ್ಷಿತ್ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ವೈಭವ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ